ಕಪಿಲ್ ಸಿಬಲ್ ಮತ್ತು ರಾಜನಾಥ್ ಸಿಂಗ್ 
ದೇಶ

ಜನರೇ ಆಡಳಿತ ಬದಲಾವಣೆ ಬಯಸ್ತಿದ್ದಾರೆ: ಸರ್ಕಾರ ನಿರ್ಗಮಿಸುವ ಸಮಯ ಬಂದಿದೆ: ರಾಜನಾಥ್ ಸಿಂಗ್​ಗೆ ಕಪಿಲ್ ಸಿಬಲ್ ತಿರುಗೇಟು | Kapil Sibal

ಕಾಂಗ್ರೆಸ್ ಆಡಳಿತ ಬದಲಾವಣೆ ಬಯಸುತ್ತಿದೆ ಎಂಬ ಕೇಂದ್ರ ಸಚಿವ ರಾಜನಾಥ್ ಸಿಂಗ್ ಆರೋಪಕ್ಕೆ ತಿರುಗೇಟು ನೀಡಿರುವ ಹಿರಿಯ ವಕೀಲ ಮತ್ತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಜನರೇ ಆಡಳಿತ ಬದಲಾವಣೆ ಬಯಸುತ್ತಿದ್ದಾರೆ. ಸರ್ಕಾರ ನಿರ್ಗಮಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ನವದೆಹಲಿ: ಕಾಂಗ್ರೆಸ್ ಆಡಳಿತ ಬದಲಾವಣೆ ಬಯಸುತ್ತಿದೆ ಎಂಬ ಕೇಂದ್ರ ಸಚಿವ ರಾಜನಾಥ್ ಸಿಂಗ್ ಆರೋಪಕ್ಕೆ ತಿರುಗೇಟು ನೀಡಿರುವ ಹಿರಿಯ ವಕೀಲ ಮತ್ತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಜನರೇ ಆಡಳಿತ ಬದಲಾವಣೆ ಬಯಸುತ್ತಿದ್ದಾರೆ. ಸರ್ಕಾರ ನಿರ್ಗಮಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಚುನಾವಣಾ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಪಕ್ಷಗಳು ನಡೆಸುತ್ತಿರುವ ಸರಣಿ ಪ್ರತಿಭಟನೆ ಕುರಿತು ಶುಕ್ರವಾರ(ಅ. 16) ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದ್ದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಾಂಗ್ಲಾ ಮಾದರಿಯಲ್ಲಿ ಆಡಳಿತ ಬದಲಾವಣೆ ಬಯಸುತ್ತಿದ್ದಾರೆ. ಯುವಜನರನ್ನು ಬಳಸಿ ಅರಾಜಕತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಪ್ರಜಾಪ್ರಭುತ್ವವು ಯಾರಿಗೂ ಗೊಂದಲ ಅಥವಾ ಅಶಾಂತಿಯನ್ನು ಸೃಷ್ಟಿಸಲು, ಅಥವಾ ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಕುಂದಿಸಲು ಅನುಮತಿ ನೀಡುವುದಿಲ್ಲ ಎಂದು ಕಿಡಿಕಾರಿದ್ದರು.

ಈ ಕುರಿತು ಶನಿವಾರ(ಅ. 17) ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ರಾಜನಾಥ್ ಸಿಂಗ್ ಅವರೇ ಬಾಂಗ್ಲಾದೇಶದ ಮಾದರಿಯಲ್ಲಿ ಕಾಂಗ್ರೆಸ್ ಆಡಳಿತ ಬದಲಾವಣೆಯನ್ನು ಬಯಸುತ್ತಿದೆ ಎಂದು ನೀವು ಆರೋಪಿಸುತ್ತೀರಿ. ಹಾಗಲ್ಲ. ಸ್ವತಃ ಜನರೇ ಆಡಳಿತ ಬದಲಾವಣಯನ್ನು ಬಯಸುತ್ತಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಭಾರತ ಎಂಬ ಘೋಷಣೆಯೊಂದಿಗೆ ನಡೆದ ಪ್ರತಿಭಟನೆಗಳು ನಿಮಗೆ ಅಧಿಕಾರ ತಂದುಕೊಟ್ಟವು. ಆದರೆ ನಂತರ ನೀವು ಭ್ರಷ್ಟಾಚಾರವನ್ನು ಅಪ್ಪಿಕೊಂಡಿರಿ. ಸಂಸ್ಥೆಗಳನ್ನು ವಶಪಡಿಸಿಕೊಂಡಿರಿ. ಮತದಾರರ ಪಟ್ಟಿಯಲ್ಲಿ ತಿರುಚುವಿಕೆ ನಡೆಸಿದಿರಿ. ಈಗ ನಿರ್ಗಮಿಸುವ ಸಮಯ ಬಂದಿದೆ! ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).