Samay Raina | ಕಾಮಿಡಿಯನ್ ಸಮಯ್ ರೈನಾ 
ದೇಶ

3 ಲಕ್ಷ ದಂಡ ಕಟ್ಟಿ, ಇಲ್ದಿದ್ರೆ ಇನ್ನೊಂದು '0' ಸೇರಿಸ್ತೀವಿ!...ಕಾಮಿಡಿಯನ್ ಸಮಯ್ ರೈನಾಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ; ಅಷ್ಟಕ್ಕೂ ಏನಿದು ಪ್ರಕರಣ..? | Samay Raina

ನವದೆಹಲಿ: ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶವನ್ನು ಉಲ್ಲಂಘಿಸಿ, ಕೋರ್ಟ್‌ಗೆ ತಪ್ಪು ಮಾಹಿತಿ ನೀಡಲು ಯತ್ನಿಸಿದ ಆರೋಪದ ಮೇಲೆ ಯೂಟ್ಯೂಬರ್ ಹಾಗೂ ಕಾಮಿಡಿಯನ್ ಸಮಯ್ ರೈನಾಗೆ (Samay Raina) ಸುಪ್ರೀಂ ಕೋರ್ಟ್ 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ಸಮಯ್ ರೈನಾ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಆಟವಾಡುತ್ತಿದ್ದಾರೆ. ಸಮಾಜದ ಭಾವನೆ ಗೌರವಿಸುವುದು ಮತ್ತು ತಪ್ಪನ್ನು ತಿದ್ದುಕೊಳ್ಳುವುದು ಗೊತ್ತಿಲ್ಲದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಆರಂಭದಲ್ಲಿ 10 ಲಕ್ಷ ರೂಪಾಯಿ ದಂಡ ವಿಧಿಸಲು ಮುಂದಾದ ನ್ಯಾಯಪೀಠ, ಸಮಯ್ ರೈನಾ ಪರ ವಕೀಲರು ಕ್ಷಮಾದಾನ ನೀಡುವಂತೆ ಮನವಿ ಮಾಡಿದ ನಂತರ ಅದನ್ನು 3 ಲಕ್ಷ ರೂಪಾಯಿಗೆ ತಗ್ಗಿಸಿತು. ಅಲ್ಲದೆ, ಈಗ 3 ಲಕ್ಷ ರೂಪಾಯಿ ದಂಡ ಕಟ್ಟಿ, ಮುಂದಿನ ವಿಚಾರಣೆ ವೇಳೆ ಆದೇಶ ಪಾಲನೆಯಾಗದಿದ್ದರೆ ಇದಕ್ಕೆ ಇನ್ನೊಂದು 0 ಸೇರಿಸಿ 30 ಲಕ್ಷ ರೂಪಾಯಿ ದಂಡ ವಿಧಿಸುತ್ತೇವೆ ಎಂದು ಕಠಿಣ ಎಚ್ಚರಿಕೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಮ್ಮತಿ ಅಫಿಡವಿಟ್ (Compliance Affidavit) ಸಲ್ಲಿಸಲಾಗಿದೆ ಎಂದು ರೈನಾ ಪರ ವಕೀಲರು ವಾದಿಸಿದರಾದರೂ, ಇದರಲ್ಲಿ ಸತ್ಯಾಂಶವಿಲ್ಲ ಎನ್ನುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಯಾವುದೇ ಅಫಿಡವಿಟ್ ಸಲ್ಲಿಕೆಯಾಗದಿದ್ದರೂ ಸಲ್ಲಿಸಲಾಗಿದೆ ಎಂದು ಹೇಳಿರುವುದು ಗಂಭೀರವಾದ ದುರ್ವರ್ತನೆ ಎಂದು ಕಿಡಿಕಾರಿತು.
ಕ್ಯೂರ್ ಎಸ್ಎಂಎ ಇಂಡಿಯಾ ಫೌಂಡೇಶನ್' (Cure SMA India Foundation) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ, ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (SMA) ರೋಗಿಗಳಿಗೆ ತಗಲುವ ದುಬಾರಿ ವೆಚ್ಚ ಮತ್ತು ವಿಕಲಚೇತನರನ್ನು ಹಾಸ್ಯಮಾಡಿದ್ದ ಪ್ರಕರಣದಲ್ಲಿ ರೈನಾಗೆ ಈ ಹಿಂದೆ ಕೆಲವು ನಿರ್ದೇಶನಗಳನ್ನು ನೀಡಿತ್ತು. ಇಂಡಿಯಾಸ್ ಗಾಟ್ ಲೇಟೆಂಟ್ ಕಾರ್ಯಕ್ರಮ ನಡೆಸುವ ಸಮಯ್ ರೈನಾ ಹಾಗೂ ಇತರ ಕಾಮಿಡಿಯನ್‌ಗಳಾದ ವಿಪುಲ್ ಗೋಯಲ್, ಬಲರಾಜ್ ಸಿಂಗ್ ಘಾಯ್, ಸೊನಾಲಿ ಠಕ್ಕರ್ ಮತ್ತು ನಿಶಾಂತ್ ತನ್ವಾರ್ ಅವರು ಪ್ರತಿ ತಿಂಗಳು ವಿಕಲಚೇತನರಿಗಾಗಿ ಪ್ರದರ್ಶನಗಳನ್ನು ನೀಡಿ ಅವರ ಹಿತದೃಷ್ಟಿಗೆ ಹಣ ಸಂಗ್ರಹಿಸಬೇಕು ಎಂದು ಸೂಚಿಸಲಾಗಿತ್ತು.

ಆತನಲ್ಲಿ ಯಾವುದೇ ಪಶ್ಚಾತ್ತಾಪ ಇಲ್ಲ

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಪರಾಜಿತಾ ಸಿಂಗ್, ನ್ಯಾಯಾಲಯದ ಸೂಚನೆಯ ಹೊರತಾಗಿಯೂ ಸಮಯ್ ರೈನಾ ಸಂಸ್ಥೆಯನ್ನಾಗಲಿ ಅಥವಾ ವಿಕಲಚೇತನರನ್ನಾಗಲಿ ಸಂಪರ್ಕಿಸಿಲ್ಲ ಎಂದು ಕೋರ್ಟ್‌ ಗಮನಕ್ಕೆ ತಂದರು. ಯುವಜನತೆಗೆ ಈತ ಎಂತಹ ಐಕಾನ್ ಆಗುತ್ತಿದ್ದಾನೆ ಎಂದು ಯೋಚಿಸಿದರೆ ಭಯವಾಗುತ್ತದೆ ಮತ್ತು ಆತನಲ್ಲಿ ಯಾವುದೇ ಪಶ್ಚಾತ್ತಾಪ ಇಲ್ಲ ಎಂದು ವಾದಿಸಿದರು. ಇದೇ ವೇಳೆ ಸಮಯ್ ರೈನಾ ಪರ ವಕೀಲರು, ಕ್ಯೂರ್ ಎಸ್ಎಂಎ ಫೌಂಡೇಶನ್ ವಿಳಾಸವಿಲ್ಲದ ಕಾರಣ ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು. ವಿಚಾರಣೆ ವೇಳೆ ಸಿಜೆಐ ಸೂರ್ಯಕಾಂತ್ ಅವರು, ವಿದೇಶಗಳಲ್ಲಿ ಕುಳಿತು ತಾವು ನ್ಯಾಯಾಲಯದ ವ್ಯಾಪ್ತಿಗೂ ಮೀರಿದವರು ಎಂದು ತಿಳಿದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಇಂತಹ ಅಹಂಕಾರ ಮತ್ತು ದರ್ಪಕ್ಕೆ ಕೋರ್ಟ್ ಅವಕಾಶ ನೀಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ

ಈ ವಿವಾದದ ಮೂಲ 2025ರಲ್ಲಿ ಯೂಟ್ಯೂಬ್‌ನಲ್ಲಿ ಪ್ರಸಾರವಾದ ಇಂಡಿಯಾಸ್ ಗಾಟ್ ಲೇಟೆಂಟ್ ಶೋದ ಎರಡು ಸಂಚಿಕೆಗಳಲ್ಲಿದೆ. ಈ ಪ್ರದರ್ಶನಗಳಲ್ಲಿ ಸಮಯ್ ರೈನಾ ಮತ್ತು ಅವರ ಸಹ ಕಾಮಿಡಿಯನ್‌ಗಳು ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (SMA) ಕಾಯಿಲೆಯಿಂದ ಬಳಲುತ್ತಿರುವ ಮಗು ಸೇರಿದಂತೆ ವಿಕಲಚೇತನರು, ಅಂಧರು ಮತ್ತು ವಕ್ರದೃಷ್ಟಿ ಹೊಂದಿರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಸಂವೇದನಾ ರಹಿತ ಹಾಗೂ ಅವಮಾನಕರ ಹೇಳಿಕೆಗಳನ್ನು ನೀಡಿದ್ದರು.
ಈ ಹಾಸ್ಯ ಪ್ರಸಂಗಗಳು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾದಾಗ, ಸುಪ್ರೀಂ ಕೋರ್ಟ್ ಸ್ವತಃ ಮಧ್ಯಪ್ರವೇಶಿಸಿ ಕಾಮಿಡಿಯನ್‌ಗಳಿಗೆ ಸಮನ್ಸ್ ಜಾರಿಗೊಳಿಸಿತ್ತು. ಅಲ್ಲದೆ, ಅವರವರ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಬಹಿರಂಗ ಕ್ಷಮಾಯಾಚನೆ ಪ್ರಕಟಿಸುವಂತೆ ನಿರ್ದೇಶನ ನೀಡಿತ್ತು. ವಿಚಾರಣೆಯ ಸಂದರ್ಭದಲ್ಲಿ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ವಿಕಲಚೇತನರನ್ನು ನಿಂದಿಸುವುದರ ವಿರುದ್ಧ ಕಠಿಣ ಕಾನೂನು ಚೌಕಟ್ಟಿನ ಅಗತ್ಯವನ್ನು ಪ್ರತಿಪಾದಿಸಿದ್ದರು. ಎಸ್ಸಿ/ಎಸ್ಟಿ ಕಾಯ್ದೆಯ ಮಾದರಿಯಲ್ಲೇ, ವಿಕಲಚೇತನರನ್ನು ಅವಮಾನಿಸುವ ಮತ್ತು ಕೆಟ್ಟದಾಗಿ ಹಾಸ್ಯ ಮಾಡುವವರ ವಿರುದ್ಧ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲು ಶಾಸನಬದ್ಧ ಕಾನೂನು ತರಲು ಸಂಸತ್ತು ಪರಿಶೀಲಿಸಬೇಕು ಎಂದು ಸಲಹೆ ನೀಡಿದ್ದರು. ಬಳಿಕ, 2025 ರ ಅಕ್ಟೋಬರ್‌ನಲ್ಲಿ ಸಮಯ್ ರೈನಾ ಹಾಗೂ ಅವರ ಸಹ ಕಾಮಿಡಿಯನ್‌ಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿ ಈ ವಿವಾದದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು(ಏಜೆನ್ಸೀಸ್​).