Petrol Bunk Robbery ಸಾಂದರ್ಭಿಕ ಚಿತ್ರ 
ದೇಶ

ಪೆಟ್ರೋಲ್ ಬಂಕ್‌ನಲ್ಲಿ ಡೀಸೆಲ್ ಕಳ್ಳತನ: ಸಾವು ಗೆದ್ದು ಬಂದ ಸಿಬ್ಬಂದಿ! ಇಂಟರ್ನೆಟ್‌ನಲ್ಲಿ ಮೈ ಜುಮ್ಮೆನಿಸುತ್ತಿದೆ ಈ ವೈರಲ್ ವಿಡಿಯೋ! Petrol Bunk Robbery

ಹರಿಯಾಣ: ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ತುಂಬಿಸಿಕೊಂಡು ಹಣ ನೀಡದೆ ವಾಹನ ಸವಾರರು ಪರಾರಿಯಾಗುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಆದರೆ, ಹರಿಯಾಣದ ಕುರುಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು (Petrol Bunk Robbery) ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಕೇವಲ ಹಣಕ್ಕಾಗಿ ಪೆಟ್ರೋಲ್ ಬಂಕ್ ಸಿಬ್ಬಂದಿಯೊಬ್ಬರ ಜೀವವನ್ನೇ ಪಣಕ್ಕಿಟ್ಟು, ಚಲಿಸುತ್ತಿದ್ದ ಕಾರಿನ ಬಾಗಿಲಿನಲ್ಲಿ ಒಂದು ಕಿಲೋಮೀಟರ್ ದೂರದವರೆಗೆ ನೇತಾಡಿಸಿಕೊಂಡು ಹೋದ ಆತಂಕಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಏನಿದು ಘಟನೆ?

ಕುರುಕ್ಷೇತ್ರದ ಪೆಟ್ರೋಲ್ ಬಂಕ್ ಒಂದಕ್ಕೆ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಬಿಳಿ ಬಣ್ಣದ ವೆರ್ನಾ ಕಾರೊಂದು ಬಂದಿತ್ತು. ಬಂಕ್‌ನ ಸಿಬ್ಬಂದಿಯಾದ ಲಬ್ಬು ಸಿಂಗ್ ಎಂಬುವವರು ಕಾರಿಗೆ 3,500 ರೂಪಾಯಿ ಮೌಲ್ಯದ ಡೀಸೆಲ್ ತುಂಬಿಸಿದರು. ಚಾಲಕನ ಕೈಯಲ್ಲಿ 500 ರೂಪಾಯಿ ಮುಖಬೆಲೆಯ ನೋಟುಗಳ ಕಂತೆ ಇದ್ದಿದ್ದರಿಂದ ಆರಂಭದಲ್ಲಿ ಸಿಬ್ಬಂದಿಗೆ ಯಾವುದೇ ಅನುಮಾನ ಬಂದಿರಲಿಲ್ಲ.
ಡೀಸೆಲ್ ತುಂಬಿದ ನಂತರ ಲಬ್ಬು ಸಿಂಗ್ ಅವರು ಬಿಲ್ ಹಣವನ್ನು ಪಡೆಯಲು ಕಾರಿನ ಡೋರ್ ಬಳಿ ಹೋಗುತ್ತಿದ್ದಂತೆಯೇ, ಚಾಲಕ ಇದ್ದಕ್ಕಿದ್ದಂತೆ ಕಾರನ್ನು ಸ್ಟಾರ್ಟ್ ಮಾಡಿ ವೇಗವಾಗಿ ಚಲಾಯಿಸಲು ಆರಂಭಿಸಿದ್ದಾನೆ.

ಪ್ರಾಣ ಉಳಿಸಿಕೊಳ್ಳಲು ಕಾರಿನ ಬಾಗಿಲಿಗೆ ಅಂಟಿಕೊಂಡ ಸಿಬ್ಬಂದಿ!

ಚಾಲಕ ಹಣ ನೀಡದೆ ಓಡಿ ಹೋಗುತ್ತಿರುವುದನ್ನು ಕಂಡು ಗಾಬರಿಯಾದ ಲಬ್ಬು ಸಿಂಗ್, ತಕ್ಷಣವೇ ಕಾರಿನ ಬಾಗಿಲು ತೆರೆದು ಒಳಗಿನ ಸೀಟಿನಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿದರು. ಆದರೆ, ಅಷ್ಟರಲ್ಲಾಗಲೇ ಚಾಲಕ ಕಾರಿನ ವೇಗವನ್ನು ಹೆಚ್ಚಿಸಿದ್ದರಿಂದ ಸಿಂಗ್ ಅವರಿಗೆ ಒಳಗಡೆ ಕೂರಲು ಸಾಧ್ಯವಾಗದೆ, ಕಾರಿನ ಹೊರಭಾಗದ ಬಾಗಿಲನ್ನೇ ಗಟ್ಟಿಯಾಗಿ ಹಿಡಿದುಕೊಂಡು ನೇತಾಡಬೇಕಾದ ಪರಿಸ್ಥಿತಿ ಎದುರಾಯಿತು.
ಕಾರು ವೇಗವಾಗಿ ಚಲಿಸುತ್ತಿದ್ದರೂ ಲಬ್ಬು ಸಿಂಗ್ ಅವರು ಚಾಲಕನಿಗೆ ಕಾರು ನಿಲ್ಲಿಸಿ ಹಣ ನೀಡುವಂತೆ ಪದೇ ಪದೇ ವಿನಂತಿಸಿಕೊಂಡರು. ಆದರೆ, ಚಾಲಕ ಕಾರನ್ನು ನಿಲ್ಲಿಸುವ ಬದಲು, ಹೆಚ್ಚು ಮಾತನಾಡಿದರೆ ಕಾರನ್ನು ಉರುಳಿಸಿಬಿಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ನೀನು ಡೀಸೆಲ್ ಹಣವನ್ನು ಕೇಳದಿದ್ದರೆ ಮಾತ್ರ ಕಾರು ನಿಲ್ಲಿಸುತ್ತೇನೆ, ಇಲ್ಲದಿದ್ದರೆ ಹೀಗೆಯೇ ಕರೆದೊಯ್ಯುತ್ತೇನೆ ಎಂದು ಹೆದರಿಸಿದ್ದಾನೆ. ಕೊನೆಗೆ ತನ್ನ ಜೀವ ಉಳಿಸಿಕೊಂಡರೆ ಸಾಕೆಂದು ಭಾವಿಸಿದ ಲಬ್ಬು ಸಿಂಗ್, ಚಾಲಕನ ಷರತ್ತಿಗೆ ಒಪ್ಪಿಕೊಂಡಿದ್ದಾರೆ.

1 ಕಿಲೋಮೀಟರ್ ದೂರ ಕರೆದೊಯ್ದು ರಸ್ತೆಗೆ ತಳ್ಳಿದ ಪಾಪಿ!

ಆರೋಪಿ ಚಾಲಕ ಹಾಗೂ ಕಾರಿನಲ್ಲಿದ್ದ ಇತರರು ಪೆಟ್ರೋಲ್ ಪಂಪ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ಸಿಬ್ಬಂದಿಯನ್ನು ಬಾಗಿಲಲ್ಲೇ ನೇತಾಡಿಸಿಕೊಂಡು ಹೋಗಿದ್ದಾರೆ. ನಿರ್ಜನ ಪ್ರದೇಶ ಬರುತ್ತಿದ್ದಂತೆಯೇ, ಚಲಿಸುತ್ತಿದ್ದ ವಾಹನದಿಂದಲೇ ಲಬ್ಬು ಸಿಂಗ್ ಅವರನ್ನು ರಸ್ತೆಗೆ ಹೊರಗೆ ತಳ್ಳಿ ಅತಿ ವೇಗವಾಗಿ ಪರಾರಿಯಾಗಿದ್ದಾರೆ.
ಅದೃಷ್ಟವಶಾತ್ ಲಬ್ಬು ಸಿಂಗ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಆರೋಪಿಗಳು ಬಳಸಿದ ಬಿಳಿ ಬಣ್ಣದ ವೆರ್ನಾ ಕಾರಿನ ಮುಂಭಾಗದಲ್ಲಿ ಅಥವಾ ಹಿಂಭಾಗದಲ್ಲಿ ಯಾವುದೇ ನಂಬರ್ ಪ್ಲೇಟ್ ಇರಲಿಲ್ಲ. ಪ್ಲಾನ್ ಮಾಡಿಕೊಂಡೇ ಅವರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.

ಸಿಸಿಟಿವಿ ಆಧಾರದ ಮೇಲೆ ತನಿಖೆ ಆರಂಭ

ಈ ಭೀಕರ ಘಟನೆಯ ದೃಶ್ಯಗಳು ಪೆಟ್ರೋಲ್ ಬಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಂಕ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡು, ನಂಬರ್ ಪ್ಲೇಟ್ ಇಲ್ಲದ ಆ ವಾಹನ ಮತ್ತು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಜಾಲ ಬಾರಿಸುತ್ತಿದ್ದಾರೆ. ಅಮಾಯಕ ನೌಕರನ ಪ್ರಾಣದೊಂದಿಗೆ ಚೆಲ್ಲಾಟವಾಡಿದ ಇಂತಹ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ (ಏಜೆನ್ಸೀಸ್​).