Passport Travel Document Only
- ಭಾರತೀಯ ಪಾಸ್‌ಪೋರ್ಟ್ ಕೇವಲ ಪ್ರಯಾಣದ ದಾಖಲೆ, ಪೌರತ್ವದ ಅಂತಿಮ ಪುರಾವೆಯಲ್ಲ
- ಈಗ ಕೇವಲ 5 ಕೆಲಸದ ದಿನಗಳಲ್ಲಿ ಪಾಸ್‌ಪೋರ್ಟ್ ಪ್ರಕ್ರಿಯೆ ಪೂರ್ಣ.
- ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಕಳೆಯುವ ಸಮಯ ಕಡಿಮೆಯಾಗಿದೆ.
ನವದೆಹಲಿ: ಭಾರತದ ಪಾಸ್‌ಪೋರ್ಟ್ ಇದೆ ಎಂದರೆ ಅದು ಭಾರತೀಯ ಪೌರತ್ವ ಪಡೆದಂತಲ್ಲ. ಪಾಸ್‌ಪೋರ್ಟ್ ಪ್ರಯಾಣದ ದಾಖಲೆಯಷ್ಟೇ ಎಂದು ಪೌರತ್ವಕ್ಕೆ ಅರ್ಹತೆಯ ಪುರಾವೆಯಾಗಿ ಪಾಸ್ಪೋರ್ಟ್ಗಳ ಬಳಕೆ(Passport Travel Document Only) ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಾಗುತ್ತಿರುವ ಗೊಂದಲಲಕ್ಕೆ ವಿದೇಶಾಂಗ ಸಚಿವಾಲಯ ತೆರೆ ಎಳೆದಿದೆ.
ಪಾಸ್‌ಪೋರ್ಟ್ ಪೌರತ್ವ ನಿರ್ಣಾಯಕವಲ್ಲ
ದೇಶದ ಪಾಸ್ಪೋರ್ಟ್ಗಳು ಹಾಗೂ ಜಾಗತಿಕ ಚಲನಶೀಲತೆಯ ಸುಧಾರಣೆಗಳ ಕುರಿತು ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಅಧಿಕಾರಿಗಳು ಈ ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ. ಭಾರತೀಯ ಪಾಸ್‌ಪೋರ್ಟ್ ಕೇವಲ ಒಂದು ಪ್ರಯಾಣದ ದಾಖಲೆಯಾಗಿದ್ದು ಇದನ್ನು ಪೌರತ್ವದ ನಿರ್ಣಾಯಕ ಪುರಾವೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗಿದೆ.
ಪಾಸ್‌ಪೋರ್ಟ್‌ಗಳನ್ನು ಭಾರತೀಯ ನಾಗರಿಕರಿಗೇ ನೀಡಲಾಗುತ್ತದೆಯಾದರೂ, ಈ ದಾಖಲೆಯ ಮುಖ್ಯ ಉದ್ದೇಶ ಅಂತರರಾಷ್ಟ್ರೀಯ ಪ್ರಯಾಣವನ್ನು ಸುಲಭಗೊಳಿಸುವುದು ಮತ್ತು ವಿದೇಶಗಳಲ್ಲಿ ಗುರುತನ್ನು ಸ್ಥಾಪಿಸುವುದಾಗಿದೆ ಎಂದು ಅಧಿಕಾರಿಗಳು ಒತ್ತಿಹೇಳಿದ್ದಾರೆ.
ಕೇವಲ 5 ದಿನದಲ್ಲಿ ಸಿಗತ್ತೆ ಪಾಸ್‌ಪೋರ್ಟ್
ತಂತ್ರಜ್ಞಾನ ಆಧಾರಿತ ಸುಧಾರಣೆಗಳಿಂದಾಗಿ ಈಗ ಕೇವಲ 5 ಕೆಲಸದ ದಿನಗಳಲ್ಲಿ ಪಾಸ್‌ಪೋರ್ಟ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದೆ. ಅರ್ಜಿದಾರರು ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಕಳೆಯುವ ಸಮಯ 45 ನಿಮಿಷಗಳಿಗಿಂತ ಕಡಿಮೆಯಾಗಿದೆ.
ಸೇವಾ ಕೇಂದ್ರ ಹೆಚ್ಚಳ
ಕಳೆದ ವರ್ಷದ ಮೇ ತಿಂಗಳಿನಿಂದ ದೇಶಾದ್ಯಂತ ಬಯೋಮೆಟ್ರಿಕ್ ಮಾಹಿತಿ ಒಳಗೊಂಡ ಚಿಪ್ ಆಧಾರಿತ ಇ-ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗುತ್ತಿದ್ದು, ಇದು ನಕಲಿ ಪಾಸ್‌ಪೋರ್ಟ್ ತಡೆಯಲು ನೆರವಾಗುತ್ತಿದೆ. ದೇಶಾದ್ಯಂತ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಸಂಖ್ಯೆ 545ಕ್ಕೆ ಏರಿಕೆಯಾಗಿದ್ದು, 2027ರ ವೇಳೆಗೆ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಠ ಒಂದು ಕೇಂದ್ರ ಹೊಂದುವ ಗುರಿ ಇದೆ.ಪ್ರಸ್ತುತ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ. 10 ರಷ್ಟು ಜನರು ಮಾತ್ರ ಪಾಸ್‌ಪೋರ್ಟ್ ಹೊಂದಿದ್ದಾರೆ.
ಭಾರತವು ವಿವಿಧ 25 ದೇಶಗಳೊಂದಿಗೆ (ಯುರೋಪಿಯನ್ ಯೂನಿಯನ್, ಯುಕೆ, ಆಸ್ಟ್ರೇಲಿಯಾ ಮತ್ತು ಗಲ್ಫ್ ದೇಶಗಳು ಸೇರಿದಂತೆ) 27 ಸಂಚಾರ ಒಪ್ಪಂದಗಳನ್ನು ಮಾಡಿಕೊಂಡಿದೆ. 27 ದೇಶಗಳು ಭಾರತೀಯರಿಗೆ ವೀಸಾ ಮುಕ್ತ ಪ್ರವೇಶ ನೀಡುತ್ತಿವೆ.
'ಇ-ಮೈಗ್ರೇಟ್ 2.0' ಪೋರ್ಟಲ್ ಮೂಲಕ 7 ಲಕ್ಷಕ್ಕೂ ಹೆಚ್ಚು ಭಾರತೀಯ ಕಾರ್ಮಿಕರು ವಿದೇಶಿ ವಲಸೆ ಅನುಮತಿ ಪಡೆದಿದ್ದಾರೆ. ಗಲ್ಫ್ ರಾಷ್ಟ್ರಗಳು ಮತ್ತು ಸಿಂಗಾಪುರದಲ್ಲಿ ಸಂಕಷ್ಟದಲ್ಲಿರುವ ಭಾರತೀಯ ಮಹಿಳೆಯರಿಗಾಗಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ, (ಏಜೆನ್ಸೀಸ್).