- ಏರ್ ಅರೇಬಿಯಾ ವಿಮಾನದ ಎಮರ್ಜೆನ್ಸಿ ಡೋರ್ನಿಂದ ಜಿಗಿದ ವ್ಯಕ್ತಿ
- ರನ್ವೇಯಲ್ಲಿದ್ದ ವಿಮಾನದಿಂದ ಹೊರಗೆ ಹಾರಿದ ಪ್ರಯಾಣಿಕ ಪ್ರಾಣಪಾಯದಿಂದ ಪಾರು
ಚೆನ್ನೈ: ಇಂದು (ಮೇ.03) ಬೆಳ್ಳಂಬೆಳಗ್ಗೆ ಶಾರ್ಜಾದಿಂದ ಚೆನ್ನೈಗೆ ಬಂದಿಳಿದ ಏರ್ ಅರೇಬಿಯಾ ವಿಮಾನದಲ್ಲಿ ಭಯಾನಕ ಘಟನೆಯೊಂದು ಸಂಭವಿಸಿದ್ದು, ಕೆಲ ನಿಮಿಷ ಪ್ರಯಾಣಿಕರ ಎದೆ ಝಲ್ ಎಂದಿತು.
ಆಗ ತಾನೇ ಚೆನ್ನೈ ಏರ್ಪೋರ್ಟ್ನ ರನ್ವೇಗೆ ಬಂದಿಳಿದ ಏರ್ ಅರೇಬಿಯಾ ವಿಮಾನದಲ್ಲಿ ವ್ಯಕ್ತಿಯೊಬ್ಬರು ಎರಡು ಬಾರಿ ವಾಂತಿ ಮಾಡಿಕೊಂಡಿದ್ದರು. ತೀರ ಸುಸ್ತಾಗಿದ್ದ ಅವರು, ಇನ್ನೇನು ವಿಮಾನ ಸಂಪೂರ್ಣವಾಗಿ ಲ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಎಮರ್ಜೆನ್ಸಿ ಡೋರ್ನಿಂದ ಹೊರಗೆ ಜಿಗಿದ ಘಟನೆ ಪ್ರಯಾಣಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿತು.
ಏರ್ಪೋರ್ಟ್ ಅಧಿಕಾರಿಗಳು ಹಂಚಿಕೊಂಡ ಮಾಹಿತಿ ಪ್ರಕಾರ, ಈ ಘಟನೆ ವಿಮಾನ ರನ್ವೇಗೆ ಆಗಮಿಸಿ, ಇನ್ನೇನು ನಿಲ್ಲಬೇಕು ಎನ್ನುವ ಸಮಯದಲ್ಲಿ ನಡೆದಿದೆ. ಹೀಗಾಗಿ, ಅದೃಷ್ಟವಶಾತ್ ವಿಮಾನದಿಂದ ಕೆಳಗೆ ಜಿಗಿದ ವ್ಯಕ್ತಿಗೆ ಪ್ರಾಣಹಾನಿ ಸಂಭವಿಸಿಲ್ಲ. ಮತ್ತು ವಿಮಾನಕ್ಕೂ ಯಾವುದೇ ಡ್ಯಾಮೇಜ್ ಕೂಡ ಆಗಿಲ್ಲ ಎಂದು ತಿಳಿಸಲಾಗಿದೆ.
ಪ್ರಾಥಮಿಕ ವರದಿ ಪ್ರಕಾರ, ಅದಾಗಲೇ ವಿಮಾನ ರನ್ವೇ ದಾಟಿ, ಲ್ಯಾಂಡಿಂಗ್ಗಾಗಿ ಬಹಳ ನಿಧಾನವಾಗಿ ಚಲಿಸುತ್ತಿತ್ತು. ಈ ಸಂದರ್ಭದಲ್ಲಿ, ಮೊದಲೇ ವಾಂತಿ ಮಾಡಿ ಸುಸ್ತಾಗಿದ್ದ ಪ್ರಯಾಣಿಕ, ಯಾವ ಕಾರಣಕ್ಕೆ ಎಮರ್ಜೆನ್ಸಿ ಡೋರ್ನಿಂದ ಜಿಗಿದರು ಎಂಬ ಕಾರಣ ಸ್ಪಷ್ಟವಾಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).