ನಾಶಿಕ್​ ಟಿಸಿಎಸ್​ ಕಂಪನಿ  
ದೇಶ

ವೈ-ಫೈ ಪಾಸ್​ವರ್ಡ್​ಗಳಲ್ಲೂ ಬಿಟ್ಟಿಲ್ಲ... ಮತ್ತೊಂದು ಸ್ಫೋಟಕ ಸಂಗತಿ ಬಾಯ್ಬಿಟ್ಟ ಟಿಸಿಎಸ್​ ನಾಶಿಕ್​ ಸಂತ್ರಸ್ತೆ | Nashik TCS Case

ಪ್ರಮುಖ ಮುಖ್ಯಾಂಶಗಳು

  • ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಕಿರುಕುಳ ಪ್ರಕರಣ
  • ಇಡೀ ವಿಶ್ವದಲ್ಲಿ ಸದ್ದು ಮಾಡಿದ ಪ್ರಕರಣದಲ್ಲಿ ಒಟ್ಟು 8 ಆರೋಪಿಗಳ ಬಂಧನ
  • ನಾಶಿಕ್​ ಟಿಸಿಎಸ್​ನ ಕರಾಳ ಸತ್ಯಗಳನ್ನು ಬಿಚ್ಚಿಟ್ಟ ಸಂತ್ರಸ್ತೆ
ಮುಂಬೈ: ಮಹಾರಾಷ್ಟ್ರದ ನಾಶಿಕ್‌ನಲ್ಲಿರುವ ದೈತ್ಯ ಟೆಕ್​ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ಹಾಗೂ ಬಲವಂತದ ಧಾರ್ಮಿಕ ಮತಾಂತರಕ್ಕೆ (Nashik TCS Case) ಒತ್ತಾಯಿಸಿದ ಪ್ರಕರಣ ಸದ್ಯ ದೇಶದ ಜನತೆಯನ್ನು ಅಕ್ಷರಶಃ ಆತಂಕಕ್ಕೆ ದೂಡಿದೆ. ಈ ಕೇಸ್​ಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ 9 ಎಫ್‌ಐಆರ್‌ಗಳು ದಾಖಲಾದ ಬೆನ್ನಲ್ಲೇ ಕಂಪನಿಯ ಎಚ್​ಆರ್​ ಸೇರಿ ಒಟ್ಟು ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಧ್ಯೆ, ತನಿಖೆಯಲ್ಲಿ ಮತ್ತೊಂದು ಸ್ಫೋಟಕ ಸಂಗತಿ ಬಟಾಬಯಲಾಗಿದೆ. 
ನಾಶಿಕ್‌ನ ಟಿಸಿಎಸ್ ಬಿಪಿಒ ಘಟಕದಲ್ಲಿ ಲೈಂಗಿಕ ಕಿರುಕುಳ ಮತ್ತು ಧಾರ್ಮಿಕ ಮತಾಂತರ ಆರೋಪದ ಪ್ರಕರಣದಲ್ಲಿ ದಿನ ಕಳೆದಂತೆ ಆಘಾತಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ. ಕಂಪನಿ ಘಟಕ ಮತ್ತು ವೈಫೈ ಪಾಸ್‌ವರ್ಡ್‌ಗಳನ್ನು ಬಳಕೆ ಮಾಡಲು ಮಹಿಳಾ ಉದ್ಯೋಗಿಗಳಿಗೆ ಚಿತ್ರಹಿಂಸೆ ಆಗುತ್ತಿತ್ತು ಎಂಬುದು ನಿಜಕ್ಕೂ ಶೋಚನೀಯ. ಆರೋಪಿಗಳು, ಸಿಸ್ಟಮ್​ನ ಹಲವು ಎಂಟ್ರಿಗಳಿಗೆ ಪಾಸ್​ವರ್ಡ್​ ಅತ್ಯಗತ್ಯ ಮತ್ತು ಪದೇ ಪದೇ ಬಳಕೆ ಮಾಡಬೇಕು ಎಂಬುದನ್ನು ಚೆನ್ನಾಗಿ ತಿಳಿದಿದ್ದರು. ಹೀಗಾಗಿಯೇ, ಅದಕ್ಕೆ ಅಶ್ಲೀಲ ಪದ, ಭಾಷೆಗಳನ್ನೇ ಪಾಸ್​​ವರ್ಡ್​ ಆಗಿ ಇಡುತ್ತಿದ್ದರು ಎಂಬುದು ಈಗ ಗೊತ್ತಾಗಿದೆ.  
ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿದ ಸಂತ್ರಸ್ತೆ, ಮಾನಸಿಕವಾಗಿ ಕಿರುಕುಳ ನೀಡಲು ವಾಟ್ಸ್​ಆ್ಯಪ್​ ಗ್ರೂಪ್​ಗಳಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದರು. ಟ್ರೇನಿಂಗ್​ಗೆ ಸೇರಿದ ಮೊದಲ ದಿನದಿಂದಲೂ ಹಿಂಸಿಸಿದ್ದಾರೆ. ಆರೋಪಿಗಳ ವರ್ತನೆ ಬಗ್ಗೆ ಸಂಸ್ಥೆಯ ಮೇಲಧಿಕಾರಿಗೆ ದೂರು ನೀಡಿದ ನಂತರವೂ ಯಾವುದೇ ಪ್ರಯೋಜನವಾಗಲಿಲ್ಲ. ಇದಾದ ಮೇಲೆ ಕಿರುಕುಳ ಇನ್ನಷ್ಟು ಹೆಚ್ಚಾಯಿತು ಎಂದು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಇಬ್ಬರು ಆರೋಪಿಗಳಾದ ಡ್ಯಾನಿಶ್ ಶೇಖ್ ಮತ್ತು ತೌಸಿಫ್ ಅತ್ತರ್ ನಮಗೆ ಡಿಜಿಟಲ್ ಮುಖಾಂತರ ಕಿರುಕುಳ ನೀಡುವುದಲ್ಲದೆ, ನನ್ನ ಬಗ್ಗೆ ಇಲ್ಲ-ಸಲ್ಲದ ವದಂತಿಗಳನ್ನು ಹರಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಪೊಲೀಸ್ ತನಿಖೆಯ ಪ್ರಕಾರ, ಕಿರುಕುಳವು ವೈಯಕ್ತಿಕ ಸಂಭಾಷಣೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ನಾಸಿಕ್ ಟಿಸಿಎಸ್ ಘಟಕದ ಟೀಮ್​ ಲೀಡರ್​ವೊಬ್ಬ ಅಧಿಕೃತ ವ್ಯಾಟ್ಸ್​ಆ್ಯಪ್​ ಗ್ರೂಪ್​ಗಳಲ್ಲಿ ಪ್ರತಿದಿನ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. 
ಮಹಿಳಾ ಉದ್ಯೋಗಿಗಳನ್ನು ಮಾನಸಿಕವಾಗಿ ಹಿಂಸಿಸುವ ಉದ್ದೇಶದಿಂದ, ಕಿರಾತಕರು ಆಗಾಗ್ಗೆ ಆಫೀಸ್​ನ ವೈ-ಫೈ ಪಾಸ್‌ವರ್ಡ್‌ಗಳನ್ನು ಬದಲಾಯಿಸುತ್ತಿದ್ದರು ಮತ್ತು ಅವರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಅಶ್ಲೀಲ ಪದಗಳನ್ನು ಬಳಸುತ್ತಿದ್ದರು ಎಂದು ಸಂತ್ರಸ್ತ ಮಹಿಳಾ ಉದ್ಯೋಗಿಗಳು ತಮ್ಮ ಹೇಳಿಕೆಗಳಲ್ಲಿ ಉಲ್ಲೇಖಿಸಿದ್ದಾರೆ.
ಕಂಪನಿಯ ಮಹಿಳಾ ಉದ್ಯೋಗಿಗಳು ಹಲವು ದೂರುಗಳನ್ನು ಸಲ್ಲಿಸಿದ ಬೆನ್ನಲ್ಲೇ ಈ ಬೆಚ್ಚಿಬೀಳಿಸುವ ಪ್ರಕರಣ ಇಡೀ ಜಗತ್ತಿಗೆ ತಿಳಿಯುವಂತಾಯಿತು. ಇದು ಫೆಬ್ರವರಿ 2022ರಿಂದ ಮಾರ್ಚ್ 2026ರ ಅವಧಿಯನ್ನು ಒಳಗೊಂಡಿದೆ. ವಿಶೇಷ ತನಿಖಾ ತಂಡವನ್ನು ರಚಿಸಿದ ಬಳಿಕ ಸಂಸ್ಥೆಯ ಎಂಟು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಡ್ಯಾನಿಶ್ ಶೇಖ್, ತೌಸಿಫ್ ಅತ್ತರ್, ರಜಾ ಮೆಮನ್, ಶಾರುಖ್ ಖುರೇಷಿ, ಶಫಿ ಶೇಖ್, ಆಸಿಫ್ ಅಫ್ತಾಬ್ ಅನ್ಸಾರಿ ಮತ್ತು ಎಚ್​ಆರ್​ ನಿದಾ ಖಾನ್ ಮತ್ತು ಅಶ್ವಿನಿ ಚೈನಾನಿ ಎಂದು ಗುರುತಿಸಲಾಗಿದೆ,(ಏಜೆನ್ಸೀಸ್).