ವಾಷಿಂಗ್ಟನ್: ಇರಾನ್ ಜೊತೆಗಿನ ಸಂಧಾನ ಮಾತುಕತೆ ವಿಫಲವಾದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದಂತೆ ಯುಎಸ್ ಸೆಂಟ್ರಲ್ ಕಮಾಂಡ್(US Central Command) ಇಂದಿನಿಂದ (ಏ. 13) ಇರಾನ್‌ನ ಎಲ್ಲಾ ಬಂದರುಗಳಿಗೆ ಸಮುದ್ರ ಸಂಚಾರವನ್ನು ನಿರ್ಬಂಧಿಸುವುದಾಗಿ ಘೋಷಿಸಿದೆ.
ಬೆಳಗ್ಗೆ 10 ಗಂಟೆಗೆ ETರಿಂದ ಇರಾನ್‌ನ ಎಲ್ಲಾ ಬಂದರುಗಳಿಗೆ ಬರುವ ಮತ್ತು ಹೋಗುವ ಎಲ್ಲಾ ರಾಷ್ಟ್ರಗಳ ಹಡಗುಗಳನ್ನು ನಿರ್ಬಂಧಿಸುವುದಾಗಿ ಘೋಷಣೆ ಮಾಡಿರುವ ಯುಎಸ್ ಮಿಲಿಟರಿ, ಅರೇಬಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿಯ ಉದ್ದಕ್ಕೂ ಇರಾನಿನ ಬಂದರುಗಳು ಮತ್ತು ಕರಾವಳಿ ಪ್ರದೇಶಗಳನ್ನು ಬಳಸುವ ಎಲ್ಲಾ ರಾಷ್ಟ್ರಗಳ ಹಡಗುಗಳ ವಿರುದ್ಧ ನಿಷ್ಪಕ್ಷಪಾತವಾಗಿ ದಿಗ್ಬಂಧನವನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದೆ.
ಇರಾನ್ ಅಲ್ಲ ಇತರ ಬಂದರುಗಳಿಗೆ ಸಾಗುವ ಹಡಗುಗಳಿಗೆ ಹೊರ್ಮುಜ್ ಜಲಸಂಧಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಇರುತ್ತದೆ. ಅಲ್ಲಿ ಯಾವುದೇ ಅಡ್ಡಿಯನ್ನು ಮಾಡಲ್ಲ. ಓಮನ್ ಕೊಲ್ಲಿ ಮತ್ತು ಹಾರ್ಮುಜ್ ಜಲಸಂಧಿಯ ಸಮೀಪದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಬ್ರಿಡ್ಜ್-ಟು-ಬ್ರಿಡ್ಜ್ ಚಾನೆಲ್ 16 ರಲ್ಲಿ ಮ್ಯಾರಿನರ್ಸ್‌ನ ಅಧಿಕೃತ ಸೂಚನೆಯ ಪ್ರಸಾರಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು US ನೌಕಾ ಪಡೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಹೋರ್ಮುಜ್ ಜಲಸಂಧಿಯಲ್ಲಿ ದಿಗ್ಬಂಧನ: ಟ್ರಂಪ್
ಇರಾನ್ನೊಂದಿಗಿನ ಮಾತುಕತೆ ವಿಫಲವಾದ ಬೆನ್ನಲ್ಲೇ ಇರಾನ್ ವಿರುದ್ಧ ಕಠಿಣ ನಿರ್ಧಾರ ಘೋಷಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿಶ್ವದ ಒಟ್ಟು ಕಚ್ಚಾ ತೈಲ ಪೂರೈಕೆಯ ಶೇಕಡಾ 20ರಷ್ಟು ಭಾಗ ಸಾಗುವ ಹೋರ್ಮುಜ್ ಜಲಸಂಧಿಯನ್ನು ಇರಾನ್ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ. ಇರಾನ್‌ನ ಎಲ್ಲಾ ಬಂದರುಗಳಿಗೆ ದಿಗ್ಬಂಧನ ಹಾಕಲಾಗುವುದು. ಯಾರಾದರೂ ಇರಾನ್‌ಗೆ ಕಾನೂನುಬಾಹಿರವಾಗಿ ಟೋಲ್ (ಸುಂಕ) ಪಾವತಿಸಿದರೆ, ಅಂತಹ ಹಡಗುಗಳಿಗೆ ಸಮುದ್ರದಲ್ಲಿ ಸುರಕ್ಷಿತ ಪ್ರಯಾಣ ಇರುವುದಿಲ್ಲ. ಅಂತಹ ಹಡಗುಗಳನ್ನು ಅಮೆರಿಕದ ನೌಕಾಪಡೆ ತಡೆದು ತಪಾಸಣೆ ನಡೆಸಲಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಇರಾನ್ ಸಂಸದೀಯ ಸ್ಪೀಕರ್ ತಿರುಗೇಟು
ಅಮೆರಿಕದ ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಖಾಲಿಬಾಫ್, ಅಮೆರಿಕದ ಗ್ರಾಹಕರು ಈಗಿರುವ ಪೆಟ್ರೋಲ್ ಬೆಲೆಯನ್ನು ನೋಡಿ ಆನಂದಿಸಿ. ಈ ದಿಗ್ಬಂಧನದಿಂದಾಗಿ ಶೀಘ್ರದಲ್ಲೇ ನೀವು 4-5 ಡಾಲರ್ ಬೆಲೆಗಾಗಿ ಹಂಬಲಿಸುವಂತಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಇದು ಅಮೆರಿಕದ ಆಂತರಿಕ ಆರ್ಥಿಕತೆಯ ಮೇಲೆ ಹೊಡೆತ ನೀಡಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಜಾಗತಿಕ ಪರಿಣಾಮಗಳು
ಅಮೆರಿಕದ ಈ ಬೆಳವಣಿಗೆಯಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಈಗಾಗಲೇ ಏರಿಕೆಯಾಗತೊಡಗಿದ್ದು, ಹಾರ್ಮುಜ್ ಜಲಸಂಧಿಯ ಮೂಲಕ ಜಗತ್ತಿನ ಸುಮಾರು ಶೇ. 20ರಷ್ಟು ತೈಲ ಸರಬರಾಜಾಗುತ್ತಿದೆ. ಅಲ್ಲಿ ಉಂಟಾಗುವ ಯಾವುದೇ ಅಡೆತಡೆಗಳು ಭಾರತ ಸೇರಿದಂತೆ ಏಷ್ಯಾದ ಹಲವು ದೇಶಗಳ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿವೆ ಎನ್ನಲಾಗಿದೆ (ಏಜೆನ್ಸೀಸ್).