22 ಲಕ್ಷ ಯುವಕರ ಭವಿಷ್ಯದ ಜೊತೆ ಆಟ! ನೀಟ್ ಪೇಪರ್ ಲೀಕ್ ಹಗರಣಕ್ಕೆ ರಾಹುಲ್ ಆಕ್ರೋಶ; ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಜಾಕ್ಕೆ ಆಗ್ರಹ! 
ದೇಶ

22 ಲಕ್ಷ ಯುವಕರ ಭವಿಷ್ಯದ ಜೊತೆ ಆಟ! ನೀಟ್ ಪೇಪರ್ ಲೀಕ್ ಹಗರಣಕ್ಕೆ ರಾಹುಲ್ ಆಕ್ರೋಶ; ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಜಾಕ್ಕೆ ಆಗ್ರಹ! Rahul Gandhi

ನವದೆಹಲಿ: ದೇಶಾದ್ಯಂತ ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿಗಳ ನಿದ್ದೆಗೆಡಿಸಿರುವ ನೀಟ್ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ರದ್ದತಿ ಹಗರಣವು ಈಗ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಈ ಕುರಿತು ಶನಿವಾರ ಸಾಮಾಜಿಕ ಜಾಲತಾಣ 'X' ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi), ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಮತ್ತು ಈ ಹಗರಣದ ಕಲಿಗಳನ್ನು ಜೈಲಿಗಟ್ಟಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

"ವಾಟ್ಸಾಪ್‌ನಲ್ಲಿ ಸೋರಿಕೆಯಾಗಿತ್ತು ನೀಟ್ ಪೇಪರ್!"

ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ರಾಹುಲ್ ಗಾಂಧಿ, ಪರೀಕ್ಷೆ ನಡೆಯುವುದಕ್ಕೆ ಎರಡು ದಿನಗಳ ಮುಂಚೆಯೇ ನೀಟ್ ಪ್ರಶ್ನೆಪತ್ರಿಕೆ ವಾಟ್ಸಾಪ್‌ನಲ್ಲಿ ಸೋರಿಕೆಯಾಗಿತ್ತು ಎಂಬುದು ಇಡೀ ದೇಶಕ್ಕೆ ಗೊತ್ತು. ಆದರೆ, ಈ ಇಡೀ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನಕ್ಕೆ ಶರಣಾಗಿದ್ದಾರೆ. ದೇಶದ ಶಿಕ್ಷಣ ವ್ಯವಸ್ಥೆಯ ಆಧಾರಸ್ತಂಭವನ್ನೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಧ್ವಂಸಗೊಳಿಸಿದ್ದಾರೆ. 22 ಲಕ್ಷ ಯುವಕರಿಗೆ ಕೇಂದ್ರ ಸರ್ಕಾರ ದ್ರೋಹ ಎಸಗಿದೆ ಎಂದು ಆರೋಪಿಸಿದ್ದಾರೆ.
"ಆರ್​ಎಸ್​ಎಸ್ ಮತ್ತು ಬಿಜೆಪಿ ನಡುವೆ ಹಣದ ನೆಕ್ಸಸ್!
ಭಾರತದ ಶಿಕ್ಷಣ ವ್ಯವಸ್ಥೆ ಮತ್ತು ವಿಶ್ವವಿದ್ಯಾಲಯಗಳನ್ನು ಬಳಸಿಕೊಂಡು ಹಣ ಮಾಡಲು ಬಿಜೆಪಿ ಮತ್ತು ಅದರ ಸಿದ್ದಾಂತದ ಮಾರ್ಗದರ್ಶಕ ಆರ್​ಎಸ್​ಎಸ್ ನಡುವೆ ಬೃಹತ್ ಜಾಲ ಕೆಲಸ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ವಿಶ್ವವಿದ್ಯಾಲಯಗಳಲ್ಲಿ ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡು ಹಣ ಮಾಡುವ ದಂಧೆ ನಡೆಯುತ್ತಿದೆ. ಇದೇ ಕಾರಣಕ್ಕೆ ಕಳೆದ ಕೆಲವು ವರ್ಷಗಳಲ್ಲಿ ಈ ದೇಶದಲ್ಲಿ ಕನಿಷ್ಠ 80 ಕ್ಕೂ ಹೆಚ್ಚು ಬಾರಿ ವಿವಿಧ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಈ ಭ್ರಷ್ಟಾಚಾರದ ಜಾಲಕ್ಕೆ ಬ್ರೇಕ್ ಬೀಳಬೇಕಾದರೆ ಮೊದಲು ಶಿಕ್ಷಣ ಸಚಿವರನ್ನು ಮನೆಗೆ ಕಳುಹಿಸಬೇಕು ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.

ಜೂನ್ 21 ಕ್ಕೆ ಮರುಪರೀಕ್ಷೆ: ಮುಂದಿನ ವರ್ಷದಿಂದ ಆನ್‌ಲೈನ್!

ಮೇ 3 ರಂದು ದೇಶದ 551 ನಗರಗಳು ಹಾಗೂ ವಿದೇಶದ 14 ಕೇಂದ್ರಗಳಲ್ಲಿ ನಡೆದಿದ್ದ ನೀಟ್ ಪರೀಕ್ಷೆಯನ್ನು ಅಕ್ರಮಗಳ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ. ಇದರಿಂದಾಗಿ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಹಾನಿ ನಿಯಂತ್ರಣಕ್ಕೆ ಮುಂದಾಗಿರುವ ಸರ್ಕಾರ, ಜೂನ್ 21 ರಂದು ಮರುಪರೀಕ್ಷೆ ನಡೆಸುವುದಾಗಿ ಘೋಷಿಸಿದೆ. ಅಲ್ಲದೆ, ಇಂತಹ ಅಕ್ರಮಗಳನ್ನು ತಡೆಯಲು ಮುಂದಿನ ವರ್ಷದಿಂದ ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಸಲಾಗುವುದು ಎಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ತಿಳಿಸಿದೆ.
ಎನ್‌ಟಿಎ ಪ್ರಕಾರ, ಮೇ 7 ರಂದು ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಪ್ರಾಥಮಿಕ ಮಾಹಿತಿ ಸಿಕ್ಕಿತ್ತು. ಸ್ವತಂತ್ರ ತನಿಖೆಯ ನಂತರ ಈ ಮಾಹಿತಿಯನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದೆ.

ಸಿಬಿಐ ಕಸ್ಟಡಿಯಲ್ಲಿ ಕಿಂಗ್‌ಪಿನ್‌ಗಳು!

ಈ ಜಾಗತಿಕ ಮಟ್ಟದ ಪರೀಕ್ಷಾ ಹಗರಣದ ತನಿಖೆಯನ್ನು ಸದ್ಯ ಸಿಬಿಐ (CBI) ಕೈಗೆತ್ತಿಕೊಂಡಿದ್ದು, ದೇಶದ ವಿವಿಧೆಡೆ ದಾಳಿ ನಡೆಸಿದೆ. ಹಗರಣದ ಪ್ರಮುಖ ಸೂತ್ರಧಾರಿಗಳಾದ ಪಿ.ವಿ. ಕುಲಕರ್ಣಿ ಮತ್ತು ಮನಿಷಾ ಮಾಂಧರೆ ಸೇರಿದಂತೆ ಹಲವು ಪ್ರಮುಖ ಆರೋಪಿಗಳನ್ನು ಈಗಾಗಲೇ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇವರ ಹಿಂದೆ ದೊಡ್ಡ ರಾಜಕೀಯ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ,(ಏಜೆನ್ಸೀಸ್​).