ಒಂದು ಸಿಮ್ಗೆ ಒಂದು ಲೀಟರ್ ಪೆಟ್ರೋಲ್ ಉಚಿತ
- ಒಂದು ಸಿಮ್ಗೆ ಒಂದು ಲೀಟರ್ ಪೆಟ್ರೋಲ್ ಉಚಿತ
- ತೆಲಂಗಾಣದಲ್ಲಿ ವಿಚಿತ್ರ ಆಫರ್!
- ಅಂಗಡಿ ಮುಂದೆ ಸಾಲುಗಟ್ಟಿ ನಿಂತ ಜನ
ತೆಲಂಗಾಣ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಬಿಸಿ ಇಡೀ ಜಗತ್ತಿಗೇ ತಟ್ಟಿದೆ ಎಂದರೆ ಸುಳ್ಳಲ್ಲ. ಈ ಸಮರದ ನೇರ ಪರಿಣಾಮ ಇಂಧನ ಪೂರೈಕೆಯ ಮೇಲೆ ಬೀಳಬಹುದು ಎನ್ನುವ ಭಯ ಈಗ ಭಾರತದಲ್ಲೂ ಶುರುವಾಗಿದೆ. ಇದೇ ಆತಂಕವನ್ನು ಬಂಡವಾಳ ಮಾಡಿಕೊಂಡಿರುವ ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯ ಮೊಬೈಲ್ ಮಳಿಗೆಯೊಂದು ಸೋಷಿಯಲ್ ಮೀಡಿಯಾದಲ್ಲಿ (Viral Video) ಸಖತ್ ಸೌಂಡ್ ಮಾಡುತ್ತಿದೆ.
ಸಾಮಾನ್ಯವಾಗಿ ಒಂದು ಮೊಬೈಲ್ ರೀಚಾರ್ಜ್ ಮಾಡಿಸಿದರೆ ಡೇಟಾ ಪ್ಯಾಕ್ ಅಥವಾ ಟಾಕ್‌ಟೈಮ್ ಸಿಗುವುದು ಗೊತ್ತು. ಆದರೆ ಇಲ್ಲೊಬ್ಬ ಕಿಲಾಡಿ ವ್ಯಾಪಾರಿ, ತನ್ನಲ್ಲಿ ಸಿಮ್ ಕಾರ್ಡ್ ಖರೀದಿಸುವ ಗ್ರಾಹಕರಿಗೆ ಒಂದು ಲೀಟರ್ ಪೆಟ್ರೋಲ್ ಉಚಿತವಾಗಿ ನೀಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಏನಿದು ಪೆಟ್ರೋಲ್ ಮಾರ್ಕೆಟಿಂಗ್ ಗಿಮಿಕ್?
ದಮ್ಮಪೇಟದಲ್ಲಿ ಹೊಸದಾಗಿ ಆರಂಭವಾಗಿರುವ MSP (ಭಾರತಿ ಏರ್‌ಟೆಲ್) ಮೊಬೈಲ್ ಸೇವಾ ಕೇಂದ್ರ ಈ ವಿಭಿನ್ನ ಐಡಿಯಾ ಹೊತ್ತು ತಂದಿದೆ. ನೀವು ನಿಮ್ಮ ಹಳೆಯ ನೆಟ್‌ವರ್ಕ್ ಬಿಟ್ಟು ಇವರಲ್ಲಿ ಏರ್‌ಟೆಲ್‌ಗೆ ಪೋರ್ಟ್ (MNP) ಮಾಡಿಸಿಕೊಂಡರೆ ಅಥವಾ 350 ರೂಪಾಯಿಗಳ ಹೊಸ ರೀಚಾರ್ಜ್ ಪ್ಲಾನ್ ಆರಿಸಿಕೊಂಡರೆ, ಅವರು ನಿಮಗೆ ಒಂದು ಲೀಟರ್ ಪೆಟ್ರೋಲ್ ಉಚಿತವಾಗಿ ನೀಡುತ್ತಿದ್ದಾರೆ.
ನಮ್ಮ ಕಚೇರಿಯ ಬಗ್ಗೆ ಜನರಿಗೆ ತಿಳಿಯಲಿ ಎನ್ನುವ ಉದ್ದೇಶದಿಂದ ಈ ಆಫರ್ ನೀಡುತ್ತಿದ್ದೇವೆ. ಸದ್ಯಕ್ಕೆ ಪೆಟ್ರೋಲ್ ಅನಿಶ್ಚಿತತೆ ಇರುವುದರಿಂದ ಜನರೂ ಕೂಡ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅಂಗಡಿಯ ಮಾಲೀಕರು ಹೇಳಿಕೊಂಡಿದ್ದಾರೆ. ಈ ಆಫರ್‌ನ ವಿಡಿಯೋ ಕ್ಲಿಪ್ ಈಗ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಫುಲ್ ವೈರಲ್ ಆಗಿದ್ದು, ಗ್ರಾಹಕರು ಅಂಗಡಿಯ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.
ರಾಜ್ಯದಲ್ಲಿ ಪೆಟ್ರೋಲ್ ಕೊರತೆ ಇದೆಯೇ?
ಒಂದೆಡೆ ಇಂತಹ ಮಾರ್ಕೆಟಿಂಗ್ ತಂತ್ರಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಜನರಲ್ಲಿ ಪೆಟ್ರೋಲ್ ಸಿಗುವುದಿಲ್ಲ ಎನ್ನುವ ಭೀತಿ ಆವರಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ತೆಲಂಗಾಣ ನಾಗರಿಕ ಸರಬರಾಜು ಇಲಾಖೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಅಧಿಕೃತ ಮಾಹಿತಿಯ ಪ್ರಕಾರ, ತೆಲಂಗಾಣ ರಾಜ್ಯಕ್ಕೆ ಪ್ರತಿದಿನ ಸುಮಾರು 7,443 ಕಿಲೋಲೀಟರ್ ಪೆಟ್ರೋಲ್ ಪೂರೈಕೆಯಾಗುತ್ತಿದೆ. 11,081 ಕಿಲೋಲೀಟರ್ ಡೀಸೆಲ್ ಲಭ್ಯವಿದ್ದು, ಒಟ್ಟಾರೆ ದಿನಕ್ಕೆ 18,500 ಕಿಲೋಲೀಟರ್‌ಗಿಂತ ಹೆಚ್ಚಿನ ಇಂಧನ ಒಳಹರಿವು ಇದ್ದು, ಮುಂದಿನ 40 ರಿಂದ 45 ದಿನಗಳವರೆಗೆ ಬೇಕಾಗುವಷ್ಟು ಸ್ಟಾಕ್ ಸರ್ಕಾರದ ಬಳಿ ಇದೆ ಎಂದು ಮಾಹಿತಿ ನೀಡಿದೆ.
ಕೃತಕ ಅಭಾವ ಸೃಷ್ಟಿಯಾಗುತ್ತಿದೆಯೇ?
ಸರ್ಕಾರದ ಬಳಿ ಸ್ಟಾಕ್ ಇದ್ದರೂ, ಪೆಟ್ರೋಲ್ ಬಂಕ್‌ಗಳ ಮುಂದೆ ನೋ ಸ್ಟಾಕ್ ಬೋರ್ಡ್‌ಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಮುಖ್ಯ ಕಾರಣ ಪ್ಯಾನಿಕ್ ಬೈಯಿಂಗ್. ಅಂದರೆ, ಮುಂದೆ ಪೆಟ್ರೋಲ್ ಸಿಗದೇ ಇರಬಹುದು ಎಂಬ ಭಯದಲ್ಲಿ ಜನ ಮುಗಿಬಿದ್ದು ಪೆಟ್ರೋಲ್ ಹಾಕಿಸುತ್ತಿದ್ದಾರೆ ಮತ್ತು ಕ್ಯಾನ್‌ಗಳಲ್ಲಿ ಸಂಗ್ರಹಿಸಿಡುತ್ತಿದ್ದಾರೆ. ಇದರಿಂದಾಗಿ ಸಾಮಾನ್ಯ ಬೇಡಿಕೆಗಿಂತ ಹೆಚ್ಚಿನ ಒತ್ತಡ ಪಂಪ್‌ಗಳ ಮೇಲೆ ಬೀಳುತ್ತಿದೆ.
ಜೊತೆಗೆ, ತೈಲ ಕಂಪನಿಗಳಿಂದ ಪೂರೈಕೆ ವಿಳಂಬವಾಗುತ್ತಿದೆ ಎಂದು ಕೆಲವು ಡೀಲರ್‌ಗಳು ದೂರುತ್ತಿದ್ದಾರೆ. ಈ ವದಂತಿಗಳು ಮತ್ತು ಹಠಾತ್ ಬೇಡಿಕೆ ಏರಿಕೆಯಿಂದಾಗಿ ನಗರ ಪ್ರದೇಶಗಳಲ್ಲಿ ಪೆಟ್ರೋಲ್ ಕೊರತೆಯ ಕೃತಕ ವಾತಾವರಣ ನಿರ್ಮಾಣವಾಗಿದೆ.
ವ್ಯಾಪಾರಿಗಳ ಜಾಣ್ಮೆ, ಜನ ಸಾಮಾನ್ಯರ ಸಂಭ್ರಮ!
ವ್ಯಾಪಾರದಲ್ಲಿ ಲಾಭಕ್ಕಿಂತ ಹೆಚ್ಚಾಗಿ ಪ್ರಚಾರ ಮುಖ್ಯ ಎನ್ನುವುದನ್ನು ಈ ಮೊಬೈಲ್ ಅಂಗಡಿಯವರು ಸಾಬೀತುಪಡಿಸಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆ ಮತ್ತು ಕೊರತೆಯ ಭಯದ ನಡುವೆ ಇಂತಹದೊಂದು ಆಫರ್ ನೀಡುವುದು ರಿಸ್ಕ್ ಹೌದಾದರೂ, ಗ್ರಾಹಕರನ್ನು ಸೆಳೆಯುವಲ್ಲಿ ಇವರು ಯಶಸ್ವಿಯಾಗಿದ್ದಾರೆ,(ಏಜನ್ಸೀಸ್).