ಬರಲ್ಲ ಪೆಟ್ರೋಲ್-ಡೀಸೆಲ್ ಅಭಾವ: ಮಧ್ಯಪ್ರಾಚ್ಯ ಯುದ್ಧದ ನಡುವೆಯೂ ಭಾರತಕ್ಕೆ 60 ದಿನಗಳ ಇಂಧನ ಸುರಕ್ಷಾ ಕವಚ!
ನವದೆಹಲಿ: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ ತೈಲ(Fuel Security India) ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿರುವ ಬೆನ್ನಲ್ಲೇ, ಭಾರತ ಸರ್ಕಾರವು ದೇಶದ ಜನತೆಗೆ ದೊಡ್ಡ ಸಮಾಧಾನದ ಸುದ್ದಿ ನೀಡಿದೆ. ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ.
ಭಾರತದ ಬಳಿ ಇದೆ 2 ತಿಂಗಳ ಸ್ಟಾಕ್!
ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯ ಭೀತಿ ಎದುರಾಗಿದ್ದರೂ, ಭಾರತವು ಮುನ್ನೆಚ್ಚರಿಕಾ ಕ್ರಮವಾಗಿ ಬೃಹತ್ ಪ್ರಮಾಣದ ಇಂಧನವನ್ನು ಸಂಗ್ರಹಿಸಿಟ್ಟಿದೆ.
60 ದಿನಗಳ ದಾಸ್ತಾನು: ಸದ್ಯ ಭಾರತದ ಬಳಿ ಸುಮಾರು 60 ದಿನಗಳಿಗಾಗುವಷ್ಟು ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನು ಲಭ್ಯವಿದೆ.
ಒಟ್ಟು ಸಾಮರ್ಥ್ಯ: ದೇಶದ ಒಟ್ಟು ತೈಲ ಸಂಗ್ರಹಣಾ ಸಾಮರ್ಥ್ಯ 74 ದಿನಗಳಾಗಿದ್ದು, ಇದರಲ್ಲಿ ಆಯಕಟ್ಟಿನ ಭೂಗತ ಮೀಸಲು ನೆಲೆಗಳು ಸೇರಿವೆ.
ಮುಂದಿನ ಖರೀದಿ ಸುಗಮ: ಮುಂದಿನ ಎರಡು ತಿಂಗಳಿಗೆ ಬೇಕಾದ ಕಚ್ಚಾ ತೈಲದ ಖರೀದಿಯನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ ಎಂದು ಸರ್ಕಾರ ಖಚಿತಪಡಿಸಿದೆ.
ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಸರ್ಕಾರದ ಎಚ್ಚರಿಕೆ
ಸಾಮಾಜಿಕ ಜಾಲತಾಣಗಳಲ್ಲಿ ಪೆಟ್ರೋಲ್ ಖಾಲಿಯಾಗಲಿದೆ ಎಂಬ ಸುಳ್ಳು ಸುದೂಗಳನ್ನು ಹರಡಿ ಜನರಲ್ಲಿ ಭೀತಿ ಸೃಷ್ಟಿಸಲಾಗುತ್ತಿದೆ. ಇಂತಹ ದಾರಿ ತಪ್ಪಿಸುವ ವೀಡಿಯೋಗಳು ಮತ್ತು ಪ್ರಚಾರಗಳನ್ನು ನಂಬಬೇಡಿ ಎಂದು ಪೆಟ್ರೋಲಿಯಂ ಸಚಿವಾಲಯ ನಾಗರಿಕರಲ್ಲಿ ಮನವಿ ಮಾಡಿದೆ. ಕೆಲವು ಭಾಗಗಳಲ್ಲಿ ಜನರು ಮುಗಿಬಿದ್ದು ಪೆಟ್ರೋಲ್ ಹಾಕಿಸಿಕೊಳ್ಳುತ್ತಿರುವುದು ಕೇವಲ ಆತಂಕದಿಂದಲೇ ಹೊರತು ಇಂಧನ ಕೊರತೆಯಿಂದಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಶೇ.40 ಏರಿಕೆ!
ಅಡುಗೆ ಅನಿಲದ ಬಗ್ಗೆಯೂ ಸರ್ಕಾರ ಸಿಹಿಸುದ್ದಿ ನೀಡಿದೆ.
ದೇಶೀಯ ಉತ್ಪಾದನೆ: ಭಾರತದಲ್ಲಿ ಎಲ್‌ಪಿಜಿ ಉತ್ಪಾದನೆಯನ್ನು ಶೇ. 40 ರಷ್ಟು ಹೆಚ್ಚಿಸಲಾಗಿದ್ದು, ದಿನಕ್ಕೆ 50,000 ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ. ಇದು ದೇಶದ ಒಟ್ಟು ಬೇಡಿಕೆಯ ಶೇ. 60 ರಷ್ಟನ್ನು ಪೂರೈಸುತ್ತದೆ.
ವಿದೇಶದಿಂದ ಆಮದು: ಅಮೆರಿಕ, ರಷ್ಯಾ ಮತ್ತು ಆಸ್ಟ್ರೇಲಿಯಾದಿಂದ ಸುಮಾರು 800 ಟಿಎಂಟಿ (TMT) ಎಲ್‌ಪಿಜಿ ಹೊತ್ತ ಹಡಗುಗಳು ಈಗಾಗಲೇ ಭಾರತದತ್ತ ಪ್ರಯಾಣ ಬೆಳೆಸಿವೆ. ಇವು ಶೀಘ್ರದಲ್ಲೇ ಭಾರತದ 22 ಆಮದು ಟರ್ಮಿನಲ್‌ಗಳನ್ನು ತಲುಪಲಿವೆ.
ಬಂಕ್ ಮಾಲೀಕರಿಗೆ ವಿಶೇಷ ಸೌಲಭ್ಯ
ಇಂಧನ ಪೂರೈಕೆ ಸರಪಳಿಯಲ್ಲಿ ಯಾವುದೇ ಅಡೆತಡೆ ಉಂಟಾಗದಂತೆ ನೋಡಿಕೊಳ್ಳಲು, ಪೆಟ್ರೋಲ್ ಬಂಕ್ ಮಾಲೀಕರಿಗೆ ನೀಡಲಾಗುವ ಕ್ರೆಡಿಟ್ ಮಿತಿಯನ್ನು 1 ದಿನದಿಂದ 3 ದಿನಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಬಂಕ್ ಮಾಲೀಕರಿಗೆ ಹೆಚ್ಚಿನ ಹಣಕಾಸಿನ ಲಭ್ಯತೆ ಸಿಗಲಿದ್ದು, ಸಾರ್ವಜನಿಕರಿಗೆ ನಿರಂತರವಾಗಿ ತೈಲ ಪೂರೈಸಲು ಸಾಧ್ಯವಾಗುತ್ತದೆ.
ಜಾಗತಿಕ ಪರಿಸ್ಥಿತಿ vs ಭಾರತದ ಸ್ಥಿತಿ
ವಿಶ್ವದ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಪೆಟ್ರೋಲ್ ಬಂಕ್‌ಗಳು ಮುಚ್ಚುತ್ತಿವೆ ಮತ್ತು ಇಂಧನಕ್ಕೆ ರೇಷನಿಂಗ್ (ಮಿತಿ ಹೇರಿಕೆ) ಪದ್ಧತಿ ಜಾರಿಗೆ ಬಂದಿದೆ. ಆದರೆ, ಭಾರತವು ಅಂತಹ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿಲ್ಲ. ಭಾರತದ ತೈಲ ಕಂಪನಿಗಳು ಹಗಲಿರುಳು ಕೆಲಸ ಮಾಡುತ್ತಿದ್ದು, ಡಿಪೋಗಳಿಂದ ನಿರಂತರವಾಗಿ ಪೂರೈಕೆ ನಡೆಯುತ್ತಿದೆ ಎಂದು ಸರ್ಕಾರ ಭರವಸೆ ನೀಡಿದೆ,(ಏಜೆನ್ಸೀಸ್).