What documents establish Indian citizenship
- ಪಾಸ್ಪೋರ್ಟ್ ಪೌರತ್ವ ಪುರಾವೆಯಲ್ಲ ಎಂದ ವಿದೇಶಾಂಗ ಸಚಿವಾಲಯ.
- ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಆಧಾರ್ ಯಾವುದು ಪೌರತ್ವ ದಾಖಲೆಯಲ್ಲ.
- ಪೌರತ್ವ ದಾಖಲೆ ಯಾವುದು, ಯಾರಿಗೆ ನೀಡಲಾಗುತ್ತದೆ?.
What Documents Establish Indian Citizenship: ಆಧಾರ್ ಕಾರ್ಡ್ ಪೌರತ್ವ ನಿರ್ಧರಿಸುವ ಪುರಾವೆಯಲ್ಲ. ಅದು ಕೇವಲ ಗುರುತಿನ ಚೀಟಿ ಹಾಗೂ ವಿಳಾಸದ ಪುರಾವೆಯಷ್ಟೇ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಹೇಳಿತ್ತು. ಮತದಾರರ ಗುರುತಿನ ಚೀಟಿ ಸಹ ವೋಟ್ ಹಾಕೋಕೆ ಅಷ್ಟೇ ಸೀಮಿತ ಎಂದು ಹೇಳಲಾಗಿತ್ತು. ಈಗ ಕೇಂದ್ರದ ವಿದೇಶಾಂಗ ಸಚಿವಾಲಯ, ಪಾಸ್ಪೋರ್ಟ್ ಪ್ರಯಾಣದ ದಾಖಲೆ ಅಷ್ಟೇ ಅದನ್ನು ಪೌರತ್ವದ ಪುರಾವೆಯಾಗಿ ಬಳಕೆ ಮಾಡಿಕೊಳ್ಳೋಕೆ ಬರೋದಿಲ್ಲ ಎಂದು ಹೇಳಿದೆ. ವಿದೇಶಾಂಗ ಸಚಿವಾಲಯ ಕೊಟ್ಟ ಹೇಳಿಕೆಯು ಸದ್ಯ ದೇಶಾದ್ಯಂತ ಹೊಸ ಚರ್ಚೆ ಮತ್ತು ಆತಂಕಕ್ಕೆ ಕಾರಣವಾಗಿದೆ. ಈ ಗೊಂದಲಗಳಿಗೆ ಉತ್ತರ ಇಲ್ಲಿದೆ
ಗೊಂದಲ ಶುರುವಾಗಿದ್ದು ಹೀಗೆ!
ಜೂನ್ 24ರಂದು 14ನೇ ಪಾಸ್ಪೋರ್ಟ್ ಸೇವಾ ದಿವಸ್ ಅನ್ನು ಗುರುತಿಸುವ ಕಾರ್ಯಕ್ರಮ ಜರುಗಿತ್ತು. ಈ ಸಮಾರಂಭದಲ್ಲಿ ಮಾತನಾಡಿದ ಹಿರಿಯ ವಿದೇಶಾಂಗ ಸಚಿವಾಲಯದ ಅಧಿಕಾರಿ, ಭಾರತೀಯರು ವಿದೇಶದಲ್ಲಿರುವಾಗ ಪಾಸ್ಪೋರ್ಟ್ ಅನ್ನು ರಾಷ್ಟ್ರೀಯತೆಯನ್ನು ದೃಢೀಕರಿಸುವ ದಾಖಲೆಯಾಗಿ ಬಳಸಬೇಕು ಹೊರತು, ಪೌರತ್ವ ದಾಖಲಾತಿಯಾಗಿ ಬಳಕೆ ಮಾಡಬಾರದು ಎಂದು ಹೇಳಿದ್ದರು. ಸದ್ಯ ಈ ಹೇಳಿಕೆಗಳು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ವೋಟರ್ ಐಡಿ, ಆಧಾರ್ ಕಾರ್ಡ್, ಪಾಸ್ಪೋರ್ಟ್ ಪೌರತ್ವದ ಪುರಾವೆ ಅಲ್ಲ ಎಂದ ಮೇಲೆ ಭಾರತೀಯ ನಾಗರಿಕತ್ವ ಕಾಯ್ದೆ 1955ರ ಪ್ರಕಾರ ಪೌರತ್ವವನ್ನು ನಿರ್ಧರಿಸುವ ನಿಜವಾದ ಮಾನದಂಡಗಳೇನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಪಾಸ್ಪೋರ್ಟ್ ಪೌರತ್ವದ ಪುರಾವೆಯಲ್ಲ ಯಾಕೆ?
ಪಾಸ್ಪೋರ್ಟ್ ಎಂಬುದು ಮೂಲಭೂತವಾಗಿ ಒಂದು ಪ್ರಯಾಣದ ದಾಖಲೆ. ಇದು ವಿದೇಶದಲ್ಲಿರುವಾಗ ಮಾತ್ರ ಹೊಂದಿರುವವರ ರಾಷ್ಟ್ರೀಯತೆಯನ್ನು ದೃಢೀಕರಿಸುತ್ತದೆ. ಕಾನೂನುಬದ್ಧವಾಗಿ, ಪೌರತ್ವವನ್ನು 'ಪೌರತ್ವ ಕಾಯ್ದೆ'ಯಡಿ ನಿರ್ಧರಿಸಲಾಗುತ್ತದೆ. ಆದರೆ ಪಾಸ್ಪೋರ್ಟ್ ಅನ್ನು ಪಾಸ್ಪೋರ್ಟ್ ಕಾಯಿದೆ 1967 ರ ಕಾಯ್ದೆ ಸೆಕ್ಷನ್ 20 ನೀಡಲಾಗುತ್ತದೆ. ಹೀಗಾಗಿ ಪಾಸ್ಪೋರ್ಟ್ ಎಲ್ಲ ಸಂದರ್ಭದಲ್ಲಿ ಪೌರತ್ವದ ಪುರಾವೆಯಾಗಿ ಬಳಕೆಯಾಗುವುದಿಲ್ಲ.
ಭಾರತೀಯ ಪೌರತ್ವ ಪಡೆಯಲು ಇರುವ ಮಾರ್ಗಗಳು ಇವು
ಭಾರತೀಯ ನಾಗರಿಕತ್ವ ಕಾಯ್ದೆ 1955ರ ಪ್ರಕಾರ ಐದು ವಿಧಾನದಲ್ಲಿ ಪೌರತ್ವವನ್ನು ಪಡೆದುಕೊಳ್ಳಬಹುದಾಗಿದೆ.
- ಜನನ ಪ್ರಮಾಣ ಪತ್ರ( ಭಾರತದಲ್ಲಿರುವವರಿಗೆ ಕೆಲವು ಷರತ್ತು ಬದ್ಧ ಪೌರತ್ವ ಸಿಗುತ್ತದೆ)
- ವಂಶಾವಳಿಯ ಪೌರತ್ವ (ಪೋಷಕರು ಭಾರತೀಯರಾದರೇ ವಿದೇಶದಲ್ಲಿ ಜನಿಸಿದ ಮಕ್ಕಳಿಗೆ ಪೌರತ್ವ ಸಿಗುವುದು)
- ನೋಂದಣಿ ಮೂಲಕ (ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಮೂಲಕ ಸಿಗುವ ದಾಖಲೆ)
- ನೈಸರ್ಗೀಕರಣ ಮೂಲಕ ಸಿಗುವ ಪೌರತ್ವ (ದೀರ್ಘಕಾಲ ಭಾರತದಲ್ಲಿ ವಾಸಿಸುವ ವಿದೇಶಿಗರು ಕೆಲವು ಷರತ್ತುಗಳನ್ನು ಪೂರೈಸಿ ಪೌರತ್ವ ಪಡೆಯುವುದು)
- ಹೊಸ ಪ್ರದೇಶ ಸೇರ್ಪಡೆಗೊಳ್ಳುವ ಮೂಲಕ (ಭಾರತಕ್ಕೆ ಹೊಸ ಪ್ರದೇಶ ಸೇರ್ಪಡೆಯಾದರೆ ಅದರ ಅಲ್ಲಿನ ನಿವಾಸಿಗಳಿಗೆ ಪೌರತ್ವ ಸಿಗುವುದು)
ಪೌರತ್ವಕ್ಕೆ ನೇರ ಪುರಾವೆ ಯಾವುದು ಮತ್ತು ಯಾರಿಗೆ ಸಿಗುತ್ತದೆ?
ಪೌರತ್ವ ದಾಖಲೆಯನ್ನು ನೋಂದಣಿ ಅಥವಾ ನೈಸರ್ಗೀಕರಣ ಪ್ರಕ್ರಿಯೆಗಳ ಮೂಲಕ ಭಾರತೀಯ ಪೌರತ್ವ ಪಡೆದ ವ್ಯಕ್ತಿಗಳಿಗೆ ಮಾತ್ರ ಸರ್ಕಾರ ನೀಡುತ್ತದೆ. ಜನನ ಅಥವಾ ವಂಶಾವಳಿಯ ಮೂಲಕ ಪೌರತ್ವ ಪಡೆದ ಬಹುತೇಕ ಭಾರತೀಯರ ಬಳಿ ಈ ಪ್ರಮಾಣಪತ್ರ ಇರುವುದಿಲ್ಲ.
ಭಾರತದ ಎಲ್ಲಾ ನಾಗರಿಕರಿಗೂ ಅನ್ವಯವಾಗುವಂತೆ ಪೌರತ್ವದ ನಿರ್ಣಾಯಕ ಪುರಾವೆಯಾಗಿ ಕಾರ್ಯನಿರ್ವಹಿಸುವ ಯಾವುದೇ ಒಂದು ಸಾರ್ವತ್ರಿಕ ದಾಖಲೆಯನ್ನು ಕೇಂದ್ರ ಸರ್ಕಾರ ನೀಡುವುದಿಲ್ಲ. ಪೌರತ್ವವನ್ನು ಅವರು ಹೇಗೆ ಪಡೆದುಕೊಂಡಿದ್ದಾರೆ ಮತ್ತು ಪೌರತ್ವ ಕಾಯ್ದೆಯಡಿ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಭಾರತೀಯ ಪೌರತ್ವಕ್ಕೆ ನೇರ ಪುರಾವೆ ಯಾವುದು?
ನೋಂದಣಿ ಅಥವಾ ರಾಷ್ಟ್ರೀಕರಣದ ಮೂಲಕ ಭಾರತದ ಪೌರತ್ವ ಪಡೆದ ವ್ಯಕ್ತಿಗಳಿಗೆ ಸರ್ಕಾರ ನೀಡುವ 'ಪೌರತ್ವ ಪ್ರಮಾಣಪತ್ರ' ನೇರ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.
ಜನನ ದಿನಾಂಕದ ಮಹತ್ವವೇನು?
ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕದ ಮೂಲಕ ಆತ ಭಾರತೀಯನೇ ಎಂದು ನಿರ್ಧರಿಸಲಾಗುತ್ತದೆ.
- ಜನವರಿ 26, 1950 ಮತ್ತು ಜುಲೈ 1, 1987 ರ ನಡುವೆ ಭಾರತದಲ್ಲಿ ಜನಿಸಿದ ಯಾವುದೇ ವ್ಯಕ್ತಿಯನ್ನು ಹುಟ್ಟಿನಿಂದ ಭಾರತೀಯ ನಾಗರಿಕ ಎಂದು ಪರಿಗಣಿಸಲಾಗುತ್ತದೆ.
- ಜುಲೈ 1, 1987 ರಂದು ಅಥವಾ ನಂತರ ಜನಿಸಿದ ವ್ಯಕ್ತಿಯನ್ನು, ಅಥವಾ ಆತನ ತಂದೆ ಭಾರತೀಯನಾಗಿದ್ದರೆ ಅವರನ್ನು ಭಾರತೀಯ ನಾಗರಿಕ ಎಂದು ಪರಿಗಣಿಸಲಾಗುತ್ತದೆ.
- ಡಿಸೆಂಬರ್ 3, 2004 ರಂದು ಅಥವಾ ನಂತರ ಜನಿಸಿದವರಿಗೆ, ಇಬ್ಬರೂ ಪೋಷಕರು ಭಾರತೀಯ ನಾಗರಿಕರಾಗಿದ್ದರೆ ಮಾತ್ರ ಪೌರತ್ವವನ್ನು ನೀಡಲಾಗುತ್ತದೆ. ಅಥವಾ ಒಬ್ಬರು ಭಾರತೀಯರಾಗಿದ್ದು, ಮತ್ತೊಬ್ಬರು ಅಕ್ರಮ ವಲಸಿಗರಾಗದಿದ್ದರೆ ಅಂತವರನ್ನು ಭಾರತೀಯರು ಎಂದು ಪರಿಗಣಿಸಲಾಗುತ್ತದೆ.
ಜನನ ಅಥವಾ ವಂಶಾವಳಿಯ ಮೂಲಕ ಪೌರತ್ವ ಪಡೆದವರ ಕತೆ ಏನು?
ಹೆಚ್ಚಿನ ಭಾರತೀಯರು ಜನನ ಅಥವಾ ವಂಶಾವಳಿಯ ಮೂಲಕ ಪೌರತ್ವ ಪ್ರಮಾಣ ಪತ್ರವನ್ನು ಪಡೆದುಕೊಂಡಿರುತ್ತಾರೆ. ಇವರಿಗೆ ಪೌರತ್ವ ಪ್ರಮಾಣ ಪತ್ರ ನೋಡೋದಿಲ್ಲ. ಇಂತಹ ಸಂದರ್ಭದಲ್ಲಿ ಹುಟ್ಟಿದ ದಿನಾಂಕ, ಹುಟ್ಟಿದ ಸ್ಥಳ, ಪೋಷಕರ ವಿವರಗಳು ಮತ್ತು ರಾಷ್ಟ್ರೀಯತೆಗೆ ಸಂಬಂಧಿಸಿದ ವಿವಿಧ ದಾಖಲೆಗಳ ಸಂಯೋಜನೆಯ ಮೂಲಕ ಪೌರತ್ವವನ್ನು ಸ್ಥಾಪಿಸಲಾಗುತ್ತದೆ.
ಪೌರತ್ವವನ್ನು ಸಾಬೀತುಪಡಿಸಲು ಸಹಾಯ ಮಾಡುವ ದಾಖಲೆಗಳು ಯಾವುದು?
- ಜನನ ಪ್ರಮಾಣ ಪತ್ರ
- ಪೋಷಕರ ಪೌರತ್ವ ಪ್ರಮಾಣ ಪತ್ರ
- ಪೋಷಕರು ಭಾರತದ ನಾಗರಿಕರು ಎಂಬುದನ್ನು ತೋರಿಸುವ ದಾಖಲೆಗಳು
- ಪೋಷಕರ ಭಾರತೀಯ ಪ್ಯಾಸ್‌ಪೋರ್ಟ್‌ಗಳು
- ಜನನ, ಪೋಷಕತ್ವ ಮತ್ತು ರಾಷ್ಟ್ರೀಯತೆಗೆ ಸಂಬಂಧಿಸಿದ ಇತರ ಅಧಿಕೃತ ದಾಖಲೆಗಳು.
ಪೌರತ್ವಕ್ಕೆ ಸಲ್ಲಿಸುವ ಅರ್ಜಿಗೆ ಪಾಸ್ಪೋರ್ಟ್ ಬಳಕೆ ಮಾಡಬಹುದೇ?
ಗೃಹ ಸಚಿವಾಲಯದ ಮಾರ್ಗಸೂಚಿ ಪ್ರಕಾರ, ಭಾರತೀಯ ನಾಗರಿಕರ ಸಂಗಾತಿ ಅಥವಾ ಮಕ್ಕಳಿಗೆ ಸಂಬಂಧಿಸಿದ ಅರ್ಜಿಯಲ್ಲಿ ಭಾರತೀಯ ಪಾಸ್ಪೋರ್ಟ್ ಅನ್ನು ಪೌರತ್ವದ ಪುರಾವೆಯಾಗಿ ಬಳಸಲು ಅವಕಾಶವಿದೆ.
ಆಧಾರ್ ಕಾರ್ಡ್, ವೋಟರ್, ಡ್ರೈವಿಂಗ್ ಲೈಸೆನ್ಸ್ ಪೌರತ್ವದ ಪುರಾವೆಗಳೇ?
ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಈಗಾಗಲೇ ಹೇಳಿರುವಂತೆ ಆಧಾರ್ ಕಾರ್ಡ್, ವೋಟರ್ ಐಡಿ ಡ್ರೈವಿಂಗ್ ಲೈಸೆನ್ಸ್‌ಗಳು ಪ್ರಾಥಮಿಕವಾಗಿ ಒಬ್ಬ ವ್ಯಕ್ತಿಯ ಗುರುತು, ವಾಸಸ್ಥಳ ಅಥವಾ ಮತದಾನದ ನೋಂದಣಿಯನ್ನು ಮಾತ್ರ ಸಾಬೀತುಪಡಿಸುತ್ತವೆ. ಇವುಗಳನ್ನು ಸ್ವತಂತ್ರವಾಗಿ ಪೌರತ್ವದ ನಿರ್ಣಾಯಕ ಪುರಾವೆ ಎನ್ನುವುದಾಗಿ ಎಂದಿಗೂ ಪರಿಗಣಿಸಲು ಸಾಧ್ಯವಿಲ್ಲ ಎನ್ನಲಾಗಿದೆ.
ವೋಟರ್ ಐಟಿ ಸೇರಿದಂತೆ ಹಲವು ದಾಖಲೆ ಪೌರತ್ವದ ದಾಖಲೆಯಾಗೋದಿಲ್ಲ ಯಾಕೆ?
ಆಧಾರ್, ವೋಟರ್ ಐಡಿ ಮತ್ತು ಡ್ರೈವಿಂಗ್ ಲೈಸೆನ್ಸ್‌ಗಳನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ಜಾರಿ ಮಾಡಲಾಗಿದೆ. ಉದಾ: ವೋಟರ್ ಐಡಿ ಮತ ಹಾಕಲು, ಆಧಾರ್ ಕಾರ್ಡ್ ವಿಳಾಸ ಹಾಗೂ ಗುರುತಿಗಾಗಿ. ಇನ್ನೂ ಡ್ರೈವಿಂಗ್ ಲೈಸೆನ್ಸ್ ವಾಹನ ಚಾಲನೆಯ ಪಕ್ವತೆ ಅರಿತು ನೀಡಲಾಗಿರುತ್ತದೆ. ಇವುಗಳು ಅದರದ್ದೇ ಆದ ಪ್ರತ್ಯೇಕ ಕಾರಣಗಳಿಂದ ನೀಡಿರುವ ಕಾರಣ ಇವನ್ನು ಪೌರತ್ವದ ಅಂತಿಮ ಪುರಾವೆಯಾಗಿ ಪರಿಗಣಿಸಲು ಸಾಧ್ಯವಿಲ್ಲ, (ಏಜೆನ್ಸೀಸ್).