ವಿಮಾನ ಪತನದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ದುರ್ಮರಣ
- ಇಂದು (ಜ.28) ಬೆಳಗ್ಗೆ ಪುಣೆ ಜಿಲ್ಲೆಯ ಬಾರಾಮತಿ ಬಳಿ ಸಂಭವಿಸಿದ ಲಘು ವಿಮಾನ ದುರಂತ
- ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರು ಮಂದಿ ದುರ್ಮರಣ
- ಸುಟ್ಟು ಕರಕಲಾದ ವಿಮಾನದಲ್ಲಿ ಅಜಿತ್ ಪವಾರ್‌ರನ್ನು ಗುರುತಿಸಿದ್ದು ಅವರ ವಾಚ್
- ವಿಮಾನ ಪತನ ಬೆನ್ನಲ್ಲೇ ಅಜಿತ್ ಪವಾರ್ ಅವರ 2 ವರ್ಷದ ಹಿಂದಿನ ಟ್ವೀಟ್ ವೈರಲ್
ಪುಣೆ: ವಿಧಿ ಬರಹ ಎಷ್ಟು ಘೋರವಾಗಿರುತ್ತದೆ ಎನ್ನುವುದಕ್ಕೆ ಇಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ವಿಮಾನ ಪತನವೇ ಒಂದು ಜ್ವಲಂತ ಸಾಕ್ಷಿ. ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ( Ajit Pawar ) ಒಂದು ಟ್ವೀಟ್ ಮಾಡಿದ್ದರು. ಅದೇ ಟ್ವೀಟ್ ಇಂದು ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಭಾರಿ ವೈರಲ್ ಆಗುವ ಮೂಲಕ ಚರ್ಚೆಗೆ ಗ್ರಾಸವಾಗಿದೆ.
ಎರಡು ವರ್ಷಗಳ ಹಿಂದೆ ಅಜಿತ್ ಪವಾರ್ ಅವರು ವಿಮಾನದ ಲ್ಯಾಂಡಿಂಗ್ ಬಗ್ಗೆ ಗೇಲಿ ಮಾಡಿದ್ದರು. ಆದರೆ, ಇಂದು ವಿಮಾನದ ಲ್ಯಾಂಡಿಂಗ್ ವೇಳೆಯೇ ಅವರ ಜೀವ ಹೋಗಿದೆ. ನಿಜಕ್ಕೂ ಇದು ವಿಪರ್ಯಾಸವೇ ಸರಿ.
ಟ್ವೀಟ್ನಲ್ಲಿ ಏನಿತ್ತು?
ಅಜಿತ್ ಪವಾರ್ ಅವರು 2024, ಜನವರಿ 18ರಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್ನಲ್ಲಿ ಏನಿತ್ತು ಅಂದರೆ, "ಹೆಲಿಕಾಪ್ಟರ್ ಅಥವಾ ವಿಮಾನದಲ್ಲಿ ಪ್ರಯಾಣಿಸುವಾಗ, ವಿಮಾನ ಅಥವಾ ಹೆಲಿಕಾಪ್ಟರ್ ಸರಾಗವಾಗಿ ಲ್ಯಾಂಡ್ ಆದರೆ, ಅಲ್ಲಿ ಮಹಿಳಾ ಪೈಲಟ್ ಇರುತ್ತಾಳೆ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ ಎಂದಿದ್ದರು. ಈ ಟ್ವೀಟ್ ಜತೆಗೆ #NCPWomenPower ಎಂಬ ಹ್ಯಾಷ್ಟ್ಯಾಗ್ ಕೂಡ ಬಳಸಿದ್ದರು.
ಇಂದಿನ ವಿಮಾನ ದುರಂತದ ಪೈಲಟ್ ಮಹಿಳೆ
ವಿಪರ್ಯಾಸ ಏನೆಂದರೆ, ಇಂದು ಬೆಳಗ್ಗೆ ಪುಣೆಯ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಅಜಿತ್ ಪವಾರ್ ಮೃತಪಟ್ಟರು. ಆ ವಿಮಾನದ ಪೈಲಟ್ ಆಗಿದ್ದು ಓರ್ವ ಮಹಿಳೆ. ಆಕೆಯ ಹೆಸರು ಶಾಂಭವಿ ಪಾಠಕ್. ಮಹಿಳಾ ಪೈಲಟ್ ಇದ್ರೆ ವಿಮಾನ ಸರಾಗವಾಗಿ ಲ್ಯಾಂಡ್ ಆಗುತ್ತೆ ಎಂದಿದ್ದರು ಆದರೆ, ಇಂದು ವಿಮಾನ ಲ್ಯಾಂಡ್ ಆಗದೇ ನೆಲಕ್ಕೆ ಅಪ್ಪಳಿಸಿ ಪವಾರ್ ಅವರ ಪ್ರಾಣವೇ ಹೋಯಿತು. ಇದನ್ನು ನೋಡಿದಾಗ ವಿಧಿಯಾಟ ಎಷ್ಟೊಂದು ಘೋರ ಅಲ್ಲವೇ ಅನಿಸದೇ ಇರದು. ಸದ್ಯ ಅಜಿತ್ ಪವಾರ್ ಅವರ ಹಳೆಯ ಟ್ವೀಟ್ ವೈರಲ್ ಆಗುತ್ತಿದ್ದು, ಟ್ರೋಲ್ ಕೂಡ ಆಗುತ್ತಿದೆ. ನೆಟ್ಟಿಗರು ದುಃಖದಿಂದ ಮತ್ತು ವ್ಯಂಗ್ಯವಾಗಿಯೂ ಶೇರ್ ಮಾಡುತ್ತಿದ್ದಾರೆ.
ಶಾಂಭವಿ ಪಾಠಕ್ ಬಗ್ಗೆ
ಅಂದಹಾಗೆ, ಶಾಂಭವಿ ಪಾಠಕ್ ಓರ್ವ ಯುವ ವಾಣಿಜ್ಯ ಪೈಲಟ್ ಆಗಿದ್ದರು. ಅಜಿತ್ ಪವಾರ್ ಅವರ ಖಾಸಗಿ ಲಿಯರ್ಜೆಟ್ 45 ವಿಮಾನದಲ್ಲಿ (VT-SSK) ಸಹ-ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಏರ್ ಫೋರ್ಸ್ ಬಾಲ್ ಭಾರತಿ ಸ್ಕೂಲ್ನಲ್ಲಿ 2016-2018ರ ನಡುವೆ ಶಿಕ್ಷಣ ಪೂರ್ಣಗೊಳಿಸಿ, ನಂತರ ನ್ಯೂಜಿಲೆಂಡ್ ಇಂಟರ್ನ್ಯಾಷನಲ್ ಕಮರ್ಷಿಯಲ್ ಪೈಲಟ್ ಅಕಾಡೆಮಿಯಲ್ಲಿ ವಾಣಿಜ್ಯ ಪೈಲಟ್ ಮತ್ತು ಫ್ಲೈಟ್ ಕ್ರೂ ತರಬೇತಿ ಪಡೆದರು. ಶಾಂಭವಿ ಅವರು ಡಿಜಿಸಿಎರಿಂದ ಫ್ರೋಜನ್ ಏರ್ಲೈನ್ ಟ್ರಾನ್ಸ್ಪೋರ್ಟ್ ಪೈಲಟ್ ಲೈಸೆನ್ಸ್ (ATPL) ಪಡೆದಿದ್ದರು ಮತ್ತು ಮಧ್ಯಪ್ರದೇಶ ಫ್ಲೈಯಿಂಗ್ ಕ್ಲಬ್ನಲ್ಲಿ ಸಹಾಯಕ ಫ್ಲೈಟ್ ಇನ್‌ಸ್ಟ್ರಕ್ಟರ್ ಆಗಿ ಕೆಲಸ ಮಾಡಿದ್ದರು. 2022ರಿಂದ ವಿಎಸ್ಆರ್ ವೆಂಚರ್ಸ್ (ಡೆಲ್ಲಿ ಆಧಾರಿತ ಚಾರ್ಟರ್ ಕಂಪನಿ)ನಲ್ಲಿ ಕೆಲಸ ಮಾಡುತ್ತಿದ್ದರು.
ಮುಂಬೈನಿಂದ ಬೆಳಗ್ಗೆ 8.10 ಕ್ಕೆ ಹೊರಟ ವಿಮಾನ 8.50ಕ್ಕೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, 8.45ರ ಸುಮಾರಿಗೆ ವಿಮಾನ ಪತನಗೊಂಡಿದೆ. ಬೆಳಗ್ಗೆ ಪುಣೆ ಮತ್ತು ಬಾರಾಮತಿ ಪ್ರದೇಶದಲ್ಲಿ ದಟ್ಟ ಮಂಜು ಆವರಿಸಿತ್ತು. ಇದರಿಂದ ಪೈಲಟ್ಗೆ ಏನು ಕಾಣುತ್ತಿರಲಿಲ್ಲ. ವಿಮಾನ ನಿಲ್ದಾಣದ ಹತ್ತಿರ ಬರುತ್ತಿದ್ದಂತೆ ಪೈಲಟ್ ಶಾಂಭವಿ ಪಾಠಕ್, ಸ್ವಯಂ ಚಾಲಿತ ಮತ್ತು ವಿಸುವಲ್ ಲ್ಯಾಂಡಿಂಗ್ಗೆ ಪ್ರಯತ್ನಿಸಿದರು. ಲ್ಯಾಂಡಿಂಗ್ ಮಾಡುವಾಗ ವಿಮಾನ ನೇರವಾಗಿ ರನ್ವೇ ಸಮೀಪ ಬರಲಿಲ್ಲ ಹೀಗಾಗಿ ವಿಮಾನ, ಒಂದು ದೊಡ್ಡ ಟರ್ನ್ ತೆಗೆದುಕೊಂಡಿತು. ಇದರಿಂದ ಮೊದಲ ಲ್ಯಾಂಡಿಂಗ್ ಫೇಲ್ ಆಯಿತು. ದಟ್ಟ ಮಂಜಿನಿಂದಾಗಿ ವಿಮಾನವನ್ನು ರನ್ವೇಗೆ ಸರಿಯಾಗಿ ಹೊಂದಿಸುವುದು ತುಂಬಾ ಕಷ್ಟಕರವಾಗಿತ್ತು. ಮೊದಲ ಪ್ರಯತ್ನ ವಿಫಲವಾದಾಗ ಪೈಲಟ್ ಎರಡನೇ ಲ್ಯಾಂಡಿಂಗ್ ಪ್ರಯತ್ನವನ್ನು ಮಾಡಿದರು. ಎರಡನೇ ಪ್ರಯತ್ನದ ವೇಳೆ ಪೈಲಟ್ ಮೇಡೇ ಕರೆಯನ್ನು ನೀಡಿದರು. ಮೇಡೇ ಕರೆ ಎಂದರೆ, ವಿಮಾನ ಅಥವಾ ಹಡಗುಗಳಲ್ಲಿ ಗಂಭೀರ ತುರ್ತು ಸಂದರ್ಭದಲ್ಲಿ ರೇಡಿಯೋ ಮೂಲಕ ನೀಡುವ ಅಂತಾರಾಷ್ಟ್ರೀಯ ತುರ್ತು ಸಿಗ್ನಲ್ ಅಥವಾ ಸಹಾಯಕ್ಕಾಗಿ ಮಾಡುವ ಕರೆಯಾಗಿದೆ. ಎರಡನೇ ಪ್ರಯತ್ನದ ಲ್ಯಾಂಡಿಂಗ್ ವೇಳೆ ವಿಮಾನವು ರನ್ವೇ ಅಂಚಿನ ಬಳಿಯೇ ನೆಲಕ್ಕೆ ಅಪ್ಪಳಿಸಿತು. ಅಂದಾಜು 100 ಅಡಿ ಎತ್ತರದಲ್ಲಿ ಇರುವಾಗಲೇ ವಿಮಾನವೂ ತನ್ನ ನಿಯಂತ್ರಣವನ್ನು ಕಳೆದುಕೊಂಡಿತು. ನಿಯಂತ್ರಣ ತಪ್ಪಿದ ವಿಮಾನ, ರನ್ವೇ ತಲುಪುವ ಮುಂಚೆಯೇ ನೆಲಕ್ಕೆ ಅಪ್ಪಳಿಸಿತು. ನೆಲಕ್ಕೆ ಅಪ್ಪಳಿಸಿದ ಪರಿಣಾಮ, ತಕ್ಷಣ ಆ ಸ್ಥಳದಲ್ಲಿ ದೊಡ್ಡ ಸ್ಫೋಟ ಸಂಭವಿಸಿತು. ಇದಾದ ಬಳಿಕ ಅನೇಕ ಸಣ್ಣ ಸ್ಫೋಟಗಳು ಕೂಡ ಸಂಭವಿಸಿದವು. ಸರಣಿ ಸ್ಫೋಟಗಳಿಂದಾಗಿ ವಿಮಾನವು ಬೆಂಕಿಯ ಉಂಡೆಯಾಗಿ ಸ್ಥಳದಲ್ಲೇ ಹೊತ್ತಿ ಉರಿಯಿತು.
ಮೃತಪಟ್ಟವರು ಯಾರು?
ಪವಾರ್ ಅವರು ತಮ್ಮ ವೈಯಕ್ತಿಕ ಭದ್ರತಾ ಅಧಿಕಾರಿ, ಒಬ್ಬ ಸಹಾಯಕ ಮತ್ತು ಇಬ್ಬರು ಪೈಲಟ್‌ಗಳೊಂದಿಗೆ ಪ್ರಯಾಣಿಸುತ್ತಿದ್ದರು. ಐದು ಮಂದಿ ಪ್ರಯಾಣಿಕರಲ್ಲಿ ಯಾರೊಬ್ಬರು ಬದುಕುಳಿದಿಲ್ಲ. ಮೃತಪಟ್ಟವರನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ಅವರ ಪಿಎಸ್ಒ ವಿದಿಪ್ ಜಾಧವ್, ಪೈಲಟ್‌ಗಳಾದ ಸುಮಿತ್ ಕಪೂರ್ ಮತ್ತು ಸಂಭವಿ ಪಾಠಕ್ ಮತ್ತು ವಿಮಾನ ಸಹಾಯಕಿ ಪಿಂಕಿ ಮಾಲಿ ಎಂದು ಗುರುತಿಸಲಾಗಿದೆ.
ತನಿಖೆ ಆರಂಭ
ಈ ಘಟನೆಯ ಬೆನ್ನಲ್ಲೇ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತನಿಖೆ ಆರಂಭಿಸಿದೆ. ವಿಮಾನದ ಅಂತಿಮ ಕ್ಷಣಗಳನ್ನು ಪತ್ತೆಹಚ್ಚುವಲ್ಲಿ ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ನಿರ್ಣಾಯಕ ಪಾತ್ರ ವಹಿಸುತ್ತವೆ. ಸದ್ಯ ತನಿಖೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಗಳು ಬಯಲಾಗಲಿವೆ.
ಇನ್ನು ಈ ವಿಮಾನ ಅಪಘಾತವು ಮಹಾರಾಷ್ಟ್ರದ ರಾಜಕೀಯ ವ್ಯವಸ್ಥೆಯನ್ನು ಆಘಾತಗೊಳಿಸಿದೆ. ಏಕೆಂದರೆ, 66 ವರ್ಷದ ಅಜಿತ್ ಪವಾರ್, ರಾಜ್ಯದ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದರು ಮತ್ತು ಉಪಮುಖ್ಯಮಂತ್ರಿಯಾಗಿ ಆರನೇ ಅವಧಿಗೆ ಸೇವೆ ಸಲ್ಲಿಸುತ್ತಿದ್ದರು. ಆದರೆ, ಇಂದಿನ ದುರಂತ ರಾಜಕೀಯ ನಾಯಕರನ್ನು ಚಿಂತಿಸುವಂತೆ ಮಾಡಿದೆ. ರಾಜ್ಯದ ಜನರಿಗೆ ಪವಾರ್ ನೀಡಿದ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಸಿಎಂ ದೇವೆಂದ್ರ ಫಡ್ನಾವೀಸ್ ಮೂರು ದಿನಗಳ ಶೋಕಾಚಾರಣೆಯನ್ನು ಘೋಷಿಸಿದ್ದಾರೆ, (ಏಜೆನ್ಸೀಸ್).