Naredra Modi , Kiren Rijiju
- ರಾಜಸ್ಥಾನದಲ್ಲಿರುವ ಅಜ್ಮೀರ್ ಷರೀಫ್ ದರ್ಗಾ
- 12 ನೇ ಶತಮಾನದಲ್ಲಿ ಭಾರತಕ್ಕೆ ಆಗಮಿಸಿದ ಖ್ವಾಜಾ ಮೊಯಿನುದ್ದೀನ್ ಚಿಸ್ತಿ
- ಶಿವನ ದೇವಾಲಯವನ್ನು ಕೆಡವಿ ದರ್ಗಾ ನಿರ್ಮಿಸಿರುವ ಆರೋಪ
- ಪ್ರಧಾನಿ ಚಾದರ್ ಅರ್ಪಿಸಿದರೆ ದಾಳಿಕೋರರನ್ನು ವೈಭವಿಕರಿಸಿದಂತಾಗುತ್ತದೆ
ನವದೆಹಲಿ : ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ 814ನೇ ವಾರ್ಷಿಕ ಉರುಸ್ ಸಮಯದಲ್ಲಿ ರಾಜಸ್ಥಾನದ ಪ್ರಸಿದ್ಧ ಅಜ್ಮೀರ್ ಷರೀಫ್ ದರ್ಗಾಕ್ಕೆ ಪ್ರಧಾನಿ ನರೇಂದ್ರ ಮೋದಿ (Naredra Modi) ಚಾದರ್ ಅರ್ಪಿಸದಂತೆ ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಅವರಿದ್ದ ರಜಾಕಾಲೀನ ಪೀಠದೆದುರು ತುರ್ತು ವಿಚಾರಣೆ ಕೋರಿ ಅರ್ಜಿ ಸಲ್ಲಿಸಲಾಯಿತು. ವರದಿಗಳ ಪ್ರಕಾರ, ಪ್ರಧಾನಿ ಮೋದಿ ಪರವಾಗಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇಂದು ಚಾದರ್ ಅರ್ಪಿಸಲಿದ್ದಾರೆ.
ಅಜ್ಮೀರ್ ದರ್ಗಾದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಚಾದರ್ ಅರ್ಪಿಸುವುದನ್ನು ತಡೆಯುವಂತೆ ತಡೆಯಾಜ್ಞೆ ಕೋರುತ್ತಿದ್ದೇವೆ. ಅಲ್ಲಿ ಇರುವ ಭಗವಾನ್ ಶ್ರೀ ಸಂಕಟಮೋಚನ್ ಮಹಾದೇವ್ ವಿರಾಜಮಾನ್ ದೇವಸ್ಥಾನಕ್ಕೆ ಸಂಬಂಧಿಸಿದ ಅರ್ಜಿ ಬಾಕಿ ಇದೆ ಎಂದು ಅರ್ಜಿದಾರರು ತಿಳಿಸಿದರು. ಆದರೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಪೀಠ ತುರ್ತು ಈ ಕುರತು ವಿಚಾರಣೆಯನ್ನು ನಿರಾಕರಿಸಿತು.
12 ನೇ ಶತಮಾನದಲ್ಲಿ ಶಹಾಬುದ್ದೀನ್ ಘೋರಿಯ ಆಕ್ರಮಣದ ಸಮಯದಲ್ಲಿ ಭಾರತಕ್ಕೆ ಮೊಯಿನುದ್ದೀನ್ ಚಿಸ್ಟಿ ಬಂದಿದ್ದು ಇತನು ವಿದೇಶಿ ಆಕ್ರಮಣಕಾರರೊಂದಿಗೆ ಸಂಬಂಧ ಹೊಂದಿದ್ದು ಮತಾಂತರವನ್ನು ಪ್ರೋತ್ಸಾಹಿಸಿದ್ದಾನೆಂದು ಐತಿಹಾಸಿಕ ದಾಖಲೆಗಳು ಹೇಳುತ್ತವೆ. ಇಂತಹ ಐತಿಹಾಸಿಕ ವ್ಯಕ್ತಿಯನ್ನುಪೋಷಿಸುವುದು ಮತ್ತು ವೈಭವೀಕರಿಸುವುದು ಸಂವಿಧಾನದ ಹಲವಾರು ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಮತ್ತು ಯಾವುದೇ ಕಾನೂನು ಅಥವಾ ಸಾಂವಿಧಾನಿಕ ಆಧಾರವನ್ನು ಹೊಂದಿಲ್ಲ ಎಂದು ಅರ್ಜಿಯಲ್ಲಿ ನಮೂದಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಕೂಡ ಅಜ್ಮೀರ್ ನ್ಯಾಯಾಲಯದಲ್ಲಿ ಇದೇ ರೀತಿಯ ಅರ್ಜಿ ಸಲ್ಲಿಸಲಾಗಿತ್ತು.ದರ್ಗಾವನ್ನು ಶಿವನ ದೇಗುಲದ ಮೇಲೆ ನಿರ್ಮಿಸಲಾಗಿದ್ದು ಅದನ್ನು ಭಗವಾನ್ ಶ್ರೀ ಸಂಕಟಮೋಚನ್ ಮಹಾದೇವ್ ವಿರಾಜಮಾನ್ ದೇವಸ್ಥಾನ ಎಂದು ಘೋಷಿಸುವಂತೆ ಕೋರಿ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಅರ್ಜಿ ಸಲ್ಲಿಸಿದ್ದರು.
ವಿವಾದ ನ್ಯಾಯಾಲಯದಲ್ಲಿರುವಾಗ ಕೇಂದ್ರ ಸರ್ಕಾರ ಚಾದರ್ ನೀಡಿರುವುದು ನ್ಯಾಯಾಂಗ ಸ್ವಾತಂತ್ರ್ಯ ಮತ್ತು ನ್ಯಾಯಸಮ್ಮತ ವಿಚಾರಣೆಯ ಹಕ್ಕನ್ನು ಹಾಳುಗೆಡವುತ್ತದೆ. ಈ ಬೆಳವಣಿಗೆಗಳಿಂದಾಗಿ ಇಡೀ ಪ್ರಕರಣ ನೆಲೆ ಕಳೆದುಕೊಳ್ಳುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಚಾದರ್ ನೀಡಬಾರದು ಎಂದು ಅವರು ಪ್ರತಿಪಾದಿಸಿದ್ದರು,(ಏಜನ್ಸೀಸ್).