Tamil Nadu Politics | ವಿಜಯ್ ಸರ್ಕಾರಕ್ಕೆ ಬಿಗ್ ಶಾಕ್!
Tamil Nadu Politics: ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ವಿಶ್ವಾಸಮತ ಯಾಚನೆ ವೇಳೆ ದೊಡ್ಡ ಮಟ್ಟದ ರೆಸಾರ್ಟ್ ರಾಜಕಾರಣ ಮತ್ತು ಶಾಸಕರ ಕುದುರೆ ವ್ಯಾಪಾರ ನಡೆದಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ರಾಜ್ಯದಲ್ಲಿ ತಕ್ಷಣವೇ ರಾಷ್ಟ್ರಪತಿ ಆಳ್ವಿಕೆ ಹೇರಲು ಮತ್ತು ಈ ಇಡೀ ಪ್ರಕ್ರಿಯೆಯ ಬಗ್ಗೆ ಸಿಬಿಐ (CBI) ತನಿಖೆ ನಡೆಸಲು ಅರ್ಜಿದಾರರು ಒತ್ತಾಯಿಸಿದ್ದಾರೆ.
ಮಧುರೈ ನಿವಾಸಿ ಕೆ.ಕೆ. ರಮೇಶ್ ಎಂಬುವವರು ಈ ಅರ್ಜಿ ಸಲ್ಲಿಸಿದ್ದು, ವಿಜಯ್ ನೇತೃತ್ವದ ಸರ್ಕಾರವು ಪ್ರಜಾಪ್ರಭುತ್ವದ ತತ್ವಗಳನ್ನು ಗಾಳಿಗೆ ತೂರಿ, ಅನೈತಿಕ ರಾಜಕೀಯ ಪದ್ಧತಿಗಳ ಮೂಲಕ ಅಧಿಕಾರ ಹಿಡಿದಿದೆ, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಆ ಬಳಿಕ ಹಣದ ಆಮಿಷ ಹಾಗೂ ರಾಜಕೀಯ ಒತ್ತಡ ಹೇರಿ ಶಾಸಕರ ಬೆಂಬಲ ಪಡೆದು ವಿಶ್ವಾಸಮತ ಗೆಲ್ಲಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ತಮಿಳುನಾಡು ವಿಧಾನಸಭೆಯಲ್ಲಿ ಇತರ ಪಕ್ಷಗಳ ಕೆಲವು ಶಾಸಕರು ಕುದುರೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಟಿವಿಕೆ ಪಕ್ಷವು ಕೆಲವು ಶಾಸಕರಿಗೆ ಭಾರಿ ಪ್ರಮಾಣದ ಹಣವನ್ನು ನೀಡಿದೆ. ಇನ್ನು ಕೆಲವು ಶಾಸಕರು ಹಣ ಹಾಗೂ ಇತರ ಸೌಲಭ್ಯಗಳ ಆಸೆಗಾಗಿ ಪಕ್ಷದ ವಿಪ್ ನಿರ್ದೇಶನಗಳನ್ನೇ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆ ಬಳಿಕ ಸಿಪಿಐ, ಸಿಪಿಎಂ, ವಿಸಿಕೆ ಸೇರಿದಂತೆ ಎಡಪಕ್ಷಗಳು ಮತ್ತು ಕೆಲವು ಪಕ್ಷೇತರ ಶಾಸಕರು ನೀಡಿದ ಬೇಷರತ್ ಬೆಂಬಲದಿಂದ ಬಹುಮತದ ಗಡಿ ದಾಟಿ ಸರ್ಕಾರ ರಚಿಸಿತ್ತು. ತದನಂತರ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಆದರೆ, ಆಡಳಿತ ಪಕ್ಷವು ಶಾಸಕರ ಬೆಂಬಲವನ್ನು ಪಡೆದ ರೀತಿಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಈ ವಿಶ್ವಾಸಮತ ಪ್ರಕ್ರಿಯೆಯು ಸಂಪೂರ್ಣವಾಗಿ ಭ್ರಷ್ಟಾಚಾರದಿಂದ ಕೂಡಿದೆ ಎಂದು ಆರೋಪಿಸಿರುವ ರಮೇಶ್, ಶಾಸಕರ ಖರೀದಿ ಪ್ರಕ್ರಿಯೆಯ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೋರಿದ್ದಾರೆ. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ, ಸಿಬಿಐ ಮತ್ತು ತಮಿಳುನಾಡು ಸರ್ಕಾರವನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಕೋರಿರುವ ಅರ್ಜಿದಾರರು, ತನಿಖೆ ಪೂರ್ಣಗೊಳ್ಳುವವರೆಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ವಿಶ್ವಾಸಮತದ ವೇಳೆ ನಡೆದಿರುವ ಈ ಅಕ್ರಮಗಳಿಂದಾಗಿ ಸಾಂವಿಧಾನಿಕ ನೈತಿಕತೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಭಾರಿ ಧಕ್ಕೆಯಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ(ಏಜೆನ್ಸೀಸ್).