ಲವರ್​ ಜತೆ ಸೇರಿ ನನ್ನನ್ನು ಕೊಲ್ಲಲು ಪತ್ನಿ ಸಂಚು ಮಾಡಿದ್ದಾಳೆ ಕಾಪಾಡಿ ಸರ್​ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ ಗಂಡ! Please save me  
ದೇಶ

ಲವರ್​ ಜತೆ ಸೇರಿ ನನ್ನನ್ನು ಕೊಲ್ಲಲು ಪತ್ನಿ ಸಂಚು ಮಾಡಿದ್ದಾಳೆ ಕಾಪಾಡಿ ಸರ್​ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ ಗಂಡ! Please save me

ಪ್ರಮುಖ ಮುಖ್ಯಾಂಶಗಳು

  • ಹೆಂಡತಿ ಮತ್ತು ಪ್ರಿಯಕರನಿಂದ ಜೀವ ಬೆದರಿಕೆ ಇದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಮೀರತ್ ಯುವಕ
  • ಪತ್ನಿಯಿಂದಲೇ ಪ್ರಾಣಕ್ಕೆ ಕಂಟಕ ಎಂದು ತನಗೆ ರಕ್ಷಣೆ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದ ಪತಿ
  • ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಗಂಡನನ್ನೇ ಮುಗಿಸಲು ಸಂಚು ರೂಪಿಸಿದ ಹೆಂಡತಿ ಹಾಗೂ ಪ್ರಿಯಕರ
  • ವರದಕ್ಷಿಣೆ ಸುಳ್ಳು ಕೇಸ್ ಹಾಕಿ ಕೊಲೆ ಬೆದರಿಕೆ ಹಾಕಿದ ಪತ್ನಿ ವಿರುದ್ಧ ಪತಿಯ ಗಂಭೀರ ಆರೋಪ
ಲಖನೌ: ಹೆಂಡತಿ ಮತ್ತು ಆಕೆಯ ಪ್ರಿಯಕರ ಸೇರಿ ನನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಉತ್ತರ ಪ್ರದೇಶದ ಮೀರತ್ ಮೂಲದ ಯುವಕನೊಬ್ಬ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ದಯವಿಟ್ಟು ನನ್ನನ್ನು ಕಾಪಾಡಿ ( Please save me ) ಎಂದು ಮನವಿ ಮಾಡಿದ್ದಾನೆ.
ತನ್ನ ಪತ್ನಿ, ಮತ್ತೊಬ್ಬ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು ನನ್ನನ್ನು ಮುಗಿಸಲು ಸಂಚು ಹೆಣೆಯುತ್ತಿದ್ದಾರೆ ಎಂದು ಆತ ಗಂಭೀರ ಆರೋಪ ಮಾಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನೂ ವಿಚಾರಣೆಗೊಳಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮೀರತ್ ನಗರದ ಸೂರ್ಯೋದಯ ಕಾಲೋನಿಯ ನಿವಾಸಿ ತನ್ನ ಪತ್ನಿಯ ವಿರುದ್ಧ ದೂರು ದಾಖಲಿಸಿದ್ದಾನೆ. ಫುಡ್ ಡೆಲಿವರಿ ಸಂಸ್ಥೆಯಲ್ಲಿ ಕೆಲಸ ಮಾಡುವ ಸಂತ್ರಸ್ತ, 2025ರ ಜೂನ್ 22 ರಂದು ಮೆಡಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದನು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿ ನಡುವೆ ಕಲಹ ಆರಂಭವಾಗಿದೆ. ಹೀಗೆ ಗಂಡ-ಹೆಂಡತಿ ನಡುವೆ ನಿರಂತರವಾಗಿ ಕಲಹ ನಡೆಯುತ್ತಲೇ ಇತ್ತು.
ಹೀಗಿರುವಾಗ, ಪತ್ನಿ ನಿರಂತರವಾಗಿ ಮತ್ತೊಬ್ಬ ಯುವಕನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದುದನ್ನು ಗಂಡ ಪ್ರಶ್ನಿಸಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ಮನೆ ತೊರೆದು ಪ್ರಿಯಕರನೊಂದಿಗೆ ಸೇರಿ ತನ್ನ ಗಂಡನಿಗೆ ಕೊಲೆ ಬೆದರಿಕೆ ಹಾಕಲು ಶುರು ಮಾಡಿದಳು. ಅಷ್ಟೇ ಅಲ್ಲದೆ ಪತ್ನಿಯು ಕುಟುಂಬಕ್ಕೆ ವಿಷ ಪ್ರಾಶನ ಮಾಡಲು ಯತ್ನಿಸಿ ಬಳಿಕ ಗಂಡನ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳದ ಸುಳ್ಳು ದೂರು ನೀಡಿದ್ದಾಳೆ ಎಂದು ಯುವಕ ಆರೋಪಿಸಿದ್ದಾನೆ.
ಜುಲೈ 14 ರಂದು ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಅಂತಾನೂ ಯುವಕ ಆರೋಪ ಮಾಡಿದ್ದಾನೆ. ಜುಲೈ 12 ರಂದು ಪತ್ನಿ ಅಪರಿಚಿತ ವ್ಯಕ್ತಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿರುವುದನ್ನು ಕಂಡು ವಿಡಿಯೋ ಚಿತ್ರೀಕರಿಸಿದ್ದು ಅವರು ಅಪಘಾತಕ್ಕೀಡಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈಗಾಗಲೇ ತನ್ನ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಾಗಿರುವ ಕಾರಣ ಪೊಲೀಸರು ತನ್ನ ದೂರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಸಂತ್ರಸ್ತ ಯುವಕ ಅಳಲು ತೋಡಿಕೊಂಡಿದ್ದಾನೆ.
ಇತ್ತೀಚೆಗೆ ನಡೆಯುತ್ತಿರುವ ಗಂಡಂದಿರ ಹತ್ಯೆ ಪ್ರಕರಣಗಳನ್ನು ಉಲ್ಲೇಖಿಸಿರುವ ಯುವಕ ತನಗೆ ಜೀವ ಭಯವಿದ್ದು ಸೂಕ್ತ ಪೊಲೀಸ್ ರಕ್ಷಣೆ ಮತ್ತು ನ್ಯಾಯಸಮ್ಮತ ತನಿಖೆಗೆ ಆಗ್ರಹಿಸಿದ್ದಾನೆ. ಈ ಕುರಿತು ಪ್ರತಿಕ್ರಿಯಿಸಿರುವ ಮೀರತ್ ಸಿಒ ಸಿವಿಲ್ ಲೈನ್ಸ್ ವಿಶ್ವ ಜ್ಯೋತಿ ರಾಯ್ ಅವರು ಯುವಕ ನೀಡಿದ ದೂರನ್ನು ಮೆಡಿಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು ತನಿಖೆಯ ವರದಿ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ, (ಏಜೆನ್ಸೀಸ್​).