ಪಿಂಕ್ ಬಣ್ಣ ಬಳಿದಿದ್ದೇ ದೈತ್ಯ ಆನೆ ಸಾವಿಗೆ ಕಾರಣವಾಯ್ತಾ? ಫೋಟೋಶೂಟ್ ವಿವಾದ, ಕಂಬನಿ ಮಿಡಿದ ನೆಟ್ಟಿಗರು! Pink Elephant
- ರಾಜಸ್ಥಾನದ ರಾಜಧಾನಿ ಜೈಪುರವನ್ನು ಗುಲಾಬಿ ನಗರ ಅಂತ ಕರೆಯುವುದು ನಿಮಗೆಲ್ಲರಿಗೂ ಗೊತ್ತೇ ಇದೆ
- ಪಿಂಕ್ ಸಿಟಿ ಥೀಮ್ನಲ್ಲಿ ಆನೆಗೆ ಗುಲಾಬಿ ಬಣ್ಣ ಬಳಿದು, ಮಾಡೆಲ್ ಕೂರಿಸಿ ಫೋಟೋಶೂಟ್ ಮಾಡಲಾಗಿತ್ತು
- ರಷ್ಯಾದ ಟ್ರಾವೆಲಿಂಗ್ ಆರ್ಟ್ ಫೋಟೋಗ್ರಾಫರ್ ಜೂಲಿಯಾ ಬುರುಲೆವಾ ಈ ಫೋಟೋಶೂಟ್ ಮಾಡಿದ್ದರು
- ಈ ಫೋಟೋಶೂಟ್ ಇದೀಗ ವಿವಾದದ ಸ್ವರೂಪ ಪಡೆದಿದ್ದು ಆನೆ ಮೃತಪಟ್ಟಿದೆ ಎಂಬ ಮಾಹಿತಿ ಹೊರಬಿದ್ದಿದೆ
Pink Elephant : ರಾಜಸ್ಥಾನದ ರಾಜಧಾನಿ ಜೈಪುರವನ್ನು ಗುಲಾಬಿ ನಗರ ( Pink City ) ಅಂತ ಕರೆಯುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಇದೇ ಥೀಮ್ನಲ್ಲಿ ಆನೆಯೊಂದಕ್ಕೆ ಗುಲಾಬಿ ಬಣ್ಣ ಬಳಿದು, ಅದರ ಮೇಲೆ ಅದೇ ಬಣ್ಣ ಬಳಿದ ಮಾಡೆಲ್ನನ್ನು ಕೂರಿಸಿ ವಿದೇಶಿ ಕಲಾವಿದೆಯೊಬ್ಬರು ಫೋಟೋಶೂಟ್ ಮಾಡಿಸಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿ ಕಲಾವಿದೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ, ಈ ಪ್ರಕರಣದಲ್ಲಿ ಮತ್ತೊಂದು ಹೃದಯ ವಿದ್ರಾವಕ ಮಾಹಿತಿ ಹೊರಬಿದ್ದಿದೆ. ಅದೇನೆಂದರೆ, ಬಣ್ಣ ಬಳಿಯಲಾಗಿದ್ದ ಆನೆ ಒಂದು ತಿಂಗಳ ಹಿಂದಷ್ಟೇ ಮೃತಪಟ್ಟಿದೆ. ಅಷ್ಟಕ್ಕೂ ಏನಿದು ವಿವಾದ? ಆನೆ ಸಾವಿಗೆ ಬಣ್ಣವೇ ಕಾರಣವಾಯ್ತಾ? ಈ ಕುರಿತಾದ ಒಂದು ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಅಂದಹಾಗೆ, ಈ ಫೋಟೋಶೂಟ್ ಅನ್ನು 2025ರ ಡಿಸೆಂಬರ್ ತಿಂಗಳಲ್ಲಿ ಮಾಡಲಾಯಿತು. ಟ್ರಾವೆಲಿಂಗ್ ಆರ್ಟ್ ಫೋಟೋಗ್ರಾಫರ್ ಜೂಲಿಯಾ ಬುರುಲೆವಾ ಎಂಬುವರು ಈ ವಿವಾದಾತ್ಮಕ ಫೋಟೋಶೂಟ್ ಹಿಂದಿರುವ ಕಾರಣಕರ್ತೆ. ಈಕೆ ರಷ್ಯಾ ಮೂಲದವಳು. ಆದರೆ, ಪ್ರಸ್ತುತ ಸ್ಪೇನ್‌ನ ಬಾರ್ಸಿಲೋನಾದಲ್ಲಿ ನೆಲೆಸಿದ್ದಾಳೆ. ದೇಶ-ವಿದೇಶಗಳನ್ನು ಸುತ್ತುವುದು ಹಾಗೂ ಸುಂದರ ತಾಣಗಳಲ್ಲಿ ಸ್ಥಳೀಯ ಸಂಪ್ರದಾಯಗಳನ್ನು ಕೇಂದ್ರವಾಗಿಟ್ಟುಕೊಂಡು ವಿಭಿನ್ನ ಫೋಟೋಶೂಟ್ ಮಾಡಿಸುವುದು ಈಕೆಯ ಖಯಾಲಿ ಆಗಿದೆ.
ಅದೇ ರೀತಿ, ಈಕೆ ಕಳೆದ ಡಿಸೆಂಬರ್ನಲ್ಲಿ ರಾಜಸ್ಥಾನದ ರಾಜಧಾನಿ ಜೈಪುರಕ್ಕೆ ಭೇಟಿ ನೀಡಿದ್ದಳು. ಜೈಪುರ, ಗುಲಾಬಿ ನಗರವೆಂದೇ ಖ್ಯಾತಿ ಪಡೆದಿರುವುದರಿಂದ ಅದೇ ಥೀಮ್ನಲ್ಲಿ ಫೋಟೋಶೂಟ್ ಮಾಡಲು ಮುಂದಾದಳು. ಅದಕ್ಕಾಗಿ ಆಕೆ ಒಂದು ಆನೆಯನ್ನು ಬಳಸಿಕೊಂಡಳು. ಆನೆಗೆ ಸಂಪೂರ್ಣ ಗುಲಾಬಿ ಬಣ್ಣವನ್ನು ಬಳಿಸಿದಳು ಮತ್ತು ತನ್ನ ಫೋಟೋಶೂಟ್ಗೆ ಓರ್ವ ಮಾಡೆಲ್ನನ್ನು ಕೂಡ ಬಳಸಿಕೊಂಡಳು. ಆಕೆಗೂ ಗುಲಾಬಿ ಬಣ್ಣವನ್ನು ಬಳಿಸಿದಳು. ಬಳಿಕ, ಆ ಮಾಡೆಲ್ನನ್ನು ಆನೆಯ ಮೇಲೆ ಕೂರಿಸಿ, ವಿವಿಧ ಭಂಗಿಗಳಲ್ಲಿ ಫೋಟೋ ತೆಗೆದಳು. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು 2025, ಡಿಸೆಂಬರ್ 27ರಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಜೂಲಿಯಾ ಹಂಚಿಕೊಂಡರು. ಆಗ ಇದು ಅಷ್ಟೊಂದು ವೈರಲ್ ಆಗಿರಲಿಲ್ಲ. ಆದರೆ, ಇತ್ತೀಚೆಗೆ ವಿಡಿಯೋ ವೈರಲ್ ಆಗಿ ವಿವಾದದ ಸ್ವರೂಪ ಪಡೆದುಕೊಂಡಿದೆ. ಕೆಲವರು ಕಲಾವಿದೆಯ ಕ್ರಿಯೇಟಿವಿಟಿಯನ್ನು ಕೊಂಡಾಡಿದರೆ, ಬಹುತೇಕ ಮಂದಿ ಆನೆಗೆ ಪಿಂಕ್ ಬಣ್ಣ ಬಳಿದಿದ್ದನ್ನು ಖಂಡಿಸಿದ್ದಾರೆ. ಅಲ್ಲದೆ, ಆನೆಯ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಇಂತಹ ಯೋಜನೆಗಳಲ್ಲಿ ಪ್ರಾಣಿಗಳನ್ನು ಬಳಸುವ ಕಲಾವಿದೆಯ ನೈತಿಕತೆಯನ್ನು ಪ್ರಶ್ನಿಸಿದ್ದಾರೆ.
ಹೆಣ್ಣು ಆನೆ
ಯಶಸ್ವಿ ಹೆಸರಿನ ಮಾಡೆಲ್ ಅನ್ನು ಬಳಸಿಕೊಂಡು ಈ ಫೋಟೋಶೂಟ್ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ಎನ್ಡಿಟಿವಿ ತನಿಖೆ ಕೂಡ ಮಾಡಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಆನೆ ಒಂದು ಹೆಣ್ಣು ಆನೆಯಾಗಿದ್ದು, ಅದರ ಹೆಸರು ಚಂಚಲ್. ಈ ಆನೆ ಹಾಥಿ ಗಾಂವ್ (ಆನೆಗಳ ಗ್ರಾಮ) ಏರಿಯಾಗೆ ಸೇರಿದ್ದಾಗಿದೆ. ಹಾಥಿ ಗಾಂವ್ ಸಮಿತಿಯ ಅಧ್ಯಕ್ಷ ಬಲ್ಲು ಖಾನ್ ಮಾತನಾಡಿದ್ದು, ಹೋಳಿ ಹಬ್ಬದ ಸಮಯದಲ್ಲಿ ಸಾಮಾನ್ಯವಾಗಿ ಬಳಸುವ ಗುಲಾಲ್ ಪುಡಿಯನ್ನು ಬಳಸಿ ಆನೆಗೆ ಬಣ್ಣ ಬಳಿಯಲಾಗಿತ್ತು ಮತ್ತು ಆ ಬಣ್ಣವನ್ನು 30 ನಿಮಿಷಗಳಲ್ಲಿ ತೊಳೆಯಲಾಯಿತು ಎಂದು ತಿಳಿಸಿದರು.
ಆನೆ ಸಾವು
ಚಂಚಲ್ ಆನೆಗೆ ಸುಮಾರು 70 ವರ್ಷ ವಯಸ್ಸಾಗಿತ್ತು ಮತ್ತು ಕಳೆದ ತಿಂಗಳಷ್ಟೇ ಆ ಆನೆ ಮೃತಪಟ್ಟಿತು ಎಂದು ಬಲ್ಲು ಖಾನ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಆದಾಗ್ಯೂ, ಆನೆಯ ಸಾವಿಗೂ ಫೋಟೋಶೂಟ್ ಅಥವಾ ಅದರ ಸುತ್ತಲಿನ ವಿವಾದಕ್ಕೂ ಸಂಬಂಧವಿದೆ ಎಂಬುದನ್ನು ಸೂಚಿಸಲು ಯಾವುದೇ ಪುರಾವೆಗಳಿಲ್ಲ. ಬಣ್ಣವು ಆನೆಯ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಸಾಬೀತು ಮಾಡಲು ಯಾವುದೇ ಸಾಕ್ಷಿಗಳಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಆನೆ ಚಂಚಲ್ಗೆ ಸುಮಾರು 70 ವರ್ಷ ವಯಸ್ಸಾಗಿತ್ತು. ಅದರ ಸಾವು ನೈಸರ್ಗಿಕ ಕಾರಣಗಳಿಂದ ಸಂಭವಿಸಿದೆ ಎಂದು ನಂಬಲಾಗಿದೆ.
ಆದರೂ, ವೈರಲ್ ಆದ ವಿಡಿಯೋ ಮತ್ತು ಆನೆಯ ಸಾವಿನ ಸಮಯದ ನಡುವೆ ತುಂಬಾ ಸಾಮಿಪ್ಯವಿರುವ ಕಾರಣ ವಿವಾದ ಭುಗಿಲೆದ್ದಿದೆ. ಅನೇಕ ನೆಟ್ಟಿಗರು ಧ್ವನಿ ಎತ್ತಿದ್ದು, ವಾಣಿಜ್ಯ ಮತ್ತು ಕಲಾತ್ಮಕ ಚಟುವಟಿಕೆಗಳಲ್ಲಿ ಪ್ರಾಣಿಗಳ ಬಳಕೆಯ ಬಗ್ಗೆ ಕಟ್ಟುನಿಟ್ಟಾದ ಮೇಲ್ವಿಚಾರಣೆ ಮತ್ತು ಸ್ಪಷ್ಟ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕೆಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಜೂಲಿಯಾ ಬುರುಲೆವಾ ಕೊಟ್ಟ ಸ್ಪಷ್ಟನೆ ಏನು?
ರಷ್ಯಾದ ಛಾಯಾಗ್ರಾಹಕಿ ಜೂಲಿಯಾ ಬುರುಲೆವಾ 2025, ಡಿಸೆಂಬರ್ ತಿಂಗಳಲ್ಲಿ ಜೈಪುರದ ಪಾಳುಬಿದ್ದ ಗಣೇಶ ದೇವಸ್ಥಾನದಲ್ಲಿ ಚಿತ್ರೀಕರಣ ನಡೆಸಿದರು. ಇದರಲ್ಲಿ ಓರ್ವ ಮಾಡೆಲ್ ಮತ್ತು ಆನೆಗೆ ಗುಲಾಬಿ ಬಣ್ಣವನ್ನು ಬಳಿದು ಫೋಟೋಶೂಟ್ ಮಾಡಿಸಲಾಯಿತು. ಜೈಪುರದಲ್ಲಿ ಆರು ವಾರಗಳನ್ನು ಕಳೆದಿದ್ದಾಗಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಜೂಲಿಯಾ ಬಹಿರಂಗಪಡಿಸಿದ್ದಾರೆ. ನಗರದ ಸಾಂಪ್ರದಾಯಿಕ ಗುಲಾಬಿ ಬಣ್ಣವು ಅವರ ದೃಷ್ಟಿಗೆ ಸ್ಫೂರ್ತಿ ನೀಡಿತು. ರಾಜಸ್ಥಾನದ ಸಂಸ್ಕೃತಿ, ವಾಸ್ತುಶಿಲ್ಪ ಮತ್ತು ಅಲಂಕಾರದಲ್ಲಿ ಆನೆಗಳು ಪ್ರಮುಖ ಸಂಕೇತವಾಗಿದೆ. ಆನೆಗಳು ಎಲ್ಲೆಡೆ ಇವೆ. ಬೀದಿಗಳು, ಆಭರಣಗಳು, ವಾಸ್ತುಶಿಲ್ಪ ಎಲ್ಲದರಲ್ಲೂ ಆನೆಗಳಿವೆ. ಆನೆಯು ರಾಜಸ್ಥಾನದ ಪ್ರಮುಖ ಸಂಕೇತ. ಹೀಗಾಗಿ ಆನೆಯನ್ನು ಸೇರಿಸದೆ ನನ್ನ ಪ್ರವಾಸ ಪೂರ್ಣಗೊಳ್ಳುವುದಿಲ್ಲ ಎಂದು ಜೂಲಿಯಾ ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಸ್ಥಳೀಯವಾಗಿ ತಯಾರಿಸಿದ ಗುಲಾಲ್ ಅನ್ನು ಸುಮಾರು 10 ನಿಮಿಷಗಳ ಕಾಲ ಹಚ್ಚಿ ನಂತರ ತಕ್ಷಣವೇ ತೊಳೆಯಲಾಯಿತು ಎಂದು ಜೂಲಿಯಾ ಮತ್ತು ಆನೆಯ ಮಾಲೀಕರು ಸಮರ್ಥಿಸಿಕೊಂಡರು.
ಅಂದಹಾಗೆ, ಈ ಸ್ಪಷ್ಟೀಕರಣಗಳ ಹೊರತಾಗಿಯೂ, ವಿಡಿಯೋ ವೈರಲ್ ಆಗಿರುವುದು ಮನರಂಜನೆ ಮತ್ತು ಕಲಾತ್ಮಕ ಉದ್ದೇಶಗಳಿಗಾಗಿ ಪ್ರಾಣಿಗಳ ಬಳಕೆಯ ಬಗ್ಗೆ ಕಳವಳವನ್ನು ಮತ್ತೆ ಹುಟ್ಟುಹಾಕಿದೆ. ಅನೇಕ ಬಳಕೆದಾರರು ಕಠಿಣ ನಿಯಮಗಳನ್ನು ಜಾರಿ ಮಾಡುವಂತೆ ಮತ್ತು ಹೊಣೆಗಾರಿಕೆಗೆ ಕರೆ ನೀಡಿದ್ದಾರೆ. ಫೋಟೋಶೂಟ್ ಮಾಡಿಸಲು ಸರಿಯಾದ ಅನುಮತಿಗಳನ್ನು ಪಡೆಯಲಾಗಿದೆಯೇ ಮತ್ತು ಆನೆಯ ಯೋಗಕ್ಷೇಮವನ್ನು ರಕ್ಷಿಸಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾದ ನಂತರ, ರಾಜಸ್ಥಾನ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಯಾವುದೇ ನಿರ್ಲಕ್ಷ್ಯ ಅಥವಾ ವನ್ಯಜೀವಿ ಸಂರಕ್ಷಣಾ ನಿಯಮಗಳ ಉಲ್ಲಂಘನೆ ಕಂಡುಬಂದರೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್).