ಮೆಡಿಕಲ್​ ಸ್ಟೋರ್​ನಲ್ಲಿ ಡ್ರಗ್ಸ್​ ಜಾಲ ಬಯಲಿಗೆಳೆದ ಪರ್ವಿಂದರ್ ಸಿಂಗ್ ಗುಂಡೇಟಿಗೆ ಬಲಿ! ಫೇಸ್​ಬುಕ್​ ಲೈವ್​ನಲ್ಲಿ ಘಟನೆಯ ದೃಶ್ಯ ಸೆರೆ | Parwinder Singh Jhota 
ದೇಶ

ಮೆಡಿಕಲ್​ ಸ್ಟೋರ್​ನಲ್ಲಿ ಡ್ರಗ್ಸ್​ ಜಾಲ ಬಯಲಿಗೆಳೆದ ಪರ್ವಿಂದರ್ ಸಿಂಗ್ ಗುಂಡೇಟಿಗೆ ಬಲಿ! ಫೇಸ್​ಬುಕ್​ ಲೈವ್​ನಲ್ಲಿ ಘಟನೆಯ ದೃಶ್ಯ ಸೆರೆ | Parwinder Singh Jhota

ಇದನ್ನು ಹೇಗಾದರೂ ಮಾಡಿ ಬಟಾಬಯಲು ಮಾಡಬೇಕು ಮತ್ತು ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸಬೇಕು ಎಂಬ ಮಹತ್ವದ ಉದ್ದೇಶದಲ್ಲಿ ಕೈಗೊಂಡ ಸ್ಟಿಂಗ್ ಆಪರೇಷನ್​ ಇದೀಗ ಅವರ ಜೀವವನ್ನೇ ಬಲಿ ಪಡೆದಿದೆ.

ಬಟಿಂಡಾ: ಮಾದಕ ವಸ್ತುಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದ ಪಂಜಾಬ್​ನ ಪರ್ವಿಂದರ್ ಸಿಂಗ್ ಝೋಟಾ (Parwinder Singh Jhota), ಮಂಗಳವಾರ (ಅ.13) ಮೆಡಿಕಲ್​ ಸ್ಟೋರ್​ನಲ್ಲಿ ನಡೆಸುತ್ತಿದ್ದ ಸ್ಟಿಂಗ್ ಆಪರೇಷನ್​ ವೇಳೆ ಕಿಡಿಗೇಡಿಗಳ ಗುಂಡಿಗೆ ಬಲಿಯಾಗಿದ್ದಾರೆ.

ಮಾನ್ಸಾ ನಗರದಲ್ಲಿರುವ ಮೆಡಿಕಲ್​ ಸ್ಟೋರ್​ನಲ್ಲಿ ಡ್ರಗ್ಸ್​ ಮಾರಾಟವಾಗುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಪರ್ವಿಂದರ್​, ಇದನ್ನು ಹೇಗಾದರೂ ಮಾಡಿ ಬಟಾಬಯಲು ಮಾಡಬೇಕು ಮತ್ತು ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸಬೇಕು ಎಂಬ ಮಹತ್ವದ ಉದ್ದೇಶದಲ್ಲಿ ಕೈಗೊಂಡ ಸ್ಟಿಂಗ್ ಆಪರೇಷನ್​ ಇದೀಗ ಅವರ ಜೀವವನ್ನೇ ಬಲಿ ಪಡೆದಿದೆ.

ಸಿಂಥೆಟಿಕ್ ಡ್ರಗ್ಸ್

ಮಂಗಳವಾರ ಬೆಳಗ್ಗೆ ಮೆಡಿಕಲ್ ಸ್ಟೋರ್ ಒಂದರಿಂದ ಸಿಂಥೆಟಿಕ್ ಡ್ರಗ್ಸ್ ಖರೀದಿಸಿದ್ದ ವ್ಯಕ್ತಿಯೊಬ್ಬರನ್ನು ಝೋಟಾ ಭೇಟಿಯಾಗಿದ್ದರು. ಕೂಡಲೇ ಆ ವ್ಯಕ್ತಿಯನ್ನು ಕರೆದುಕೊಂಡು ನೇರವಾಗಿ ಆ ಮೆಡಿಕಲ್ ಸ್ಟೋರ್‌ಗೆ ಹೋದ ಝೋಟಾ, ನಿಷೇಧಿತ ವಸ್ತುಗಳನ್ನು ಯಾಕೆ ಮಾರಾಟ ಮಾಡುತ್ತಿದ್ದೀರಿ ಎಂದು ಅಂಗಡಿಯ ಮಾಲೀಕನನ್ನು ನೇರವಾಗಿ (ಅಂದರೆ ಆನ್​ ದಿ ಕ್ಯಾಮರಾ) ಪ್ರಶ್ನಿಸಿದರು.

ಪ್ರಶ್ನಿಸಿದ್ದಕ್ಕೆ ಎದೆಗೆ ಗುಂಡು

ಈ ವೇಳೆ, ಅಂಗಡಿ ಮಾಲೀಕ ಮತ್ತು ಸಿಂಗ್​ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಮಾತಿಗೆ ಮಾತು ಬೆಳೆದಾಗ, ಎಲ್ಲಿ ತಮ್ಮ ಬಂಡವಾಳ ಬಯಲಾಗಿ ಬಿಡುತ್ತೋ ಎಂಬ ಭಯದಿಂದ ಕೆಮಿಸ್ಟ್​ ಅಶ್ವನಿ ಕುಮಾರ್ ಎಂಬಾತ ಬಂದೂಕಿನಿಂದ ಪರ್ವಿಂದರ್​ ಅವರಿಗೆ ಗುಂಡು ಹಾರಿಸಿದ್ದಾನೆ. ಗುಂಡೇಟು ಬಿದ್ದ ಕೂಡಲೇ ಸ್ಥಳದಿಂದ ಪ್ರಾಣ ಉಳಿಸಿಕೊಳ್ಳಲು ಓಡಿದ್ದೇ ಆದರೂ ಕುಸಿದು ಬಿದ್ದು ಸಾವನ್ನಪ್ಪಿದ್ದಾಗಿ ವರದಿಗಳು ಉಲ್ಲೇಖಿಸಿವೆ.

ಆ್ಯಂಟಿ-ಡ್ರಗ್ ಬ್ರಿಗೇಡ್‌ನ ಸಕ್ರಿಯ ಸದಸ್ಯರಾಗಿದ್ದ ಝೋಟಾ ಅವರ ಎದೆಗೆ ಗುಂಡು ತಗುಲಿದ ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯವು ಸಿಂಗ್​ ಅವರ ಬಳಿಯಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನು, ಕೃತ್ಯ ಎಸಗಿದ ಬಳಿಕ ಆರೋಪಿ ಅಶ್ವನಿ ಸ್ಥಳದಿಂದ ಪರಾರಿಯಾಗಿದ್ದಾನೆ. ತಲೆಮರಿಸಿಕೊಂಡಿರುವ ವ್ಯಕ್ತಿಯ ಪತ್ತೆಗೆ ಪೊಲೀಸ್​ ತಂಡಗಳನ್ನು ರಚಿಸಲಾಗಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಪರ್ವಿಂದರ್ ಸಿಂಗ್ ಹಲವು ವರ್ಷಗಳಿಂದ ಮಾದಕ ವಸ್ತುಗಳ ಹಾವಳಿಯ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಲೇ ಬಂದಿದ್ದರು. ಅಕ್ರಮ ಡ್ರಗ್ಸ್​ ಮಾರಾಟಗಳಲ್ಲಿ ತೊಡಗಿದ್ದವರ ಹೆಡೆಮುರಿ ಕಟ್ಟಲು ತಮ್ಮ ಸ್ಟಿಂಗ್ ಆಪರೇಷನ್​ ಮೂಲಕ ಪೊಲೀಸರಿಗೆ ದೊಡ್ಡ ಮೊಟ್ಟದಲ್ಲಿ ಸಹಾಯ ಮಾಡುತ್ತಿದ್ದರು. ಜತೆಗೆ ಈ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಕೂಡ ಮೂಡಿಸುತ್ತಿದ್ದರು. ಆದರೆ, ಕೆಲವು ಮೆಡಿಕಲ್ ಸ್ಟೋರ್‌ಗಳು ನಿಷೇಧಿತ ಮಾದಕ ಮಾತ್ರೆಗಳು ಮತ್ತು ಸಿಂಥೆಟಿಕ್ ಡ್ರಗ್​ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿವೆ ಎಂದು ಆರೋಪಿಸಿ ಅವುಗಳ ವಿರುದ್ಧ ಧ್ವನಿ ಎತ್ತಲು ಮುಂದಾದಾಗ ಈ ದುರ್ಘಟನೆ ಸಂಭವಿಸಿದೆ,(ಏಜೆನ್ಸೀಸ್).