Prashant Kishor > ಐತಿಹಾಸಿಕ ಗೆಲುವಿಗೆ ಮೂರು ಕಾರಣ ನೀಡಿದ ಪಿಕೆ  
ದೇಶ

ಇದು ಬಿಜೆಪಿಯ ಅಹಂಕಾರದ ವಿರುದ್ಧದ ಸ್ಪಷ್ಟ ಸಂದೇಶ!...ಐತಿಹಾಸಿಕ ಗೆಲುವಿಗೆ ಮೂರು ಕಾರಣ ನೀಡಿದ ಪಿಕೆ | Prashant Kishor

ಬಂಕಿಪುರ ಕ್ಷೇತ್ರದ ಜನರು ನೀಡಿರುವ ತೀರ್ಪು ಅಹಂಕಾರದ ವಿರುದ್ಧದ ಸ್ಪಷ್ಟ ಸಂದೇಶ ಹಾಗೂ ಬಿಹಾರದ ಜನತೆ ಜಾತಿ-ಕೋಮು ರಾಜಕೀಯವನ್ನು ಮೀರಿ ಬೆಳೆಯಲು ಸಿದ್ಧರಾಗಿದ್ದಾರೆ ಎಂಬುದಕ್ಕೆ ಹಿಡಿದ ಕೈಗನ್ನಡಿ ಎಂದು ಜನ ಸುರಾಜ್ ಪಕ್ಷದಿಂದ ಗೆಲುವು ಸಾಧಿಸಿರುವ ಪ್ರಶಾಂತ್ ಕಿಶೋರ್ (Prashant Kishor) ಹೇಳಿದ್ದಾರೆ.

ಇಂದು ಇಂಡಿಯಾ ಟಿವಿ ಜೊತೆ ಮಾತನಾಡಿರುವ ಪ್ರಶಾಂತ್​, ವರ್ಷಗಳಿಂದ ಆರ್‌ಜೆಡಿ ಮತ್ತು ಲಾಲೂ ಪ್ರಸಾದ್ ಯಾದವ್ ಬಗ್ಗೆ ಆತಂಕ ಸೃಷ್ಟಿಸಿ ಬಿಜೆಪಿ ಇಲ್ಲಿ ಗೆಲುವು ಸಾಧಿಸಿತ್ತು, ಈ ಬಾರಿ ಕ್ಷೇತ್ರದ ಮತದಾರರು ಆ ಭಯದ ರಾಜಕೀಯವನ್ನು ಬದಿಗೊತ್ತಿ, ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ಸ್ಪಷ್ಟ ಹಾಗೂ ಗಟ್ಟಿಯಾದ ಪರ್ಯಾಯವಾಗಿ ತಮ್ಮ ಜನ ಸುರಾಜ್ ಪಕ್ಷವನ್ನು ಪೂರ್ಣ ನಂಬಿಕೆಯಿಂದ ಬೆಂಬಲಿಸಿದ್ದಾರೆ ಎಂದರು.

ಈ ಗೆಲುವಿಗೆ 3 ಕಾರಣ ನೀಡಿದ ಪ್ರಶಾಂತ್​ ಕಿಶೋರ್​!..

ತಮ್ಮ ಪಕ್ಷದ ಈ ಐತಿಹಾಸಿಕ ಯಶಸ್ಸಿಗೆ ಪ್ರಶಾಂತ್ ಕಿಶೋರ್ ಪ್ರಮುಖವಾಗಿ ಮೂರು ಕಾರಣಗಳನ್ನು ನೀಡಿರುವ ಪ್ರಶಾಂತ್​, ಮೊದಲನೆಯದಾಗಿ, ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ಬಿಜೆಪಿ ಆಡಳಿತದ ಮೇಲಿನ ಅಪನಂಬಿಕೆ ಹಾಗೂ ಸಾರ್ವಜನಿಕರಲ್ಲಿ ಹೆಚ್ಚಿದ್ದ ಆಕ್ರೋಶವೇ ಈ ಗೆಲುವಿಗೆ ಮುಖ್ಯ ಕಾರಣವಾಗಿದೆ. ಮತದಾರರು ಜಾತಿ ಮತ್ತು ಕೋಮು ರಾಜಕೀಯವನ್ನು ತೊರೆದು ಉತ್ತಮ ಆಡಳಿತ ನೀಡುವ ಪರ್ಯಾಯದತ್ತ ಮುಖ ಮಾಡಿದ್ದಾರೆ. ಎರಡನೆಯದಾಗಿ, ಬಿಜೆಪಿಯ ಸ್ಥಳೀಯ ನಾಯಕರ ಅತಿಯಾದ ಆತ್ಮವಿಶ್ವಾಸ ಮತ್ತು ಅಹಂಕಾರವೇ ಅವರ ಹಿನ್ನಡೆಗೆ ದಾರಿಯಾಯಿತು. ಯಾರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೂ ಗೆಲುವು ಖಚಿತ ಎಂಬ ಬಿಜೆಪಿ ನಾಯಕರ ಭಾವನೆಯ ವಿರುದ್ಧ ಬಂಕಿಪುರ ಜನತೆ ಸ್ಪಷ್ಟವಾಗಿ ಮತ ಚಲಾಯಿಸಿದ್ದಾರೆ.
ಮೂರನೆಯದಾಗಿ, ಬಿಜೆಪಿ ಮತ್ತು ಎನ್‌ಡಿಎ ನಾಯಕರು ತಮ್ಮ ಆಡಳಿತದ ಸಾಧನೆಯ ಆಧಾರದ ಮೇಲೆ ಚುನಾವಣೆ ಎದುರಿಸುವ ಬದಲು, ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ, ಹಿಂದುತ್ವ ರಾಜಕೀಯ ಅಥವಾ ಆರ್‌ಜೆಡಿ ಭಯದ ಮೇಲೆಯೇ ಅವಲಂಬಿತರಾಗಿದ್ದರು. ತಮ್ಮ ಕೆಲಸಗಳಿಗೆ ಹೊಣೆಗಾರರಾಗದ ಇಂತಹ ನಾಯಕರಿಗೆ ಮತದಾರರು ಈ ತೀರ್ಪಿನ ಮೂಲಕ ಸೂಕ್ತ ಪಾಠ ಕಲಿಸಿದ್ದಾರೆ.
ಪ್ರಶಾಂತ್ ಕಿಶೋರ್ ತಮ್ಮ ಚೊಚ್ಚಲ ಸ್ಪರ್ಧೆಯಲ್ಲಿಯೇ ಈ ಮಹತ್ವದ ಗೆಲುವನ್ನು ಸಾಧಿಸಿದ್ದು, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ತಮ್ಮ ಜನ ಸುರಾಜ್ ಪಾರ್ಟಿಯನ್ನು ಪ್ರಬಲ ಪರ್ಯಾಯ ಶಕ್ತಿಯಾಗಿ ನಿಲ್ಲಿಸಿದ್ದಾರೆ. 1995 ರಿಂದ ಸತತವಾಗಿ ಬಿಜೆಪಿಯ ವಶದಲ್ಲಿದ್ದ ಬಂಕಿಪುರ ಕ್ಷೇತ್ರದಲ್ಲಿ ಈ ಸೋಲು ಬಿಜೆಪಿಗೆ ಎದುರಾದ ದೊಡ್ಡ ಮುಖಭಂಗವಾಗಿದೆ. ದೇಶಾದ್ಯಂತ ಜೆನ್ ಝಿ ನೇತೃತ್ವದ ಪ್ರತಿಭಟನೆಗಳು ನಡೆದ ಕೆಲವೇ ದಿನಗಳಲ್ಲಿ ಈ ಸೋಲು ಸಂಭವಿಸಿದ್ದು, ಈ ಕ್ಷೇತ್ರವನ್ನು ಹಿಂದೆ ಪ್ರತಿನಿಧಿಸುತ್ತಿದ್ದ ಬಿಜೆಪಿ ರಾಜ್ಯ ಅಧ್ಯಕ್ಷ ನಿತಿನ್ ನವೀನ್ ಅವರು ರಾಜ್ಯಸಭೆಗೆ ಆಯ್ಕೆಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಉಪಚುನಾವಣೆ ನಡೆದಿತ್ತು. ಈ ಚುನಾವಣೆಯನ್ನು ಬಿಹಾರದ ಬಿಜೆಪಿ ನೇತೃತ್ವದ ಸರ್ಕಾರದ ಮೇಲಿನ ಜನಮತಸಂಗ್ರಹ ಎಂದೇ ಕಿಶೋರ್ ಕರೆದಿದ್ದರು.
ಈ ಉಪಚುನಾವಣೆಯ ನಿಖರ ಅಂಕಿ-ಅಂಶಗಳನ್ನು ನೋಡುವುದಾದರೆ, ಪ್ರಶಾಂತ್ ಕಿಶೋರ್ ಒಟ್ಟು 64,151 ಮತಗಳನ್ನು ಪಡೆದು, ಬಿಜೆಪಿಯ ನೀರಜ್ ಕುಮಾರ್​ರನ್ನು (44,827) 19,324 ಮತಗಳ ಬೃಹತ್ ಅಂತರದಿಂದ ಪರಾಭವಗೊಳಿಸಿದರು. ಆರ್‌ಜೆಡಿ ಅಭ್ಯರ್ಥಿ ರೇಖಾ ಗುಪ್ತಾ ಕೇವಲ 14,273 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದರು. ಬಂಕಿಪುರ ಕ್ಷೇತ್ರದಲ್ಲಿ ಸುಮಾರು 2 ಲಕ್ಷ ಪುರುಷರು ಮತ್ತು 1.79 ಲಕ್ಷ ಮಹಿಳೆಯರು ಸೇರಿದಂತೆ ಒಟ್ಟು 3.8 ಲಕ್ಷ ಅರ್ಹ ಮತದಾರರಿದ್ದು, ಈ ಉಪಚುನಾವಣೆಯಲ್ಲಿ ಶೇಕಡಾ 34.30 ರಷ್ಟು ಮತದಾನ ದಾಖಲಾಗಿತ್ತು(ಏಜೆನ್ಸೀಸ್​).