ದೆಹಲಿಯಲ್ಲಿ ಪೆಲೆಟ್​ ಗನ್ಸ್​, ಬಿಹಾರದಲ್ಲಿ ಎಕೆ-47: ಇದೆಂಥಾ ವ್ಯವಸ್ಥೆ ಎಂದು ಪ್ರಧಾನಿ ಮೋದಿ ವಿರುದ್ಧ ರಾಹುಲ್​ ಗಾಂಧಿ ವಾಗ್ದಾಳಿ! Rahul Gandhi  
ದೇಶ

ದೆಹಲಿಯಲ್ಲಿ ಪೆಲೆಟ್​ ಗನ್ಸ್​, ಬಿಹಾರದಲ್ಲಿ ಎಕೆ-47: ಇದೆಂಥಾ ವ್ಯವಸ್ಥೆ ಎಂದು ಪ್ರಧಾನಿ ಮೋದಿ ವಿರುದ್ಧ ರಾಹುಲ್​ ಗಾಂಧಿ ವಾಗ್ದಾಳಿ! Rahul Gandhi

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರದ ಶೈಕ್ಷಣಿಕ ವ್ಯವಸ್ಥೆಯ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ
  • ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಕ್ರೂರ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಪ್ರಧಾನಿ ಮೋದಿ ವಿರುದ್ಧ ರಾಹುಲ್ ಟೀಕೆ
  • ದೆಹಲಿಯಲ್ಲಿ ಪೆಲೆಟ್ ಗನ್ ಹಾಗೂ ಬಿಹಾರದಲ್ಲಿ ಎಕೆ 47 ಬಳಸಿ ವಿದ್ಯಾರ್ಥಿಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಕಳವಳ
  • ವಿದ್ಯಾರ್ಥಿ ಸಮುದಾಯದ ಕ್ಷಮೆ ಕೇಳುವಂತೆ ಹಾಗೂ ದೌರ್ಜನ್ಯ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ರಾಹುಲ್ ಆಗ್ರಹ
ನವದೆಹಲಿ: ಕೇಂದ್ರ ಸರ್ಕಾರದ ಶೈಕ್ಷಣಿಕ ನೀತಿಗಳು ಹಾಗೂ ವ್ಯವಸ್ಥೆಯ ವಿರುದ್ಧ ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ( Rahul Gandhi ) ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಡೀ ಶೈಕ್ಷಣಿಕ ವ್ಯವಸ್ಥೆಯು ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳ ಪಾಲಿಗೆ 'ಅತ್ಯಂತ ಮಾರಕ'ವಾಗಿ ಪರಿಣಮಿಸಿದೆ ಎಂದು ಗಂಭೀರವಾಗಿ ಆರೋಪಿಸಿರುವ ರಾಹುಲ್​, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹೊಸ ಸಮರ ಸಾರಿದ್ದಾರೆ.
ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್​ ಮಂತರ್​ನಲ್ಲಿ ಸುಮಾರು 1 ತಿಂಗಳು ಕಾಲ ನಡೆದ ಪ್ರತಿಭಟನೆ ಇತ್ತೀಚೆಗೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡು, ಕೊನೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ರಾಜೀನಾಮೆ ಬಳಿಕ ಕೊನೆಯಾದ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಉಲ್ಲೇಖಿಸಿ, ಕೇಂದ್ರ ಸರ್ಕಾರದ ವಿರುದ್ಧ ರಾಹುಲ್​ ಗಾಂಧಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಬಿಹಾರದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ಮೇಲೆ ನಡೆದಿದೆ ಎನ್ನಲಾದ ಪೊಲೀಸ್ ಕ್ರಮದ ಕುರಿತಾದ ವರದಿಯೊಂದನ್ನು ಉಲ್ಲೇಖಿಸಿ ಕೇಂದ್ರವನ್ನು ಟೀಕಿಸಿರುವ ರಾಹುಲ್ ಗಾಂಧಿ, ಬಿಹಾರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಎಕೆ-47 ಬಂದೂಕಿನಿಂದ ಗುಂಡು ಹಾರಿಸಲಾಗಿದೆ ಮತ್ತು ನೂರಾರು ವಿದ್ಯಾರ್ಥಿಗಳನ್ನು ಬಂಧಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂಬ ಆಘಾತಕಾರಿ ಸುದ್ದಿಗಳು ಬರುತ್ತಿವೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ಭರವಸೆಗಳನ್ನು ಪ್ರಸ್ತಾಪಿಸಿ ನೇರ ಪ್ರಶ್ನೆ ಎಸೆದಿರುವ ರಾಹುಲ್ ಗಾಂಧಿ, ವಿದ್ಯಾರ್ಥಿಗಳ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸುವುದಿಲ್ಲ ಹಾಗೂ ಬಂಧಿತರನ್ನು ಬಿಡುಗಡೆ ಮಾಡಲಾಗುವುದು ಎಂಬ ನಿಮ್ಮ ಭರವಸೆ ಎಲ್ಲಿ ಹೋಯಿತು ಮೋದಿಯವರೇ? ಭರವಸೆ ಈಡೇರಿಸುವ ಬದಲು ವಿದ್ಯಾರ್ಥಿಗಳ ಮೇಲೆ ಕ್ರೂರ ದಾಳಿ ಮತ್ತು ದೌರ್ಜನ್ಯಗಳನ್ನು ಎಸಗಲಾಗುತ್ತಿದೆ. ಜುಲೈ 20 ರಂದು ದೆಹಲಿಯಲ್ಲಿ ನಡೆದ ಜಂತರ್ ಮಂತರ್ ಸಂಸತ್ ಚಲೋ ಪ್ರತಿಭಟನೆಯಲ್ಲಿ ಪೆಲೆಟ್ ಗನ್‌ಗಳನ್ನು ಬಳಸಿದರೆ, ಬಿಹಾರದಲ್ಲಿ ಎಕೆ-47 ಬಳಸಿ ಗುಂಡು ಹಾರಿಸಲಾಗಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಅಥವಾ ದೆಹಲಿ ಹೀಗೆ ಎಲ್ಲೇ ನೋಡಿದರೂ ಸರ್ಕಾರದ ಈ ದಬ್ಬಾಳಿಕೆಯ ಶೈಲಿ ಒಂದೇ ರೀತಿಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪರೀಕ್ಷಾ ಅಕ್ರಮಗಳನ್ನು ತಡೆಯುವಲ್ಲಿ ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ ಸಂಸದ ರಾಹುಲ್, ಈ ಸರ್ಕಾರ ಅತ್ಯಂತ ಅಪ್ರಮಾಣಿಕವಾದದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ನಿಜವಾದ ಸುಧಾರಣೆ ತರುವುದು ಇವರ ಕೈಲಾಗದ ಮಾತು. ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಇವರು ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸಲು ಎಲ್ಲ ರೀತಿಯ ಕುತಂತ್ರಗಳನ್ನು ಬಳಸುತ್ತಿದ್ದಾರೆ. ಪ್ರಧಾನಿ ಮೋದಿಯವರೇ, ತಕ್ಷಣವೇ ದೇಶದ ವಿದ್ಯಾರ್ಥಿಗಳ ಕ್ಷಮೆ ಕೇಳಿ! ಪ್ರತಿಭಟನಾ ನಿರತರ ಮೇಲೆ ದಾಳಿ ಮಾಡಿ ಅವರನ್ನು ಹತ್ತಿಕ್ಕಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಹೊರತು ಅಮಾಯಕ ವಿದ್ಯಾರ್ಥಿಗಳ ಮೇಲಲ್ಲ ಎಂದು ಆಗ್ರಹಿಸಿದ್ದಾರೆ.
ಮತ್ತೊಂದೆಡೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಪ್ರಧಾನಿ ಹಾಗೂ ಗೃಹ ಸಚಿವರು ಕ್ಷಮೆಯಾಚಿಸಬೇಕೆಂಬ ಕಾಂಗ್ರೆಸ್ ಬೇಡಿಕೆಗೆ ದನಿಗೂಡಿಸಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಬಿಹಾರ ಮತ್ತು ಬಂಗಾಳದಲ್ಲಿ ವಿದ್ಯಾರ್ಥಿಗಳ ವಿರುದ್ಧ ಇಂದಿಗೂ ಸಾಲು ಸಾಲು ಎಫ್‌ಐಆರ್‌ಗಳು ದಾಖಲಾಗುತ್ತಿವೆ ಎಂದು ಕೇಳಲ್ಪಟ್ಟಿದ್ದೇನೆ. ಈ ಮಾಹಿತಿ ಇನ್ನೂ ಅಧಿಕೃತವಾಗಿ ಧೃಡಪಟ್ಟಿಲ್ಲವಾದರೂ, ಸರ್ಕಾರದ ಈ ನಡೆ ವಿದ್ಯಾರ್ಥಿಗಳಿಗೆ ಯಾವ ರೀತಿಯ ನ್ಯಾಯ ನೀಡುತ್ತದೆ? ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ನಡೆದ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಜುಲೈ 22 ಮತ್ತು 25 ರಂದು ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಈ ವೇಳೆ ಕಸ್ಟಡಿಗೆ ಪಡೆಯಲಾದ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 24 ಗಂಟೆಗಳಿಗೂ ಹೆಚ್ಚು ಕಾಲ ಅಕ್ರಮವಾಗಿ ಬಂಧಿಸಿಡಲಾಗಿತ್ತು ಎಂದು ವಕೀಲರು ಹಾಗೂ ಪ್ರತ್ಯಕ್ಷದರ್ಶಿಗಳು ಗಂಭೀರವಾಗಿ ಆರೋಪಿಸಿದ್ದಾರೆ. ಅತ್ತ ಬಿಹಾರದಲ್ಲೂ ಪ್ರತಿಭಟನೆಯ ಕಾವು ತಾರಕಕ್ಕೇರಿದ್ದು, ಜುಲೈ 25 ರಂದು ಕರೆ ನೀಡಲಾಗಿದ್ದ 'ಬಂದ್' ಸಮಯದಲ್ಲಿ ಉಂಟಾದ ಹಿಂಸಾಚಾರದ ವೇಳೆ ಎಕೆ-47 ರೈಫಲ್‌ನಿಂದ ಬಹಿರಂಗವಾಗಿ ಗುಂಡು ಹಾರಿಸಿದ ಆರೋಪದ ಮೇಲೆ ಸಿವಾನ್ ಜಿಲ್ಲೆಯ ಪೊಲೀಸ್ ಸಿಬ್ಬಂದಿಯೊಬ್ಬರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಉನ್ನತಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ, (ಏಜೆನ್ಸೀಸ್​).