ಸಾಂದರ್ಭಿಕ ಚಿತ್ರ  
ದೇಶ

ಪೈಲಟ್​ಗಳ ಡ್ರಗ್ಸ್​ ಪರೀಕ್ಷೆ : ಬೆಚ್ಚಿಬೀಳಿಸಿದ ಬಾನಂಗಳದ ಗಾಂಜಾ ಕಿಕ್

ಫುಕೆಟ್​ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಬಾನಂಗಳದಲ್ಲಿ ದಿಢೀರನೇ 300 ಅಡಿ ಕೆಳಕ್ಕೆ ಜಾರಿದ ಘಟನೆ ಇಡೀ ವಿಮಾನಯಾನ ಕ್ಷೇತ್ರವನ್ನು ಬೆಚ್ಚಿಬೀಳಿಸಿದೆ. ಘಟನೆಯ ನಂತರ ನಡೆದ ವೈದ್ಯಕೀಯ ತಪಾಸಣೆಯಲ್ಲಿ, ಪೈಲಟ್ ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದು, ಆತನನ್ನು ತಕ್ಷಣವೇ ಸೇವೆಯಿಂದ ಸಸ್ಪೆಂಡ್ ಮಾಡಲಾಗಿದೆ. ಈ ವಿಷಯದಲ್ಲಿ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಕಟ್ಟುನಿಟ್ಟಿನ ನಿಯಮಾವಳಿ ಹೊಂದಿದ್ದರೂ, ಪ್ರಯಾಣಿಕರ ಜೀವದ ಜತೆ ಚೆಲ್ಲಾಟವಾಡುವ ಇಂತಹ ಬೇಜವಾಬ್ದಾರಿ ಘಟನೆ ನಡೆದಿರುವುದು ಎಲ್ಲೆಡೆ ತೀವ್ರ ಆತಂಕ ಸೃಷ್ಟಿಸಿದೆ. ಫುಕೆಟ್-ದೆಹಲಿ ವಿಮಾನದಲ್ಲಿ ಏನು ನಡೆಯಿತು? ವಿಮಾನ ಸಿಬ್ಬಂದಿಗೆ ಅನ್ವಯವಾಗುವ ನಿಯಮಗಳೇನು? ಅವರನ್ನು ಯಾವಾಗ ಮತ್ತು ಎಷ್ಟು ಬಾರಿ ಡ್ರಗ್ಸ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ? ತಪ್ಪು ದೃಢಪಟ್ಟರೆ ಏನು ಕ್ರಮ ಕೈಗೊಳ್ಳಲಾಗುತ್ತದೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಆಗಸ್ಟ್ 4ರಂದು ಥಾಯ್ಲೆಂಡ್​ನ ಫುಕೆಟ್​ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಮಾರ್ಗಮಧ್ಯೆ ಇದ್ದಕ್ಕಿದ್ದಂತೆ ಸುಮಾರು 300 ಅಡಿಗಳಷ್ಟು ಕೆಳಕ್ಕೆ ಜಾರಿತು. ಆ ರಭಸಕ್ಕೆ ಸುಮಾರು 20 ಪ್ರಯಾಣಿಕರು ಹಾಗೂ ನಾಲ್ವರು ವಿಮಾನ ಸಿಬ್ಬಂದಿ ಗಾಯಗೊಂಡರು. ಕೆಲವರಿಗಂತೂ ಬೆನ್ನು ಮೂಳೆಗೇ ಪೆಟ್ಟು ಬಿತ್ತು. ಪರಿಸ್ಥಿತಿ ತಕ್ಷಣಕ್ಕೆ ನಿಭಾಯಿಸಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. ಈ ಹಠಾತ್ ಕುಸಿತಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಹುಡುಕತೊಡಗಿದ ಅಧಿಕಾರಿಗಳು ವಿಮಾನದ ಪೈಲಟ್ ಮತ್ತು ಇತರ ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ತಪಾಸಣೆಯ ವರದಿ ಬಂದಾಗ ಅಧಿಕಾರಿಗಳಿಗೇ ಶಾಕ್ ಕಾದಿತ್ತು. ವಿಮಾನ ಚಲಾಯಿಸುತ್ತಿದ್ದ ಪೈಲಟ್ ಗಾಂಜಾ ಸೇವಿಸಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿತ್ತು! ಆ ವಿಮಾನದಲ್ಲಿ 137 ಪ್ರಯಾಣಿಕರು ಮತ್ತು 8 ಸಿಬ್ಬಂದಿ ಇದ್ದರು. ಡ್ರಗ್ಸ್ ಕಿಕ್​ನಲ್ಲಿ ನೂರಾರು ಪ್ರಯಾಣಿಕರ ಜೀವವನ್ನು ಅಪಾಯಕ್ಕೆ ತಳ್ಳಿದ ಈ ಪೈಲಟ್​ಗೆ ಅಮಾನತಿನ ‘ಶಿಕ್ಷೆ’ಯೇನೋ ಸಿಕ್ಕಿದೆ. ಆದರೆ, ಈ ಘಟನೆಯಿಂದ ದೇಶದ ವಿಮಾನಯಾನ ಕ್ಷೇತ್ರ, ಪ್ರಯಾಣಿಕರ ಭದ್ರತೆ ಹಾಗೂ ಡಿಜಿಸಿಎ ರೂಪಿಸಿದ ಸುರಕ್ಷತಾ ನಿಯಮಗಳ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ.

ಅಪಾಯದ ತೂಗುಗತ್ತಿ

ವಿಮಾನ ಚಾಲನೆ ಎಂಬುದು ಸಾಮಾನ್ಯ ವಾಹನ ಚಲಾಯಿಸಿದಂತಲ್ಲ. ಮೈಯೆಲ್ಲಾ ಎಚ್ಚರವಾಗಿದ್ದು, ಸೆಕೆಂಡು ಸೆಕೆಂಡಿಗೂ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಗಾಳಿಯ ಒತ್ತಡ, ಹವಾಮಾನ ವೈಪರೀತ್ಯ, ತಾಂತ್ರಿಕ ದೋಷ ಹಾಗೂ ರೇಡಾರ್ ಸಂಪರ್ಕದಂತಹ ಸಂಕೀರ್ಣ ಸನ್ನಿವೇಶಗಳನ್ನು ನಿಭಾಯಿಸಲು ಪೈಲಟ್​ಗೆ ತೀವ್ರ ಏಕಾಗ್ರತೆ ಹಾಗೂ ಮಾನಸಿಕ ಸ್ಥಿರತೆ ಅತ್ಯಗತ್ಯ. ಮಾದಕದ್ರವ್ಯ ಸೇವಿಸುವುದರಿಂದ ಅಥವಾ ಮದ್ಯಪಾನ ಮಾಡುವುದರಿಂದ ಸನ್ನಿವೇಶಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಆಗುವುದಿಲ್ಲ. ತುರ್ತು ಸಂದರ್ಭದಲ್ಲಿ ತಕ್ಷಣ ಸ್ಪಂದಿಸುವ ಸಾಮರ್ಥ್ಯ ನಶಿಸಿಹೋಗುತ್ತದೆ. ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಗೊಂದಲ ಉಂಟಾಗುತ್ತದೆ. ಸರಿ-ತಪ್ಪುಗಳ ವ್ಯತ್ಯಾಸ ತಿಳಿಯದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು. ಹಾರಾಟದ ಸಮಯದಲ್ಲಿ ವಿಮಾನದ ಎತ್ತರ ಮತ್ತು ವೇಗದ ಅಂದಾಜು ಸಿಗುವುದಿಲ್ಲ. ಈ ಕಾರಣಕ್ಕಾಗಿಯೇ ವಿಮಾನಯಾನ ರಂಗದಲ್ಲಿ ಡ್ರಗ್ಸ್ ಮತ್ತು ಆಲ್ಕೋಹಾಲ್ ಬಳಕೆ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ಅನುಸರಿಸಲಾಗುತ್ತದೆ.

ನಿಯಮಗಳೇನು?

ವಿಮಾನ ಸಿಬ್ಬಂದಿಗಾಗಿ ಡಿಜಿಸಿಎ ಅತ್ಯಂತ ಕಟ್ಟುನಿಟ್ಟಿನ ಮಾರ್ಗಸೂಚಿ ರೂಪಿಸಿದೆ. 2022ರಿಂದ ಭಾರತದಲ್ಲಿ ಪೈಲಟ್​ಗಳು ಹಾಗೂ ಕ್ಯಾಬಿನ್ ಸಿಬ್ಬಂದಿಗೆ ‘ಮಾದಕದ್ರವ್ಯ ಪರೀಕ್ಷೆ’ ಕಡ್ಡಾಯ ಮಾಡಲಾಗಿದೆ.

1. ಆಲ್ಕೋಹಾಲ್ ಪರೀಕ್ಷೆ: ಪ್ರತಿಯೊಬ್ಬ ಪೈಲಟ್ ಮತ್ತು ಕ್ಯಾಬಿನ್ ಸಿಬ್ಬಂದಿ ವಿಮಾನ ಹಾರಾಟಕ್ಕೂ ಮುನ್ನ ಮತ್ತು ಹಾರಾಟದ ನಂತರ ಬ್ರೆತ್ ಅನಲೈಸರ್ ಪರೀಕ್ಷೆಗೆ ಒಳಪಡಬೇಕು. ದೇಹದಲ್ಲಿ ಆಲ್ಕೋಹಾಲ್ ಪ್ರಮಾಣ 0% ಇರುವುದು ಈ ಪರೀಕ್ಷೆಯಲ್ಲಿ ದೃಢಪಡಬೇಕು. ಸಣ್ಣ ಪ್ರಮಾಣದಲ್ಲಿ ಆಲ್ಕೋಹಾಲ್ ಅಂಶ ಪತ್ತೆಯಾದರೂ ಅದನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ. ವಿಮಾನ ಹಾರಾಟಕ್ಕೆ ಕನಿಷ್ಠ 12 ಗಂಟೆ ಮೊದಲು ಮದ್ಯ ಸೇವಿಸುವಂತಿಲ್ಲ.

2. ಮಾದಕದ್ರವ್ಯ ಪರೀಕ್ಷೆ: ಗಾಂಜಾ, ಕೊಕೇನ್, ಹೆರಾಯಿನ್/ಒಪಿಯಾಯ್ಡ್​ ಆಂಫಿಟಮೈನ್ಸ್, ಎಕ್ಸ್​ಟಸಿ ಮುಂತಾದ ಡ್ರಗ್ಸ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಕ್ರಮ ಡ್ರಗ್ಸ್ ಮಾತ್ರವಲ್ಲದೆ, ತೀವ್ರ ನಿದ್ರೆ ಬರಿಸುವ ಅಥವಾ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವ ಕೆಲವು ಔಷಧಗಳನ್ನು ಸೇವಿಸಿದ್ದರೂ ಪೈಲಟ್​ಗಳು ವಿಮಾನ ಹಾರಿಸುವಂತಿಲ್ಲ.

ನಿಯಮ ಮತ್ತಷ್ಟು ಬಿಗಿ

ಫುಕೆಟ್-ದೆಹಲಿ ವಿಮಾನದ ಘಟನೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವುದರಿಂದ, ಡಿಜಿಸಿಎ ಈಗಿರುವ ನಿಯಮಾವಳಿಗಳನ್ನು ಇನ್ನಷ್ಟು ಬಿಗಿಗೊಳಿಸಲು ಮುಂದಾಗಿದೆ. ಪ್ರಸ್ತುತ ಮೂತ್ರದ ಮಾದರಿ ಮೂಲಕ ಮಾತ್ರ ಡ್ರಗ್ಸ್ ಪರೀಕ್ಷೆ ಮಾಡಲಾಗುತ್ತಿದ್ದು, ಗಾಂಜಾ ಅಥವಾ ಇತರ ಡ್ರಗ್ಸ್ ಸೇವಿಸಿ ಹಲವು ದಿನಗಳಾಗಿದ್ದರೂ ಅದನ್ನು ನಿಖರವಾಗಿ ಪತ್ತೆಹಚ್ಚಲು ಹೇರ್ ಫಾಲಿಕಲ್ ಮತ್ತು ಲಾಲಾರಸ (ಸಲೈವಾ) ಪರೀಕ್ಷೆಯನ್ನೂ ಆರಂಭಿಸಲು ಡಿಜಿಸಿಎ ಯೋಚಿಸುತ್ತಿದೆ. ಪ್ರಸ್ತುತ ಶೇ. 50ರಷ್ಟಿರುವ ರ್ಯಾಂಡಮ್ ಡ್ರಗ್ ಟೆಸ್ಟಿಂಗ್ ಪ್ರಮಾಣವನ್ನು ಶೇ. 100ಕ್ಕೆ ಏರಿಸುವ ಮತ್ತು ವಿದೇಶಿ ತಂಗುದಾಣಗಳಲ್ಲಿಯೂ ಸರ್ಪ್ರೖೆಸ್ ಟೆಸ್ಟ್ ಬಗ್ಗೆ ಚಿಂತನೆ ನಡೆದಿದೆ. ಪೈಲಟ್​ಗಳ ಮೇಲಿರುವ ಕಾರ್ಯಭಾರ ಹಾಗೂ ಮಾನಸಿಕ ಒತ್ತಡದಿಂದಾಗಿ ಕೆಲವರು ಡ್ರಗ್ಸ್ ಅಥವಾ ಮದ್ಯಕ್ಕೆ ದಾಸರಾಗುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಕಡ್ಡಾಯ ಮಾನಸಿಕ ಆರೋಗ್ಯ ತಪಾಸಣೆ ಮತ್ತು ಕೌನ್ಸೆಲಿಂಗ್ ಸೆಷನ್​ಗಳನ್ನು ಆಯೋಜಿಸಲು ಸೂಚಿಸಲಾಗಿದೆ.

ಯಾವಾಗ ಮತ್ತು ಎಷ್ಟು ಬಾರಿ ಪರೀಕ್ಷೆ?

1. ರ್ಯಾಂಡಮ್ ಟೆಸ್ಟಿಂಗ್ ಅನ್ನು ಯಾವುದೇ ಮುನ್ಸೂಚನೆ ಇಲ್ಲದೆ ಹಠಾತ್ತಾಗಿ ನಡೆಸಲಾಗುತ್ತದೆ. ಪ್ರತಿಯೊಂದು ವಿಮಾನಯಾನ ಸಂಸ್ಥೆ ವರ್ಷಕ್ಕೆ ಒಮ್ಮೆಯಾದರೂ ತಮ್ಮ ಕನಿಷ್ಠ ಶೇ. 50ರಷ್ಟು ಸಿಬ್ಬಂದಿಯನ್ನು ಡ್ರಗ್ ಟೆಸ್ಟ್​ಗೆ ಒಳಪಡಿಸಬೇಕು.

2. ಅಂದರೆ ಯಾವುದೇ ಪೈಲಟ್ ಅಥವಾ ಸಿಬ್ಬಂದಿಯ ನೇಮಕಾತಿ ಸಮಯದಲ್ಲಿ ಅವರಿಗೆ ಸಂಪೂರ್ಣ ಡ್ರಗ್ ಟೆಸ್ಟ್ ಮಾಡುವುದು ಕಡ್ಡಾಯ.

3. ಹಾರಾಟದ ವೇಳೆ ಯಾವುದೇ ತಾಂತ್ರಿಕ ತೊಂದರೆ, ಭದ್ರತಾ ಲೋಪ ಅಥವಾ ಅಪಘಾತ ಸಂಭವಿಸಿದರೆ, ತಕ್ಷಣವೇ ಸಂಬಂಧಪಟ್ಟ ಸಿಬ್ಬಂದಿಗೆ ಮಾದಕದ್ರವ್ಯ ತಪಾಸಣೆ ನಡೆಸಲಾಗುತ್ತದೆ.

4. ಸಿಬ್ಬಂದಿಯ ನಡವಳಿಕೆ, ಮಾತು ಅಥವಾ ಕೆಲಸದ ವೈಖರಿಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದರೆ ತಕ್ಷಣವೇ ಅವರನ್ನು ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ಆದೇಶಿಸಬಹುದಾಗಿದೆ.

ಬೇರೆ ದೇಶಗಳಲ್ಲಿ ಹೇಗಿದೆ?

ಅಮೆರಿಕದಲ್ಲಿ ರ್ಯಾಂಡಮ್ ಪರೀಕ್ಷೆಗಳು ಕಡ್ಡಾಯ ವಾಗಿದ್ದು, ಪರೀಕ್ಷೆಗೆ ಪೈಲಟ್ ನಿರಾಕರಿಸಿದರೂ ಅದನ್ನು ಅಪರಾಧವೆಂದೇ ಪರಿಗಣಿಸಲಾಗುತ್ತದೆ. ಪರೀಕ್ಷೆಯಲ್ಲಿ ಮಾದಕದ್ರವ್ಯ ಅಥವಾ ಆಲ್ಕೋಹಾಲ್ ಅಂಶ ಪತ್ತೆಯಾದರೆ ತಕ್ಷಣವೇ ಲೈಸೆನ್ಸ್ ರದ್ದುಗೊಳಿಸಿ, ಕೆಲಸದಿಂದ ವಜಾಗೊಳಿ ಸಲಾಗುತ್ತದೆ. ಪ್ರಯಾಣಿಕರ ಜೀವಕ್ಕೆ ಅಪಾಯ ತಂದೊಡ್ಡಿದ್ದಕ್ಕಾಗಿ ಕ್ರಿಮಿನಲ್ ಮೊಕದ್ದಮೆ ಹೂಡಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಉದಾಹರಣೆಗೆ, ಯುನೈಟೆಡ್ ಕಿಂಗ್​ಡಂ ಮತ್ತು ಅಮೆರಿಕದಲ್ಲಿ ಮದ್ಯಪಾನ ಮಾಡಿ ವಿಮಾನ ಚಲಾಯಿಸಿದ ಹತ್ತಾರು ಪೈಲಟ್​ಗಳಿಗೆ 9ರಿಂದ 20 ತಿಂಗಳವರೆಗೆ ಜೈಲು ಶಿಕ್ಷೆಯಾದ ಉದಾಹರಣೆಗಳಿವೆ. ಡಿಜಿಸಿಎ ಡೇಟಾ ಪ್ರಕಾರ, ಭಾರತದಲ್ಲಿ ಪ್ರತಿವರ್ಷ 30-40 ಪೈಲಟ್​ಗಳು ವಿಮಾನ ಹಾರಾಟಕ್ಕೂ ಮುನ್ನ ನಡೆಸುವ ಮದ್ಯಪಾನ/ಡ್ರಗ್ಸ್ ಪರೀಕ್ಷೆಯಲ್ಲಿ ಸಿಕ್ಕಿಬೀಳುತ್ತಿದ್ದಾರೆ.

ತಪ್ಪಿತಸ್ಥರ ವಿರುದ್ಧ ಏನು ಕ್ರಮ?

ಮಾದಕದ್ರವ್ಯ ಸೇವನೆ ಪರೀಕ್ಷೆಯಲ್ಲಿ ಪೈಲಟ್ ಅಥವಾ ಸಿಬ್ಬಂದಿಯ ವರದಿ ‘ಪೊಸಿಟಿವ್’ ಬಂದರೆ, ಡಿಜಿಸಿಎ ನಿಯಮಗಳಡಿ ಅತ್ಯಂತ ಕಠಿಣ ಶಿಕ್ಷೆಗಳನ್ನು ವಿಧಿಸಲಾಗುತ್ತದೆ. ಮೊದಲ ಬಾರಿ ತಪ್ಪು ಸಾಬೀತಾದರೆ ಪೈಲಟ್​ನನ್ನು ರೋಸ್ಟರ್​ನಿಂದ ತೆಗೆದುಹಾಕಿ, 3 ತಿಂಗಳು ಪುನರ್ವಸತಿ (ರಿಹ್ಯಾಬಿಲಿಟೇಶನ್) ಕೇಂದ್ರಕ್ಕೆ ಕಳಿಸಲಾಗುತ್ತದೆ. ಪುನರ್ವಸತಿ ಪ್ರಕ್ರಿಯೆ ಮುಗಿದ ನಂತರ, ಮಾನ್ಯತೆ ಪಡೆದ ವೈದ್ಯಕೀಯ ಮಂಡಳಿಯಿಂದ ಫಿಟ್​ನೆಸ್ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಮತ್ತೆ ಡ್ರಗ್ ಟೆಸ್ಟ್​ನಲ್ಲಿ ‘ನೆಗೆಟಿವ್’ ಬಂದರಷ್ಟೇ ಕೆಲಸಕ್ಕೆ ಮರಳಲು ಅವಕಾಶ ನೀಡಲಾಗುತ್ತದೆ. ಎರಡನೇ ಬಾರಿ ತಪ್ಪೆಸಗಿದರೆ ಆ ಪೈಲಟ್​ನ ಫ್ಲೈಯಿಂಗ್ ಲೈಸೆನ್ಸ್ಅನ್ನು 3 ವರ್ಷ ಅಮಾನತ್ತಿನಲ್ಲಿ ಇಡಲಾಗುತ್ತದೆ. ಮೂರನೇ ಬಾರಿಗೆ ತಪ್ಪೆಸಗಿದರೆ, ಲೈಸೆನ್ಸನ್ನು ಶಾಶ್ವತವಾಗಿ ರದ್ದುಗೊಳಿಸಲಾಗುತ್ತದೆ. ಅವರು ಮತ್ತೆಂದೂ ವಿಮಾನ ಹಾರಿಸದಂತೆ ನಿಷೇಧ ಹೇರಲಾಗುತ್ತದೆ. ಫುಕೆಟ್-ದೆಹಲಿ ವಿಮಾನ ಪ್ರಕರಣದಲ್ಲಿ, ಹಾರಾಟದ ವೇಳೆಯೇ ಅಪಾಯ ತಂದೊಡ್ಡಿದ್ದರಿಂದ ಪೈಲಟ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಹಾಗೂ ತಕ್ಷಣವೇ ಲೈಸೆನ್ಸ್ ರದ್ದುಗೊಳಿಸುವ ಅಧಿಕಾರ ಡಿಜಿಸಿಎಗೆ ಇದೆ.

ವಿಪರೀತ ಕಾರ್ಯಭಾರ

ಭಾರತದಲ್ಲಿ ಪೈಲಟ್​ಗಳ ತೀವ್ರ ಕೊರತೆ ಇದೆ. ವಿಮಾನಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಪೈಲಟ್​ಗಳ ಮೇಲೆ ತೀವ್ರ ಕಾರ್ಯಭಾರ ಇದೆ. ಸತತ ರಾತ್ರಿ ಪಾಳಿಯ ಹಾರಾಟ, ಸರಿಯಾದ ನಿದ್ರೆಯಿಲ್ಲದಿರುವುದು, ವಿಶ್ರಾಂತಿಯ ಕೊರತೆ, ಕಟ್ಟುನಿಟ್ಟಾದ ವೇಳಾಪಟ್ಟಿ ಮುಂತಾದವು ಪೈಲಟ್​ಗಳಲ್ಲಿ ತೀವ್ರ ಮಾನಸಿಕ ಒತ್ತಡ ಮತ್ತು ಆಯಾಸಕ್ಕೆ ಕಾರಣವಾಗುತ್ತಿವೆ. ಇದರಿಂದಾಗಿ ಕೆಲವು ಪೈಲಟ್​ಗಳು ಖಿನ್ನತೆಗೊಳಗಾಗುತ್ತಿದ್ದಾರೆ. ಒತ್ತಡ ನಿವಾರಿಸಲು ಮದ್ಯ ಹಾಗೂ ಮಾದಕದ್ರವ್ಯಗಳ ಮೊರೆ ಹೋಗುವ ಅಪಾಯಕಾರಿ ಹಾದಿ ತುಳಿಯುತ್ತಿದ್ದಾರೆ. ಇದು ಹಾರಾಟದ ವೇಳೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣವಾಗಿ, ನೂರಾರು ಪ್ರಯಾಣಿಕರ ಭದ್ರತೆಗೆ ಮತ್ತು ವಿಮಾನಯಾನ ಸುರಕ್ಷತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.