ಟಿವಿಕೆ ಮುಖ್ಯಸ್ಥ ಮತ್ತು ನಟ ದಳಪತಿ ವಿಜಯ್
ಪುದುಚೇರಿ: ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಕರೂರು ಕಾಲ್ತುಳಿತ ದುರಂತದ ಬಳಿಕ ಇದೇ ಮೊದಲ ಬಾರಿಗೆ ಇಂದು(ಡಿ. 09) ಪುದುಚೇರಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ಆಯೋಜಿಸಿದ್ದ ಟಿವಿಕೆ ಮುಖ್ಯಸ್ಥ ಮತ್ತು ನಟ ದಳಪತಿ ವಿಜಯ್(Thalapathy Vijay) ತಮಿಳುನಾಡಿನ ಆಡಳಿರೂಢ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಗೆ ಜನ ಸೂಕ್ತವಾದ ಪಾಠವನ್ನು ಕಲಿಸುತ್ತಾರೆ. ಡಿಎಂಕೆಯೂ ಪಾಠ ಕಲಿಯಲಿದೆ. ಯಾರೂ ಕೂಡ ಡಿಎಂಕೆಯನ್ನು ನಂಬಬೇಡಿ. ಅದು ಜನರನ್ನು ಮೋಸಗೊಳಿಸಲು ಮಾತ್ರ ನಂಬುವಂತೆ ಮಾಡುತ್ತದೆ ಎಂದು ಕಿಡಿಕಾರಿದ್ದಾರೆ.
1977ರಲ್ಲಿ ದಿ. ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ತಮಿಳುನಾಡಿನಲ್ಲಿ ಎಐಎಡಿಎಂಕೆ ಸರ್ಕಾರವನ್ನು ರಚಿಸಿದರು. ಆದರೆ ಅದಕ್ಕೂ ಮೂರು ವರ್ಷಗಳ ಮೊದಲು ಎಐಎಡಿಎಂಕೆ ಪುದುಚೇರಿಯಲ್ಲಿ ಅಧಿಕಾರಕ್ಕೆ ಬಂದಿತ್ತು. ಅದಕ್ಕಾಗಿ ಯಾರಾದರೂ ಪುದುಚೇರಿಯನ್ನು ಮರೆಯಲು ಸಾಧ್ಯವೆ?, ಕಳೆದ 30 ವರ್ಷಗಳಿಂದ ಇಲ್ಲಿನ ಜನ ನನ್ನನ್ನು ಬೆಂಬಲಿಸಿದ್ದಾರೆ. ನಾನು ತಮಿಳುನಾಡಿನ ಜನರ ಪರವಾಗಿ ಮಾತ್ರ ಎಂದು ಭಾವಿಸಬೇಡಿ ಎಂದು ಹೇಳಿದ್ದಾರೆ.
ಪುದುಚೇರಿ ರಾಜ್ಯ ಸ್ಥಾನಮಾನ ನೀಡೋದಕ್ಕೆ ಬೆಂಬಲಿಸಿದ ವಿಜಯ್, ಪುದುಚೇರಿಯನ್ನು ಬೆಂಬಲಿಸುವುದು ತಮ್ಮ ಕರ್ತವ್ಯ. ಸಿಎಂ ರಂಗಸಾಮಿ ನೇತೃತ್ವದ ಪುದುಚೇರಿ ಸರ್ಕಾರವು ತಮಿಳುನಾಡಿನ ಡಿಎಂಕೆ ಆಡಳಿತದಂತಲ್ಲ, ರ್ಕಾರ ನಿಷ್ಪಕ್ಷಪಾತವಾಗಿದ್ದು, ಎದುರಾಳಿ ಪಕ್ಷದ ರ್ಯಾಲಿಗೆ ಭದ್ರತೆ ನೀಡಿದೆ ಹೊಗಳಿದ್ದಾರೆ. ತಮಿಳುನಾಡು ಸರ್ಕಾರ ಪುದುಚೇರಿ ಸರ್ಕಾರವನ್ನು ನೋಡಿ ಕಲಿತರೆ ಒಳ್ಳೆಯದು, ಆದರೆ ಅವರು ಕಲಿಯುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಸೆ. 27 ರಂದು ಕರೂರಿನಲ್ಲಿ ನಡೆದ ವಿಜಯ್ ಅವರ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಮಂದಿ ಮೃತಪಟ್ಟಿದ್ದರು. 110 ಜನರು ಗಾಯಗೊಂಡಿದ್ದರು. ಮೃತಪಟ್ಟ ಕುಟುಂಬಸ್ಥರಿಗೆ ವಿಜಯ್ ತಲಾ 20 ಲಕ್ಷ ರೂ. ಪರಿಹಾರ ನೀಡಿದ್ರೆ, ರಾಜ್ಯ ಸರ್ಕಾರ ತಲಾ 10 ಲಕ್ಷ ರೂ. ಪರಿಹಾರ ನೀಡಿದೆ. ಘಟನೆ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ (ಏಜೆನ್ಸೀಸ್).