ಮರ್ಯಾದೆ ಹತ್ಯೆ ಆತಂಕ: ಕುಂಭಮೇಳದ ವೈರಲ್​ ಹುಡ್ಗಿ ಮೊನಾಲಿಸಾಗೆ ಭದ್ರತೆ ನೀಡಲು ಕೋರ್ಟ್​ ಆದೇಶ! Kumbh Mela viral girl  
ದೇಶ

ಮರ್ಯಾದೆ ಹತ್ಯೆ ಆತಂಕ: ಕುಂಭಮೇಳದ ವೈರಲ್​ ಹುಡ್ಗಿ ಮೊನಾಲಿಸಾಗೆ ಭದ್ರತೆ ನೀಡಲು ಕೋರ್ಟ್​ ಆದೇಶ! Kumbh Mela viral girl

ಪ್ರಮುಖ ಮುಖ್ಯಾಂಶಗಳು

  • ಸೂಕ್ತ ಭದ್ರತೆ ಕೋರಿ ಕೇರಳ ಹೈಕೋರ್ಟ್​ ಮೆಟ್ಟಿಲೇರಿದ ಕುಂಭಮೇಳದ ವೈರಲ್​ ಹುಡುಗಿ
  • ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆ ಆದೇಶ ಹೊರಡಿಸಿದ ಕೇರಳ ಹೈಕೋರ್ಟ್​
  • ಕೇರಳದಲ್ಲಿದ್ದರಷ್ಟೇ ನಾನು ಬದುಕಿರುತ್ತೇನೆಂದು ಹೈಕೋರ್ಟ್ ಮುಂದೆ ಕಣ್ಣೀರಿಟ್ಟ ಮೊನಾಲಿಸಾ
ಕೊಚ್ಚಿ: ತಮ್ಮ ಜೀವಕ್ಕೆ ಅಪಾಯವಿದೆ ಅಂತ ಕುಂಭಮೇಳದ ಮೂಲಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ( Kumbh Mela viral girl ) ಮೊನಾಲಿಸಾ ಭೋಸ್ಲೆ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಆಕೆಗೆ ಸೂಕ್ತ ಸುರಕ್ಷತೆಯನ್ನು ಖಾತ್ರಿಪಡಿಸುವಂತೆ ಪೊಲೀಸರಿಗೆ ಮಹತ್ವದ ನಿರ್ದೇಶನ ನೀಡಿದೆ.
ನಾನು ಸದ್ಯ ಕೇರಳಂನಲ್ಲಿ ಇರುವುದರಿಂದ ಬದುಕಿದ್ದೇನೆ. ಒಂದು ವೇಳೆ ಮಧ್ಯಪ್ರದೇಶಕ್ಕೆ ಮರಳಿದರೆ, ಅಲ್ಲಿ ನನ್ನನ್ನು 'ಮರ್ಯಾದೆ ಹತ್ಯೆ' ಮಾಡುತ್ತಾರೆ ಎಂದು ಮೊನಾಲಿಸಾ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಗೆ ರಕ್ಷಣೆ ನೀಡುವಂತೆ ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರಿಗೆ ಹೈಕೋರ್ಟ್ ಆದೇಶಿಸಿದೆ. ಜೊತೆಗೆ, ಈ ಕುರಿತು ಕೇರಳ ರಾಜ್ಯ ಸರ್ಕಾರ ಮತ್ತು ಎಸ್‌ಎಚ್‌ಒ ಅವರಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯವು, ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿದೆ.
ಅಪ್ರಾಪ್ತೆಯನ್ನು ಅಪಹರಿಸಿ ವಿವಾಹವಾಗಿದ್ದಾರೆ ಎಂಬ ಗಂಭೀರ ಆರೋಪವನ್ನು ಎದುರಿಸುತ್ತಿರುವ ಮೊಹಮ್ಮದ್ ಫರ್ಮಾನ್ ಅವರ ಬಂಧನಕ್ಕೆ ಕೇರಳ ಹೈಕೋರ್ಟ್ ಒಂದು ತಿಂಗಳ ಕಾಲ ತಡೆಯಾಜ್ಞೆ ನೀಡಿದೆ. ಅಲ್ಲದೆ, ಈ ಒಂದು ತಿಂಗಳ ನಿಗದಿತ ಅವಧಿಯಲ್ಲಿ ಫರ್ಮಾನ್ ಅವರು ಜಾಮೀನಿಗಾಗಿ ಸಂಬಂಧಪಟ್ಟ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈ ಪ್ರಕರಣವು ಈಗಾಗಲೇ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಬಾಕಿ ಇರುವುದರಿಂದ, ಫರ್ಮಾನ್ ಸಲ್ಲಿಸಿರುವ ಅರ್ಜಿಯನ್ನು ಕೇವಲ 'ಟ್ರಾನ್ಸಿಟ್ ಬೇಲ್' (Transit Bail) ಅಥವಾ ಹಂಗಾಮಿ ಜಾಮೀನು ಅರ್ಜಿಯನ್ನಾಗಿ ಮಾತ್ರ ಪರಿಗಣಿಸಲು ಸಾಧ್ಯ ಎಂದು ನ್ಯಾಯಾಲಯವು ಇದೇ ವೇಳೆ ಸ್ಪಷ್ಟನೆ ನೀಡಿದೆ.
ಮೊಹಮ್ಮದ್ ಫರ್ಮಾನ್ ಸಲ್ಲಿಸಿದ್ದ ನಿರೀಕ್ಷಿತ ಜಾಮೀನು ಅರ್ಜಿಯನ್ನು ಮಧ್ಯಪ್ರದೇಶ ಪೊಲೀಸರು ನ್ಯಾಯಾಲಯದಲ್ಲಿ ಬಲವಾಗಿ ವಿರೋಧಿಸಿದ್ದಾರೆ. ಯುವತಿಯು ಅಪ್ರಾಪ್ತ ವಯಸ್ಕಳಾಗಿದ್ದರಿಂದ ಇವರಿಬ್ಬರ ನಡುವೆ ನಡೆದ ಮದುವೆಯು ಕಾನೂನುಬದ್ಧವಾಗಿ ಅಸಿಂಧು ಎಂದು ಪೊಲೀಸರು ವಾದಿಸಿದ್ದಾರೆ. ಅಲ್ಲದೆ, ಅಪ್ರಾಪ್ತೆಯ ಜನ್ಮ ದಿನಾಂಕದ ಪ್ರಮಾಣಪತ್ರದಲ್ಲಿ ತಿದ್ದುಪಡಿಗಳನ್ನು ಮಾಡುವ ಮೂಲಕವೇ ಈ ವಿವಾಹವನ್ನು ಮಾಡಲಾಗಿದೆ ಎಂದು ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಮೊಹಮ್ಮದ್ ಫರ್ಮಾನ್ ವಿರುದ್ಧ ಅಪಹರಣ, ಪೋಕ್ಸೋ (POCSO) ಕಾಯ್ದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ (SC/ST Act) ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ಈ ಆರೋಪಗಳನ್ನು ನಿರಾಕರಿಸಿರುವ ಯುವತಿಯು, ತನಗೆ ಈಗಾಗಲೇ 18 ವರ್ಷ ತುಂಬಿದ್ದು, ಮಧ್ಯಪ್ರದೇಶ ಪೊಲೀಸರು ಮಂಡಿಸುತ್ತಿರುವ ದಾಖಲೆಗಳೇ ನಕಲಿ ಎಂದು ವಾದಿಸುತ್ತಿದ್ದಾಳೆ.
ಯುವತಿಯು ಮಾರ್ಚ್ 11 ರಂದು ವಿವಾಹವಾಗಿದ್ದು, ಈ ಕುರಿತು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (NCST) ನಡೆಸಿದ ತನಿಖೆಯ ಪ್ರಕಾರ ಮದುವೆಯ ಸಮಯದಲ್ಲಿ ಆಕೆಗೆ ಕೇವಲ 16 ವರ್ಷ ವಯಸ್ಸಾಗಿತ್ತು ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ವಯಸ್ಸಿನ ಪುರಾವೆಗಾಗಿ ಯುವತಿಯು ಸಲ್ಲಿಸಿರುವ ಜನ್ಮ ಪ್ರಮಾಣಪತ್ರವು ಸಂಪೂರ್ಣವಾಗಿ ನಕಲಿಯಾಗಿದೆ ಎಂದು ಆಯೋಗವು ಸ್ಪಷ್ಟಪಡಿಸಿದೆ, (ಏಜೆನ್ಸೀಸ್​).