ಶರದ್ ಪವರ್ ಮತ್ತು ಅಜಿತ್ ಪವರ್ 
ದೇಶ

ಪಿಂಪ್ರಿ-ಚಿಂಚ್​ವಾಡ್ ಪುರಸಭೆ ಚುನಾವಣೆ: ಶರದ್ ಪವಾರ್ ಜೊತೆ ಅಜಿತ್ ಪವಾರ್ ಮೈತ್ರಿ ಘೋಷಣೆ; ಒಂದಾದ NCP ಬಣಗಳು

ಮುಂಬೈ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಒಡೆದು ಹೋಗಿದ್ದ ರಾಷ್ಟ್ರೀಯ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(NCP) ಬಣಗಳು ಪಿಂಪ್ರಿ-ಚುಂಚ್​ವಾಡ್ ಪುರಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಾಗಿ ಡಿಸಿಎಂ ಅಜಿತ್ ಪವಾರ್ ಭಾನುವಾರ(ಡಿ. 28) ಘೋಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಡಿಸಿಎಂ ಅಜಿತ್ ಪವಾರ್ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಬಣದೊಂದಿಗೆ ಮುಂಬರುವ ಪಿಂಪ್ರಿ-ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದ್ದಾರೆ. ಇದು ಒಡೆದು ಹೋಗಿದ್ದ ಎರಡೂ ಪಕ್ಷದ ಪುನರ್ಮಿಲನ ಎನ್ನಲಾಗಿದೆ. 
ಭಾನುವಾರ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಅಜಿತ್ ಪವಾರ್, ಪುರಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವಾಗ ಎರಡೂ ಬಣಗಳು ಒಟ್ಟಾಗಿ ಸ್ಪರ್ಧಿಸಲು ನಿರ್ಧರಿಸಲಾಗಿದೆ. ಇದು ಕುಟುಂಬವನ್ನು ಮತ್ತೆ ಒಟ್ಟಿಗೆ ತಂದಿದೆ. ಫಲಿತಾಂಶದ ಬಗ್ಗೆ ಯಾವುದೇ ಪ್ರಶ್ನೆ ಇಲ್ಲ. ಆದರೆ ಕೆಲವೊಮ್ಮೆ ಮಹಾರಾಷ್ಟ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸ್ಥಳೀಯ ನಾಯಕರೊಂದಿಗೆ ಸೀಟು ಹಂಚಿಕೆಯ ಬಗ್ಗೆಯೂ ನಾನು ಚರ್ಚಿಸಿದ್ದೇನೆ, ಅದನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ಗಡಿಯಾರ ಮತ್ತು ತುಟಾರಿ ಒಂದಾಗಿ ಎಂದು ಹೇಳಿದ್ದಾರೆ.
ಪುಣೆ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಸಂಭಾವ್ಯ ಮೈತ್ರಿಗಾಗಿ ಎರಡೂ ಬಣಗಳ ನಡುವೆ ಚರ್ಚೆಗಳು ನಡೆಯುತ್ತಿವೆ. ಅಲ್ಲಿಯೂ ಎರಡೂ ಬಣಗಳು ಒಟ್ಟಿಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಕಳೆದ ಕೆಲವು ವರ್ಷಗಳಲ್ಲಿ ಪುಣೆ ಮಹಾನಗರ ಪಾಲಿಕೆ, ಪಿಂಪ್ರಿ-ಚಿಂಚ್‌ವಾಡ್ ಪುರಸಭೆಗಳಲ್ಲಿ ಎನ್​ಸಿಪಿ ತನ್ನ ಅಧಿಪತ್ಯವನ್ನು ಸಾಧಿಸಿದೆ. ಅದನ್ನು ಮುಂದುವರೆಸಿಕೊಂಡು ಹೋಗಲು ಮೈತ್ರಿ ಅನಿವಾರ್ಯ ಎನ್ನಲಾಗಿದೆ.
ಪಿಂಪ್ರಿ-ಚಿಂಚ್‌ವಾಡ್ ಪುರಸಭೆ ಮತ್ತು ಪುಣೆ ಪಾಲಿಕೆ ಸಂಸ್ಥೆ ಸೇರಿದಂತೆ ಮಹಾರಾಷ್ಟ್ರದಾದ್ಯಂತ 29 ಪುರಸಭೆ ನಿಗಮಗಳಿಗೆ ಚುನಾವಣೆಗಳು ಜನವರಿ 15 ರಂದು ಮತದಾನ ನಡೆಯಲಿದೆ. ಮರುದಿನ ಮತಎಣಿಕೆ ನಡೆಯಲಿದೆ. ಇಂದು ನಾಳೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ (ಏಜೆನ್ಸೀಸ್).