ಮುಂದುವರಿದ ಇಂಡಿಗೋ ವಿಮಾನ ಸಂಸ್ಥೆಯ ಬಿಕ್ಕಟ್ಟು
- ದೇಶಾದ್ಯಂತ ಇಂಡಿಗೋ ಸಂಸ್ಥೆಯ ಅನೇಕ ವಿಮಾನಗಳ ಪ್ರಯಾಣ ರದ್ದು
- ನಾಲ್ಕನೇ ದಿನವೂ ಮುಂದುವರಿದ ದೇಶದ ಅತಿದೊಡ್ಡ ವಿಮಾನ ಸಂಸ್ಥೆಯ ಬಿಕ್ಕಟ್ಟು
- ಊಟ, ನೀರು ಇಲ್ಲದೇ ತಮ್ಮ ಲಗೇಜುಗಳನ್ನು ಮರಳಿ ಪಡೆಯಲು ಪ್ರಯಾಣಿಕರ ಪರದಾಟ
ನವದೆಹಲಿ: ದೇಶದ ಅತಿದೊಡ್ಡ ವಿಮಾನ ಸಂಸ್ಥೆ ಎಂಬ ಹೆಸರಿಗೆ ಭಾಜನವಾಗಿರುವ ಇಂಡಿಗೋ ಏರ್ಲೈನ್ಸ್ನ ( IndiGo Flights ) ಬಿಕ್ಕಟ್ಟು ಹಾಗೇ ಮುಂದುವರಿದಿದ್ದು ದೇಶಾದ್ಯಂತ ಅನೇಕ ವಿಮಾನ ನಿಲ್ದಾಣಗಳು ಅವ್ಯವಸ್ಥೆಯ ಆಗರವಾಗಿವೆ. ಸುಮಾರು 12 ಗಂಟೆಗಳಿಂದ ಊಟ ನೀರು ಇಲ್ಲದೇ ತಮ್ಮ ಲಗೇಜುಗಳನ್ನು ಮರಳಿ ಪಡೆಯುವುದಕ್ಕಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಈವರೆಗೆ 500ಕ್ಕೂ ಅಧಿಕ ವಿಮಾನಗಳು ರದ್ದಾಗಿರುವುದಾಗಿ ತಿಳಿದುಬಂದಿದೆ.
ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ನಲ್ಲಿ ಸಾವಿರಾರು ಸೂಟ್ಕೇಸ್ಗಳು ನೆಲದ ಮೇಲೆ ಬಿದ್ದಿವೆ. ಅನೇಕ ಪ್ರಯಾಣಿಕರು ನೆಲದ ಮೇಲೆಯೇ ಮಲಗಿದ್ದ ಸನ್ನಿವೇಶವು ನಿರ್ಮಾಣವಾಯಿತು. ಇನ್ನು ಕೆಲವರು ಕಾದು ಕಾದು ತಮ್ಮ ಕೋಪ ನೆತ್ತಿಗೇರಿ ವಿಮಾನಯಾನ ಸಂಸ್ಥೆಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಇದು ಇಂಡಿಗೋ ವಿಮಾನ ಸಂಸ್ಥೆಯಿಂದ ನಮಗಾಗುತ್ತಿರುವ ಕಿರುಕುಳ ಎಂದು ಕೆಲ ಪ್ರಯಾಣಿಕರು ಬೇಸರ ಹೊರಹಾಕಿದ್ದಾರೆ. ಸುಮಾರು 12 ಗಂಟೆಗಳಿಂದ ಕಾಯುತ್ತಿದ್ದರೂ ವಿಮಾನ ಸಂಸ್ಥೆಯಿಂದ ಇನ್ನೂ ನಮಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ನಾನಿಲ್ಲಿ 12 ಗಂಟೆಗಳಿಂದ ಕಾಯುತ್ತಿದ್ದೇನೆ. ಒಂದು ಅಥವಾ ಎರಡು ಗಂಟೆ ವಿಳಂಬವಾಗಬಹುದು ಎಂದು ಪ್ರತಿ ಬಾರಿ ಹೇಳುತ್ತಲೇ ಇದಾರೆ. ನಾವೀಗ ಮದುವೆಗೆ ಹೋಗುತ್ತಿದ್ದೇವೆ. ಈಕ್ಷಣದವರೆಗೆ ನಾವು ನಮ್ಮ ಲಗೇಜ್ ಕೂಡ ಪಡೆದಿಲ್ಲ. ಇಂಡಿಗೋ ಸಂಸ್ಥೆಯವರು ನಮಗೆ ಏನನ್ನೂ ಹೇಳುತ್ತಿಲ್ಲ. ಪ್ರಸ್ತುತ ಅತ್ಯಂತ ಕೆಟ್ಟ ಏರ್ಲೈನ್ಸ್ ಆಗಿದೆ. ಪರಿಸ್ಥಿತಿ ಹೀಗಿರುವಾಗ ಅವರೇಕೆ ಹೊಸ ಪ್ರಯಾಣಿಕರನ್ನು ಬರಮಾಡಿಕೊಂಡು ಲಗೇಜ್ ಪರಿಶೀಲನೆ ಮಾಡುತ್ತಿದ್ದಾರೆ ಅನ್ನೋದು ನನಗೆ ಅರ್ಥವಾಗುತ್ತಿಲ್ಲ ಎಂದು ಪ್ರಯಾಣಿಕನೊಬ್ಬ ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ನಿನ್ನೆ ಮಧ್ಯಾಹ್ನದಿಂದ ನಾನು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದೇನೆ. ಇಂಡಿಗೋ ವಿಮಾನ ಸಂಸ್ಥೆಯವರು ವಿಮಾನ ವಿಳಂಬ ಮಾಡುತ್ತಲೇ ಇದ್ದಾರೆ. ಆದರೆ, ಅವರಿಂದ ನಮಗೆ ಈ ಕ್ಷಣದವರೆಗೆ ಯಾವುದೇ ಸ್ಪಷ್ಟೀಕರಣ ಬಂದಿಲ್ಲ ಎಂದು ಮತ್ತೊಬ್ಬ ಪ್ರಯಾಣಿಕ ಹೇಳಿದ್ದಾರೆ.
ಪ್ರಸ್ತುತ ಪರಿಸ್ಥಿತಿ ತುಂಬಾ ಒತ್ತಡ ಎನಿಸುತ್ತಿದೆ. ನಾನಿಲ್ಲಿ ವಿಮಾನ ನಿಲ್ದಾಣದಲ್ಲಿ ಕುಳಿತು 14 ಗಂಟೆಗಳಾಗಿವೆ. ಆಹಾರ ಅಥವಾ ಇನ್ಯಾವುದೇ ಸೌಲಭ್ಯಕ್ಕೂ ಯಾವುದೇ ಕೂಪನ್‌ಗಳ ವ್ಯವಸ್ಥೆ ಇಲ್ಲ. ನನ್ನ ಸಂಪರ್ಕ ವಿಮಾನ ರದ್ದಾಗಿದೆ. ಇದರ ನಡುವೆ ಜನರೆಲ್ಲರು ಕೂಗಾಡುತ್ತಿದ್ದಾರೆ. ಆದರೆ, ಸಿಬ್ಬಂದಿ ಮಾತ್ರ ತಮಗೇನು ಗೊತ್ತೇ ಇಲ್ಲ ಅನ್ನುವಂತೆ ಯಾವುದೇ ಸ್ಪಷ್ಟೀಕರಣ ನೀಡದೆ ಸುಮ್ಮನಿದ್ದಾರೆ. ಇಂತಹ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಸಿಬ್ಬಂದಿಗೆ ತರಬೇತಿ ನೀಡಲ್ಲವೇ ಎಂದು ಮಗದೊಬ್ಬ ಪ್ರಯಾಣಿಕ ತುಂಬಾ ಬೇಸರ ಹೊರಹಾಕಿದರು.
ಇನ್ನು ಹೈದರಾಬಾದ್, ಬೆಂಗಳೂರು, ಮುಂಬೈ ಹಾಗೂ ಚೈನ್ನೈ ಸೇರಿದಂತೆ ಪ್ರಮುಖ ಮೆಟ್ರೋ ಪಾಲಿಟನ್ ನಗರಗಳ ವಿಮಾನ ನಿಲ್ದಾಣದಲ್ಲೂ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿಬಿದ್ದ ಪ್ರಯಾಣಿಕರು ಯಾವುದೇ ಆಹಾರ ಅಥವಾ ವಸತಿ ಸೌಕರ್ಯವಿಲ್ಲದೇ ಪರದಾಡುತ್ತಿದ್ದು, ಇಂಡಿಗೋ ವಿಮಾನ ಸಂಸ್ಥೆಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ನಿನ್ನೆ ಸಂಜೆ 7.30ಕ್ಕೆ ನಾನಿದ್ದ ವಿಮಾನ ಟೇಕಾಫ್ ಆಗಿತ್ತು. ನಾನು ನನ್ನ ತಂದೆಯೊಂದಿಗೆ ಸಂಜೆ 6 ಗಂಟೆ ಸುಮಾರಿಗೆ ವಿಮಾನ ನಿಲ್ದಾಣವನ್ನು ತಲುಪಿದೆ. ವಿಮಾನವು ಸಮಯಕ್ಕೆ ಸರಿಯಾಗಿ ತಲುಪಿತು. ಆದರೆ, ನಾವಿಲ್ಲಿಗೆ ಬಂದು 12 ಗಂಟೆಗಳಿಗಿಂತ ಹೆಚ್ಚು ಸಮಯವಾಗಿದೆ. ಇಷ್ಟಾದರೂ ಇಂಡಿಗೋ ಏರ್ಲೈನ್ಸ್ ಮಾತ್ರ ನಮಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಪ್ರಶ್ನೆ ಮಾಡಿದರೆ ವಿಳಂಬವಾಗಿದೆ ಎಂದು ಸಮಜಾಯಿಷಿ ನೀಡುತ್ತಾರೆ. ನಮಗೆ ಯಾವುದೇ ಸ್ಪಷ್ಟತೆ ಸಿಗುತ್ತಿಲ್ಲ. ಇದಿಷ್ಟೇ ಅಲ್ಲದೆ, ಆಹಾರ ಅಥವಾ ನೀರನ್ನೂ ಒದಗಿಸುತ್ತಿಲ್ಲ. ವಿಚಾರಿಸಿದರೆ ಇಂಡಿಗೋದಿಂದ ಯಾವುದೇ ಉತ್ತರ ಬರುತ್ತಿಲ್ಲ. ಹಿರಿಯ ನಾಗರಿಕರಿಗೂ ಯಾವುದೇ ಪರಿಹಾರವಿಲ್ಲ. ನಿಜಕ್ಕೂ ಇದು ತುಂಬಾ ಹಾಸ್ಯಾಸ್ಪದವಾಗಿದೆ ಎಂದು ಹೈದರಾಬಾದ್ ವಿಮಾನ ನಿಲ್ದಾಣದ ಪ್ರಯಾಣಿಕರೊಬ್ಬರು ಹೇಳಿದರು.
ನಾಲ್ಕನೇ ದಿನವೂ ಮುಂದುವರಿದ ಬಿಕ್ಕಟ್ಟು
ಇಂಡಿಗೋ ಕಾರ್ಯಾಚರಣೆಯಲ್ಲಿ ಉಂಟಾಗಿರುವ ಅಡಚಣೆಗಳು ಸತತ ನಾಲ್ಕನೇ ದಿನವೂ ಮುಂದುವರೆದಿವೆ. ಸುಮಾರು 20 ವರ್ಷ ಇತಿಹಾಸ ಹೊಂದಿರುವ ದೇಶ ಅತಿದೊಡ್ಡ ವಿಮಾನಯಾನ ಸಂಸ್ಥೆ ಭಾರಿ ಬಿಕ್ಕಟ್ಟು ಎದುರಿಸುತ್ತಿದೆ. ಕ್ಯಾಬಿನ್ ಸಿಬ್ಬಂದಿ ಸಮಸ್ಯೆಗಳು ಮತ್ತು ತಂತ್ರಜ್ಞಾನ ಸಮಸ್ಯೆಗಳು ಸೇರಿದಂತೆ ಹಲವಾರು ಕಾರಣಗಳಿಂದಾಗಿ 550 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. ಇವುಗಳಲ್ಲಿ, ಮುಂಬೈ ವಿಮಾನ ನಿಲ್ದಾಣದಲ್ಲಿ 104, ದೆಹಲಿ ವಿಮಾನ ನಿಲ್ದಾಣದಲ್ಲಿ 225, ಬೆಂಗಳೂರಿನಲ್ಲಿ 102 ಮತ್ತು ಹೈದರಾಬಾದ್‌ನಲ್ಲಿ 92 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಭೋಪಾಲ್ ವಿಮಾನ ನಿಲ್ದಾಣದಲ್ಲಿ ಕನಿಷ್ಠ ಐದು ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಅಂದಹಾಗೆ, ಪ್ರಸ್ತುತ ಇಂಥದ್ದೊಂದು ಬಿಕ್ಕಟ್ಟು ಎದುರಿಸುತ್ತಿರುವ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ, ಪ್ರತಿದಿನ ಸುಮಾರು 2,200 ವಿಮಾನಗಳನ್ನು ನಿರ್ವಹಿಸುತ್ತದೆ. ತನ್ನ ಕಾರ್ಯಾಚರಣೆಯಲ್ಲಿ ಭಾರಿ ಅಡ್ಡಿಯಾಗಿರುವುದನ್ನು ಸ್ವತಃ ಇಂಡಿಗೋ ಸಂಸ್ಥೆ ಒಪ್ಪಿಕೊಂಡಿದೆ. ಅಲ್ಲದೆ, ಈ ಕುರಿತು ತನ್ನ ಗ್ರಾಹಕರಲ್ಲಿ ಕ್ಷಮೆ ಕೂಡ ಕೇಳಿದೆ. ಸಣ್ಣ ತಂತ್ರಜ್ಞಾನದ ದೋಷಗಳು, ಚಳಿಗಾಲಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿಯಲ್ಲಿನ ಬದಲಾವಣೆಗಳು, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು, ವಾಯುಯಾನ ವ್ಯವಸ್ಥೆಯಲ್ಲಿ ಹೆಚ್ಚಿದ ಪ್ರಯಾಣಿಕರ ದಟ್ಟಣೆ ಮತ್ತು ಇತ್ತೀಚೆಗೆ ಅಪ್ಡೇಟ್ ಮಾಡಿದ ಸಿಬ್ಬಂದಿ ರೋಸ್ಟರಿಂಗ್ ನಿಯಮಗಳ (ವಿಮಾನ ಕರ್ತವ್ಯ ಸಮಯ ಮಿತಿಗಳು) ಅನುಷ್ಠಾನ ಸೇರಿದಂತೆ ಹಲವಾರು ಅಂಶಗಳು ನಮ್ಮ ವಿಮಾನ ಕಾರ್ಯಾಚರಣೆಗಳ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ವಿಮಾನಯಾನ ಸಂಸ್ಥೆ ಬುಧವಾರ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ, ನಮ್ಮ ಕಾರ್ಯಾಚರಣೆಗಳನ್ನು ಸಹಜ ಸ್ಥಿತಿಗೆ ತರಲು ಮತ್ತು ನಮ್ಮ ಸಮಯಪಾಲನೆಯನ್ನು ಹಂತಹಂತವಾಗಿ ಚೇತರಿಸಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಏರ್ಲೈನ್ಸ್ ಹೇಳಿದೆ.
ಹೊಸದಾಗಿ ಪರಿಚಯಿಸಿರುವ ಪೈಲಟ್ ರೋಸ್ಟರ್ ನಿಯಮಗಳು
ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ನವೆಂಬರ್ 1 ರಿಂದ ತನ್ನ ಹೊಸ ಫ್ಲೈಟ್ ಡ್ಯೂಟಿ ಟೈಂ ಲಿಮಿಟೇಷನ್ (FDTL) ಮಾನದಂಡಗಳನ್ನು ಜಾರಿಗೆ ತಂದಿದೆ. ಇದರ ಪ್ರಕಾರ, ಪೈಲಟ್‌ಗಳ ವಾರದ ವಿಶ್ರಾಂತಿ ಅವಧಿಯನ್ನು 48 ಗಂಟೆಗಳವರೆಗೆ ಹೆಚ್ಚಿಸಲಾಗಿದೆ. ಅಲ್ಲದೆ, ರಾತ್ರಿ ಕರ್ತವ್ಯದ ಸಮಯವನ್ನು ವಿಸ್ತರಿಸಲಾಗಿದ್ದು, ರಾತ್ರಿ ಲ್ಯಾಂಡಿಂಗ್‌ಗಳನ್ನು ವಾರಕ್ಕೆ ಆರು ಗಂಟೆಗಳ ಬದಲಿಗೆ ಎರಡು ಗಂಟೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಇದರೊಂದಿಗೆ ಪೈಲಟ್ಗಳು ಬೆಳಗ್ಗೆ 12 ರಿಂದ ಬೆಳಗ್ಗೆ 6 ರವರೆಗೆ ನಿರ್ವಹಿಸಬಹುದಾದ ಲ್ಯಾಂಡಿಂಗ್‌ಗಳ ಸಂಖ್ಯೆಯನ್ನೂ ಮಿತಿಗೊಳಿಸಿದೆ.
ಹೆಣಗಾಡುತ್ತಿರುವ ಇಂಡಿಗೋ
ಈ ಹೊಸ ಮಾನದಂಡಗಳಿಂದ ಪೈಲಟ್‌ಗಳ ಬೇಡಿಕೆ ಹೆಚ್ಚಾಗಿದೆ. ನವೆಂಬರ್ ತಿಂಗಳಲ್ಲಿ ವಿಮಾನ ರದ್ದತಿಯ ದತ್ತಾಂಶವನ್ನು ನೋಡಿದರೆ ಇಂಡಿಗೋ ತನ್ನ ಅವಶ್ಯಕತೆಯನ್ನು ಪೂರೈಸಲು ಹೆಣಗಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ. ಅಲ್ಲದೆ, ಇಂಡಿಗೋ ವಿಮಾನಯಾನ ಸಂಸ್ಥೆಯ ಆನ್-ಟೈಮ್ ಕಾರ್ಯಕ್ಷಮತೆ (OTP) ಕೂಡ ತೀವ್ರವಾಗಿ ಕುಸಿದಿದೆ. 2025 ಅಕ್ಟೋಬರ್ನಲ್ಲಿ ಶೇ. 84.1 ರಷ್ಟಿದ್ದ ಕಾರ್ಯಕ್ಷಮತೆ ಕಳೆದ ತಿಂಗಳು ಶೇ. 67.7 ಕ್ಕೆ ಇಳಿದಿದೆ, (ಏಜೆನ್ಸೀಸ್).