Parle Products | ಮೆಲೋನಿಗೆ ಮೋದಿ ಮೆಲೊಡಿ ಉಡುಗೊರೆ: 
ದೇಶ

ಊಹೆಯೂ ಇರಲಿಲ್ಲ, ಬೆಳಗ್ಗಿನಿಂದಲೇ ಆರ್ಡರ್ಸ್ ಸುರಿಮಳೆ!.. ಮೋದಿ ಗಿಫ್ಟ್ ನೀಡಿದ ಬೆನ್ನಲ್ಲೇ ಪಾರ್ಲೆ ಬಾಸ್ ರಿಯಾಕ್ಷನ್ ವೈರಲ್! | Parle Products

Parle Products: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಇಟಲಿ ಪ್ರವಾಸದ ವೇಳೆ ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಮೆಲೊಡಿ (Melody) ಟಾಫಿ ಉಡುಗೊರೆಯಾಗಿ ನೀಡುವ ಮೂಲಕ ಗುರುವಾರ ಒಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರೂ ನಾಯಕರ ಹೆಸರನ್ನು ಸೇರಿಸಿ ಮೆಲೋಡಿ (Melodi - Meloni + Modi) ಎಂದು ಕರೆಯಲಾಗುವ ಜನಪ್ರಿಯ ನಿಕ್‌ನೇಮ್ ಇರುವ ಹಿನ್ನೆಲೆಯಲ್ಲಿ, ಈ ಸಣ್ಣ ಟಾಫಿ ಬಾಕ್ಸ್ ಆನ್‌ಲೈನ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಮೆಲೊಡಿ ಟಾಫಿ ತಯಾರಕ ಕಂಪನಿಯಾದ ಪಾರ್ಲೆ ಪ್ರಾಡಕ್ಟ್ಸ್‌ಗೆ ಈ ಘಟನೆ ಸಂಪೂರ್ಣ ಅಚ್ಚರಿ ಮೂಡಿಸಿದ್ದು, ಈ ಕುರಿತು ಇಂಡಿಯಾ ಟುಡೇ ಜೊತೆ ಮಾತನಾಡಿದ ಪಾರ್ಲೆ ಪ್ರಾಡಕ್ಟ್ಸ್‌ನ ಉಪಾಧ್ಯಕ್ಷ ಮಯಾಂಕ್ ಶಾ, ನಮಗೆ ಈ ಬಗ್ಗೆ ಯಾವುದೇ ಮುನ್ಸೂಚನೆ ಇರಲಿಲ್ಲ. ಇದು ನಮಗೆ ಅತ್ಯಂತ ಆಹ್ಲಾದಕರ ಅಚ್ಚರಿ ತಂದಿದೆ. ನಮ್ಮ ಬ್ರ್ಯಾಂಡ್‌ಗೆ ಜಾಗತಿಕ ವೇದಿಕೆ ಕಲ್ಪಿಸಿಕೊಟ್ಟ ಗೌರವಾನ್ವಿತ ಪ್ರಧಾನಮಂತ್ರಿಯವರಿಗೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಬೆಳಗ್ಗಿನಿಂದಲೇ ಬೇಡಿಕೆಯಲ್ಲಿ ಭಾರಿ ಜಿಗಿತ

ಪ್ರಧಾನಿಯವರ ಈ ಉಡುಗೊರೆಯ ಸುದ್ದಿ ಹರಡುತ್ತಿದ್ದಂತೆ ಆನ್‌ಲೈನ್‌ನಲ್ಲಿ ಮೆಲೊಡಿ ಟಾಫಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಕ್ವಿಕ್ ಕಾಮರ್ಸ್ (Quick Commerce) ಮತ್ತು ಇತರೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬೆಳಗ್ಗಿನಿಂದಲೇ ಭಾರಿ ಪ್ರಮಾಣದ ಆರ್ಡರ್‌ಗಳು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಬೆಳವಣಿಗೆ ಮತ್ತಷ್ಟು ವೇಗವಾಗಿರಲಿದೆ ಎಂದು ಶಾ ತಿಳಿಸಿದ್ದಾರೆ. ಈಗಾಗಲೇ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಫಿ ಬ್ರ್ಯಾಂಡ್ ಆಗಿರುವ ಮೆಲೊಡಿ, ಈ ಜಾಗತಿಕ ಪ್ರಚಾರದಿಂದಾಗಿ ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ತನ್ನ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲಿದೆ ಎಂದು ಕಂಪನಿ ನಂಬಿದೆ.
ಪಾರ್ಲೆ ಕಂಪನಿಯು ಈಗಾಗಲೇ ಮೆಲೊಡಿಯನ್ನು ವಿಶ್ವದ 200ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ. ಸದ್ಯ ಸೃಷ್ಟಿಯಾಗಿರುವ ಜಾಗತಿಕ ಕ್ರೇಜ್‌ನಿಂದಾಗಿ ವಿದೇಶಗಳಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಮುಂಬರುವ ದಿನಗಳಲ್ಲಿ ರಫ್ತು ಮಾಡುವುದರ ಜೊತೆಗೆ ಜಾಗತಿಕ ಮಾರುಕಟ್ಟೆಗಳಲ್ಲೇ ನೇರವಾಗಿ ಮೆಲೊಡಿ ಟಾಫಿ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸುವ ಆಲೋಚನೆಯೂ ಕಂಪನಿಗಿದೆ ಎಂದು ತಿಳಿದುಬಂದಿದೆ.

ಬೇಡಿಕೆ ಹೆಚ್ಚಿದ್ರೂ ಬೆಲೆ ಏರಿಕೆ ಇಲ್ಲ

ಟಾಫಿಗೆ ಭಾರಿ ಬೇಡಿಕೆ ಬಂದಿದ್ದರೂ ಗ್ರಾಹಕರು ಹೆಚ್ಚಿನ ಹಣ ತೆರುವ ಆತಂಕ ಪಡಬೇಕಾಗಿಲ್ಲ ಎಂದು ಮಯಾಂಕ್ ಶಾ ಸ್ಪಷ್ಟಪಡಿಸಿದ್ದಾರೆ. ಬೇಡಿಕೆ ಎಷ್ಟೇ ಹೆಚ್ಚಾದರೂ ಮೆಲೊಡಿ ಟಾಫಿಯ ಬೆಲೆಯನ್ನು ಏರಿಕೆ ಮಾಡುವ ಯಾವುದೇ ಉದ್ದೇಶ ಕಂಪನಿಗೆ ಇಲ್ಲ ಎಂದಿದ್ದಾರೆ. ಉತ್ಪನ್ನದಲ್ಲಿ ಹೊಸ ಪ್ರಯೋಗಗಳ ಬಗ್ಗೆ ಕೇಳಿದಾಗ, ಮೆಲೊಡಿಯ ಮೂಲವನ್ನು ಹಾಗೇ ಉಳಿಸಿಕೊಳ್ಳಲಾಗುವುದು ಎಂದು ಶಾ ತಿಳಿಸಿದ್ದಾರೆ. ಮೆಲೊಡಿ ಅಂದ್ರೆನೇ ಚಾಕೊಲೇಟಿ. ಇದು ತಲೆಮಾರುಗಳಿಂದ ಪ್ರೀತಿಪಾತ್ರವಾದ ಬ್ರ್ಯಾಂಡ್ ಎನ್ನುತ್ತಾ, ಕಂಪನಿಯ ಐಕಾನಿಕ್ ಲೈನ್ ಆದ ಮೆಲೊಡಿ ಖಾವೋ, ಖುದ್ ಜಾನ್ ಜಾವೋ ಅನ್ನು ನಗುನಗುತ್ತಾ ನೆನಪಿಸಿಕೊಂಡಿದ್ದಾರೆ.

ಷೇರು ಮಾರುಕಟ್ಟೆ ಪ್ರವೇಶದ ಯೋಚನೆ ಇಲ್ಲ

ಪಾರ್ಲೆ ಪ್ರಾಡಕ್ಟ್ಸ್ ಕಂಪನಿಯು ಶೀಘ್ರದಲ್ಲೇ ಷೇರು ಮಾರುಕಟ್ಟೆ ಪ್ರವೇಶಿಸಲಿದೆ ಎಂಬ ವದಂತಿಗಳನ್ನು ಶಾ ತಳ್ಳಿಹಾಕಿದ್ದಾರೆ. ಸದ್ಯಕ್ಕೆ ಕಂಪನಿಯನ್ನು ಸಾರ್ವಜನಿಕವಾಗಿ ಪಟ್ಟಿ ಮಾಡುವ ಯಾವುದೇ ಯೋಜನೆಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಸಿಕ್ಕಿರುವ ಈ ಅನಿರೀಕ್ಷಿತ ಯಶಸ್ಸು ಮತ್ತು ಹೆಮ್ಮೆಯ ಕ್ಷಣವನ್ನು ಪಾರ್ಲೆ ಕಂಪನಿ ಆನಂದಿಸುತ್ತಿದೆ(ಏಜೆನ್ಸೀಸ್​​).