ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಬಾಬಾ ರಾಮ​ದೇವ್ 
ದೇಶ

ಪತಂಜಲಿ ಸ್ವದೇಶಿ ಹೆಸರಲ್ಲಿ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡ್ತಿದೆ: ಬಾಬಾ ರಾಮದೇವ್ ವಿರುದ್ದ ಬ್ರಿಜ್​ ಭೂಷಣ್ ವಾಗ್ದಾಳಿ | Brij Bhushan

ಲಖನೌ: ಪತಂಜಲಿ ರಾಯಭಾರಿ, ಯೋಗ ಗುರು ಬಾಬಾ ರಾಮದೇವ್ ವಿರುದ್ಧ ಬಿಜೆಪಿಯ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan) ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ಪತಂಜಲಿ ಸ್ವದೇಶಿ ಹೆಸರಲ್ಲಿ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡ್ತಿದ್ದಾರೆ ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಕಾಲೇಜು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ರಾಮ್‌ದೇವ್ ಸ್ವದೇಶಿ ಚಳವಳಿಯನ್ನು ಚೆನ್ನಾಗಿ ಮುನ್ನಡೆಸಿದ್ದರು, ಆದರೆ ಈಗ ಅವರು ವಿದೇಶಿ ಒಳ ಉಡುಪುಗಳನ್ನು ಸಹ ತಯಾರಿಸುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ದೇಶದಲ್ಲಿ ನಕಲಿ ತುಪ್ಪದ ಬಗ್ಗೆ ಪದೇ-ಪದೇ ಪ್ರಶ್ನೆಗಳು ಬರುತ್ತಿವೆ ಮತ್ತು ಅದಕ್ಕೆ ರಾಮ್‌ದೇವ್ ಜವಾಬ್ದಾರರಾಗಿರಬೇಕು. ಇದೇ ವೇಳೆ ಯುಪಿಎ ಅವಧಿಯ ಪ್ರತಿಭಟನೆಯೊಂದರಲ್ಲಿ ಮಹಿಳೆಯ ಚೂಡಿದಾರ್ ತೊಟ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಘಟನೆಯನ್ನು ಉಲ್ಲೇಖಿಸಿದ ಅವರು, ಭವಿಷ್ಯದಲ್ಲಿ ಯಾವುದೇ ಆಂದೋಲನವನ್ನು ಎತ್ತಿದರೆ, ಹಿಂದಿನಂತೆ 'ಸಿಂಧೂರ' ಮತ್ತು 'ಚೂಡಿದಾರ' ಧರಿಸಿ ಬರಬಾರದು. ಈ ಬಾರಿ ಗಂಡಸು ಆಗಿಯೇ ನಿರ್ಣಾಯಕ ಹೋರಾಟ ಮಾಡಬೇಕು ಎಂದು ಸವಾಲು ಹಾಕಿದ್ದಾರೆ.
ಬ್ರಿಜ್ ಭೂಷಣ್ ಮತ್ತು ರಾಮದೇವ್ ನಡುವಿನ ಈ ವಿವಾದ ಹೊಸದೇನಲ್ಲ. 2022ರಲ್ಲಿ ಪತಂಜಲಿ ತನ್ನ ಬ್ರ್ಯಾಂಡ್‌ಗೆ 'ಪತಂಜಲಿ' ಹೆಸರನ್ನು ಬಳಸುವುದನ್ನು ನಿಲ್ಲಿಸಬೇಕೆಂದು ಬ್ರಿಜ್ ಭೂಷಣ್ ಆಗ ಒತ್ತಾಯಿಸಿದ್ದರು, ಪತಂಜಲಿ ಮಹರ್ಷಿ ಪತಂಜಲಿಯ ಜನ್ಮಸ್ಥಳವಾದ ಗೊಂಡಾ ಜಿಲ್ಲೆಗೆ ಏನನ್ನೂ ಮಾಡಿಲ್ಲ ಎಂದು ಕಿಡಿಕಾರಿದ್ದರು (ಏಜೆನ್ಸೀಸ್).