ಹರೀಶ್ ರಾಣಾಗೆ ದಯಾಮರಣ ಕರುಣಿಸಿದ ಸುಪ್ರೀಂ ಕೋರ್ಟ್​  
ದೇಶ

ನನ್ನನ್ನು ದಯವಿಟ್ಟು ಕ್ಷಮಿಸಿ..:ಸುಪ್ರೀಂ ಕೋರ್ಟ್​ನಿಂದ ದಯಾಮರಣ ಪಡೆದ ಹರೀಶ್​ ರಾಣಾ; ವಿಡಿಯೋ ನೋಡಿ ಭಾವುಕರಾದ ಜನ | Harish Rana

ಪ್ರಮುಖ ಮುಖ್ಯಾಂಶಗಳು

  • 13 ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದ ಹರೀಶ್ ರಾಣಾ
  • ಹರೀಶ್ ರಾಣಾಗೆ ದಯಾಮರಣ ಕರುಣಿಸಿದ ಸುಪ್ರೀಂ ಕೋರ್ಟ್​
  • ಹರೀಶ್ ರಾಣಾನ ಕೊನೆ ಕ್ಷಣದ ವಿಡಿಯೋ ನೋಡಿ ಕಣ್ಣಿರಿಟ್ಟ ನೆಟ್ಟಿಗರು
ನವದೆಹಲಿ: ಒಂದಲ್ಲ, ಎರಡಲ್ಲ ಬರೊಬ್ಬರಿ 13 ವರ್ಷಗಳಿಂದ ಹಾಸಿಗೆ ಹಿಡಿದು ಮಲಗಿದ್ದ ಹರೀಶ್​ ರಾಣಾ (Harish Rana) ಎಂಬ ಯುವಕನಿಗೆ ಸುಪ್ರೀಂ ಕೋರ್ಟ್​ ದಯಾಮರಣವನ್ನು ಕರುಣಿಸಿದ ಸುದ್ದಿ ದೇಶದಾದ್ಯಂತ ಕಾಡ್ಗಿಚ್ಚಿನಂತೆ ಹರಡಿತ್ತು.
ಸವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಹರೀಶನಿಗೆ ದಯಾ ಮರಣ ಕರುಣಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, ವಿಡಿಯೋ ನೋಡಿದ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರೂರುತ್ತಿದೆ ಎಂದರೆ ಸುಳ್ಳಲ್ಲ.

ವಿಡಿಯೋನಲ್ಲಿ ಏನಿದೆ?

ವೈರಲ್​ ಆಗುತ್ತಿರುವ ವಿಡಿಯೋನಲ್ಲಿ ಹರೀಶನ ಹತ್ತಿರ ಒಬ್ಬ ಮಹಿಳಾ ವೈದ್ಯೆ ಹತ್ತಿರ ನಿಂತಿದ್ದು, ಹರೀಶನ ನೆತ್ತಿಯನ್ನು ಸವರುತ್ತಾ, ಎಲ್ಲರ ಹತ್ತಿರ ನೀನು ಕ್ಷಮೆ ಕೇಳು ಹಾಗೆ ಎಲ್ಲರನ್ನು ನೀನು ಕ್ಷಮಿಸು ಎಂದು ಎಂದು ಹೇಳುವುದು ಕೇಳಿಸುತ್ತದೆ. ಹರೀಶ ಸಹ ಏನನ್ನೋ ಮಾತನಾಡಲು ಪ್ರಯತ್ನಿಸುತ್ತಿದ್ದು, ಆದರೆ ಅವನ ದೇಹದ ಸ್ಥಿತಿ ಅವನ ಮಾತು ಇತರರಿಗೆ ಕೇಳದಂತೆ ತಡೆದಿದೆ. ಈ ದೃಶ್ಯವನ್ನು ನೋಡುವ ಪ್ರತಿಯೊಬ್ಬ ವೀಕ್ಷಕ ಸಹ ಕಣ್ಣೀರು ಸುರಿಸುವುದಂತು ಸತ್ಯವಾಗಿದೆ.
ಒಂದು ಅಫಘಾತ ಜೀವನವನ್ನೇ ಬದಲಿಸಿತು
2013ರ ಆಗಸ್ಟ್ 20, ರಕ್ಷಾಬಂಧನ ಹಬ್ಬದ ದಿನವೇ ದುರಂತ ಸಂಭವಿಸಿತು. ಮೂಲತಃ ದೆಹಲಿಯವರಾದ ಹರೀಶ್ ರಾಣಾ ಆಗ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ತಾವು ವಾಸವಿದ್ದ ಹಾಸ್ಟೆಲ್​ನ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದರು.
ಈ ಅಪಘಾತದಿಂದಾಗಿ ಅವರ ತಲೆಗೆ ತೀವ್ರವಾದ ಪೆಟ್ಟಾಯಿತು. 100% ದೈಹಿಕ ಅಂಗವೈಕಲ್ಯಕ್ಕೆ ತುತ್ತಾದರು. ಇಡೀ ಶರೀರ ಪಾರ್ಶ್ವವಾಯುಗೆ ತುತ್ತಾಯಿತು. ಅಪಘಾತದ ನಂತರ ಅವರು ಕಣ್ಣು ಬಿಡಲು ಅಥವಾ ಕೈಕಾಲುಗಳನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದರು. ಅಂದಿನಿಂದ ಅವರು ಶಾಶ್ವತವಾಗಿ ‘ವೆಜಿಟೇಟಿವ್ ಸ್ಟೇಟ್’ (ಪ್ರಜ್ಞಾಹೀನ ಸ್ಥಿತಿ) ನಲ್ಲಿದ್ದಾರೆ ಮತ್ತು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದೀರ್ಘಕಾಲದಿಂದ ಚಿಕಿತ್ಸೆ ನೀಡಲಾಗುತ್ತಿದೆ.

ಸುಪ್ರೀಂ ಕೋರ್ಟ್​ ಏನು ಹೇಳಿತು?

ಮಗನಿಗೆ ಚಿಕಿತ್ಸೆ ನೀಡಲು ತಮ್ಮ ಬಳಿ ಆರ್ಥಿಕ ಬಲವಿಲ್ಲ, ಹಾಗೆಯೇ ಏನೇ ಚಿಕಿತ್ಸೆ ನೀಡಿದರೂ ತಮ್ಮ ಮಗ ಮೊದಲಿನಂತಾಗುವುದಿಲ್ಲ ಎಂದು ತಿಳಿದ ಹರೀಶನ ಪಾಲಕರು ಸುಪ್ರೀಂ ಕೋರ್ಟ್​ನಲ್ಲಿ ದಯಾಮರಣ ಕೋರಿ ಅರ್ಜಿಯನ್ನು ಸಲ್ಲಿಸಿದರು.
ಹಲವಾರು ವೈದ್ಯಕೀಯ ಮಂಡಳಿಗಳ ವರದಿಗಳು ಮತ್ತು ಕುಟುಂಬದ ಒಪ್ಪಿಗೆಯನ್ನು ಪರಿಗಣಿಸಿದ ನಂತರ ಸುಪ್ರೀಂ ಕೋರ್ಟ್ ಹರೀಶ್ ರಾಣಾ ಅವರ ಪ್ರಕರಣದಲ್ಲಿ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ನೀಡಿತು.
ಹರೀಶ್ ಅವರನ್ನು ದೆಹಲಿಯ ಏಮ್ಸ್‌ನ ಉಪಶಾಮಕ ಆರೈಕೆ ವಿಭಾಗಕ್ಕೆ ಸೇರಿಸಬೇಕೆಂದು ಮತ್ತು ಅವರ ಜೀವಿತಾವಧಿಯ ಆರೈಕೆಗಾಗಿ ಸಮಗ್ರ ಯೋಜನೆಯನ್ನು ಅಭಿವೃದ್ಧಿಪಡಿಸಬೇಕೆಂದು ನ್ಯಾಯಾಲಯವು ನಿರ್ದೇಶಿಸಿತು.

ಜೀವರಕ್ಷಕ ಉಪಕರಣಗಳನ್ನು ತೆಗೆದುಹಾಕಿ

ವೈದ್ಯರ ಪ್ರಕಾರ, ನ್ಯಾಯಾಲಯದ ಆದೇಶದ ನಂತರ, ಹರೀಶ್ ಅವರ ಜೀವರಕ್ಷಕ ವ್ಯವಸ್ಥೆಗಳನ್ನು ಕ್ರಮೇಣ ತೆಗೆದುಹಾಕಲಾಗುವುದು. ರೋಗಿಯ ಘನತೆಯನ್ನು ಕಾಪಾಡಿಕೊಳ್ಳಲು ಈ ಪ್ರಕ್ರಿಯೆಯನ್ನು ಬಹಳ ಸೂಕ್ಷ್ಮ ಮತ್ತು ಮಾನವೀಯ ರೀತಿಯಲ್ಲಿ ಕೈಗೊಳ್ಳಲಾಗುವುದು. PEG ಟ್ಯೂಬ್ ಮೂಲಕ ಒದಗಿಸಲಾದ ಪೌಷ್ಠಿಕಾಂಶವು ವೈದ್ಯಕೀಯ ಚಿಕಿತ್ಸೆಯ ವರ್ಗಕ್ಕೆ ಬರುತ್ತದೆ ಮತ್ತು ಅದನ್ನು ತೆಗೆದುಹಾಕುವುದು ನಿಷ್ಕ್ರಿಯ ದಯಾಮರಣಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿದೆ,(ಏಜನ್ಸೀಸ್​).