ಹೊರ್ಮುಜ್ಯಲ್ಲಿ ಶಾಂತಿ ಮಂತ್ರ: ಭಾರತಕ್ಕೆ ಇರಾನ್ ಆಹ್ವಾನ, ಅಮೆರಿಕ ವಿರುದ್ಧ ಅರಾಘ್ಚಿ ಕಿಡಿ! ಇರಾನ್ ಸಚಿವನ ಮಾತು ಕೇಳಿ ಹೌಹಾರಿದ ಪಾಕ್!
ನವದೆಹಲಿ: ವಿಶ್ವದ ಅತಿ ದೊಡ್ಡ ತೈಲ ಸಾಗಾಣಿಕಾ ಮಾರ್ಗವಾದ ಹೊರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಇರಾನ್ ಈಗ ಭಾರತದ ನೆರವು ಕೋರಿದೆ. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ(Abbas Araghchi), ಹೊರ್ಮುಜ್ ಜಲಸಂಧಿಯ ಮೂಲಕ ಎಲ್ಲಾ ಹಡಗುಗಳು ಸುರಕ್ಷಿತವಾಗಿ ಸಂಚರಿಸಲು ಇರಾನ್ ಸಹಾಯ ಮಾಡಲು ಸಿದ್ಧವಿದೆ ಎಂದು ಘೋಷಿಸುವ ಮೂಲಕ ಜಾಗತಿಕ ಮಾರುಕಟ್ಟೆಗೆ ಭರವಸೆಯ ಸಂದೇಶ ನೀಡಿದ್ದಾರೆ.
ಪರಮಾಣು ಅಸ್ತ್ರ ನಮಗೆ ಬೇಕಿಲ್ಲ: ಇರಾನ್ ಸ್ಪಷ್ಟನೆ
ಇರಾನ್ ಪರಮಾಣು ಅಸ್ತ್ರಗಳನ್ನು ತಯಾರಿಸುತ್ತಿದೆ ಎಂಬ ಅಮೆರಿಕದ ಆರೋಪಗಳನ್ನು ಅರಾಘ್ಚಿ ತಳ್ಳಿಹಾಕಿದ್ದಾರೆ. ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಬಯಸಿಲ್ಲ. ಹೊರ್ಮುಜ್ ಜಲಸಂಧಿಯ ಪರಿಸ್ಥಿತಿ ಈಗ ತುಂಬಾ ಸಂಕೀರ್ಣವಾಗಿದೆ. ಮಾತುಕತೆಯ ಮೂಲಕ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಮಿಲಿಟರಿ ಕಾರ್ಯಾಚರಣೆಯಿಂದ ಯಾವುದೇ ಲಾಭವಿಲ್ಲ ಎಂದು ತಿಳಿಸಿದ್ದಾರೆ. ಚೀನಾವು ಈ ನಿಟ್ಟಿನಲ್ಲಿ ತೆಗೆದುಕೊಳ್ಳುವ ಯಾವುದೇ ಶಾಂತಿ ಕ್ರಮಗಳನ್ನು ಇರಾನ್ ಸ್ವಾಗತಿಸುತ್ತದೆ ಎಂದು ಅಬ್ಬಾಸ್ ಇದೇ ವೇಳೆ ಹೇಳಿದ್ದಾರೆ.
ಭಾರತದ 'ರಚನಾತ್ಮಕ' ಪಾತ್ರಕ್ಕೆ ಇರಾನ್ ಬೆಂಬಲ
ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ ಅರಾಘ್ಚಿ, ಭಾರತದ ಪಾತ್ರವನ್ನು ಶ್ಲಾಘಿಸಿದರು. ನಾನು ಪ್ರಧಾನಿ ಮೋದಿ ಅವರೊಂದಿಗೆ ಸಂಕ್ಷಿಪ್ತವಾಗಿ ಮತ್ತು ಜೈಶಂಕರ್ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದೇನೆ. ಹೊರ್ಮುಜ್ ಜಲಸಂಧಿ ಮತ್ತು ಪರ್ಷಿಯನ್ ಕೊಲ್ಲಿಯ ಬಗ್ಗೆ ಭಾರತ ಮತ್ತು ಇರಾನ್ ಒಂದೇ ರೀತಿಯ ಕಾಳಜಿಯನ್ನು ಹೊಂದಿವೆ. ಈ ಪ್ರದೇಶದ ಶಾಂತಿಗಾಗಿ ಭಾರತವು ವಹಿಸುವ ಯಾವುದೇ ರಚನಾತ್ಮಕ ಪಾತ್ರವನ್ನು ನಾವು ಸ್ವಾಗತಿಸುತ್ತೇವೆ ಎಂದು ಅರಾಘ್ಚಿ ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ವಿರುದ್ಧ ವಿಶ್ವಾಸದ ಪ್ರಶ್ನೆ
ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ ಅರಾಘ್ಚಿ, ಅಮೆರಿಕನ್ನರನ್ನು ನಂಬಲು ಇರಾನ್‌ಗೆ ಯಾವುದೇ ಕಾರಣಗಳಿಲ್ಲ. ಆದರೆ, ಇರಾನ್ ಅನ್ನು ನಂಬಲು ಅಮೆರಿಕನ್ನರಿಗೆ ಎಲ್ಲಾ ಕಾರಣಗಳಿವೆ. ನಾವು ರಾಜತಾಂತ್ರಿಕತೆಗೆ ಅವಕಾಶ ನೀಡಲು ಕದನ ವಿರಾಮವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು. ಪಾಕಿಸ್ತಾನದ ಮಧ್ಯಸ್ಥಿಕೆಯು ಇನ್ನೂ ವಿಫಲವಾಗಿಲ್ಲ ಮತ್ತು ಶಾಂತಿಯ ಪ್ರಯತ್ನಗಳು ಮುಂದುವರಿಯುತ್ತಿವೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.
ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ
ಹೊರ್ಮುಜ್ ಜಲಸಂಧಿಯು ವಿಶ್ವದ ಒಟ್ಟು ತೈಲ ವ್ಯಾಪಾರದ ಶೇ.20 ಕ್ಕಿಂತ ಹೆಚ್ಚು ಭಾಗವನ್ನು ನಿಯಂತ್ರಿಸುತ್ತದೆ. ಇಲ್ಲಿನ ಅಸ್ಥಿರತೆಯು ಜಾಗತಿಕ ತೈಲ ಬೆಲೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಇರಾನ್ ಈಗ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಭರವಸೆ ನೀಡಿರುವುದು ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ದೇಶಗಳಿಗೆ ನಿರಾಳತೆ ತಂದಿದೆ,(ಏಜೆನ್ಸೀಸ್).