ಕೊಚ್ಚಿ: ಮುಂದಿನ ವರ್ಷ ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಗೆ ನಾನು ಎಲ್‌ಡಿಎಫ್ ಅನ್ನು ಮುನ್ನಡೆಸಬೇಕೇ ಅಥವಾ ಬೇಡವೇ ಎಂಬುದನ್ನು ಜನ ಮತ್ತು ನಮ್ಮ ಪಕ್ಷ ಸಿಪಿಐ(ಎಂ) ನಿರ್ಧಾರ ಮಾಡುತ್ತದೆ ಎಂದು ಶುಕ್ರವಾರ(ಡಿ. 05) ಸಿಎಂ ಪಿಣರಾಯಿ ವಿಜಯನ್(CM Pinarayi Vijayan) ಹೇಳಿದ್ದಾರೆ.
ಮುಂದಿನ ವಾರ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಮುನ್ನ ಎರ್ನಾಕುಲಂ ಪ್ರೆಸ್ ಕ್ಲಬ್ ಆಯೋಜಿಸಿದ್ದ 'ಮೀಟ್ ದಿ ಪ್ರೆಸ್' ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಮಾತನಾಡಿದ್ದಾರೆ.
ಇದೇ ವೇಳೆ ವರದಿಗಾರರೊಬ್ಬರು, ಪಿಣರಾಯಿ ವಿಜಯನ್ 3.0 ನಿರೀಕ್ಷೆ ಇದೆಯೇ ಎಂದು ಕೇಳಿದಾಗ, ಅದನ್ನು ಜನರು ನಿರ್ಧರಿಸಬೇಕು. ನನ್ನ ವಿಷಯದಲ್ಲಿ ಪಕ್ಷವು ನಿರ್ಧಾರ ತೆಗೆದುಕೊಳ್ಳಬೇಕು. ಈಗ ಅದರ ಬಗ್ಗೆ ಚರ್ಚಿಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದ್ದಾರೆ.
ದೇಶದ ಯಾವುದೇ ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸಿಸ್ಟ್) ಪಕ್ಷವನ್ನು ಕೇರಳದಲ್ಲಿ ಪಿಣರಾಯಿ ವಿಜಯನ್ ಎಲ್‌ಡಿಎಫ್ ಅನ್ನು ಸತತ ಎರಡು ಅವಧಿಗಳಲ್ಲಿ ಗೆಲುವಿನತ್ತ ಕೊಂಡೊಯ್ದಿದ್ದಾರೆ.
ಇದಕ್ಕೂ ಮೊದಲು ರಾಜ್ಯ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಮಾತನಾಡಿ, ಮುಂದಿನ ರಾಜ್ಯ ಚುನಾವಣೆಯಲ್ಲಿ ವಿಜಯನ್ ಅವರು ಸಿಎಂ ಅಭ್ಯರ್ಥಿಯಾಗಿ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್)ವನ್ನು ಮುನ್ನಡೆಸಲಿದ್ದಾರೆ. ಪ್ರಮುಖ ಅಭಿವೃದ್ಧಿ ಉಪಕ್ರಮಗಳನ್ನು ನೀಡಿದ ಕೀರ್ತಿ ಪಿಣರಾಯಿ ಅವರದ್ದು, I ಮತ್ತು II ಸರ್ಕಾರಗಳ ಅಭಿವೃದ್ಧಿ ವೇಗವನ್ನು ಕಾಪಾಡಿಕೊಳ್ಳಲು ಅವರು ಅತ್ಯಗತ್ಯ ಎಂದು ಹೇಳಿದ್ದಾರೆ (ಏಜೆನ್ಸೀಸ್).