Sonia Gandhi : ಭಾರತದ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ವಿಕಾಸ್ ತ್ರಿಪಾಠಿ ಎನ್ನುವವರು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೊಗ್ನೆ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ. ಸೋನಿಯಾ ಗಾಂಧಿ 1983 ರಲ್ಲಿ ಭಾರತೀಯ ಪೌರತ್ವ ಪಡೆದರಾದರೂ, 1980ರಲ್ಲಿಯೇ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇತ್ತು ಎಂದು ಅರ್ಜಿದಾರ ತ್ರಿಪಾಠಿ ಅವರ ಆಕ್ಷೇಪ ವ್ಯಕ್ತಪಡಿಸಿದ್ದು, ಸೋನಿಯಾ ಹೆಸರನ್ನು 1980ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಯಿತು. 1982ರಲ್ಲಿ ತೆಗೆದುಹಾಕಲಾಯಿತು. ತದನಂತರ ಮತ್ತೆ 1983ರಲ್ಲಿ ಸೇರ್ಪಡೆ ಮಾಡಲಾಯಿತು. ಪೌರತ್ವ ಪಡೆಯುವ ಮುನ್ನವೇ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡುವುದಕ್ಕಾಗಿ ಕೆಲವು ನಕಲಿ ದಾಖಲೆಗಳನ್ನು ಸಲ್ಲಿಸಿ ಅಪರಾಧ ಎಸಗಿದ್ದಾರೆ ಎನ್ನುವುದು ತ್ರಿಪಾಠಿ ಅವರ ವಾದವಾಗಿದ್ದು, ಎಫ್‌ಐಆರ್ ದಾಖಲಿಸಲು ಆದೇಶ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಈ ಹಿಂದೆ ಅರ್ಜಿ ತಿರಸ್ಕರಿಸಿದ್ದ ನ್ಯಾಯಾಧೀಶ ಚೌರಾಸಿಯಾ ಅವರು ನ್ಯಾಯಾಲಯ ಇಂತಹ ಪ್ರಕರಣಗಳ ವಿಚಾರಣೆಗೆ ಮುಂದಾದರೆ ಅದು ಸಾಂವಿಧಾನಿಕ ಪ್ರಾಧಿಕಾರಗಳಿಗೆ ವಹಿಸಿಕೊಡಲಾದ ಅಧಿಕಾರದ ಅನಗತ್ಯ ಉಲ್ಲಂಘನೆಯಾಗಲಿದ್ದು, ಸಂವಿಧಾನದ 329ನೇ ವಿಧಿಯ ಉಲ್ಲಂಘನೆಯಾಗುತ್ತದೆ ಎಂದು ಹೇಳಿದ್ದರು.(ಏಜೆನ್ಸೀಸ್).