ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ನಟಿ ಪಾರ್ವತಿ ತಿರುವೋತ್ತು  
ದೇಶ

ಸಂಸ್ಕೃತಿ ಬಗ್ಗೆ ಮಾತನಾಡುವವರು ಈ ವಿಚಾರದಲ್ಲೇಕೆ ಮೌನ? ವಿವಾದದ ಬಿರುಗಾಳಿ ಎಬ್ಬಿಸಿದ ನಟಿ ಪಾರ್ವತಿ ಮಾತುಗಳು..! Parvathy Thiruvoth

ಬಿಲ್ಕಿಸ್ ಬಾನೋ ಪ್ರಕರಣದ ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಜಾಮೀನು ನೀಡಿರುವ ವಿಚಾರವನ್ನೂ ಪಾರ್ವತಿ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಹುಲ್ ಗಾಂಧಿ ಆಡಿದ ಮಾತುಗಳ ಬೆನ್ನಲ್ಲೇ, ಅವರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಸೈಬರ್ ದಾಳಿ ಮತ್ತು ಟ್ರೋಲಿಂಗ್ ನಡೆಯುತ್ತಿದೆ. ಇದರ ನಡುವೆ ಮಲಯಾಳಂನ ಖ್ಯಾತ ನಟಿ ಪಾರ್ವತಿ ತಿರುವೋತ್ತು (Parvathy Thiruvoth) ಅವರು ರಾಹುಲ್​ ಹಾಗೂ ಸೋನಿಯಾ ಗಾಂಧಿ ಅವರ ಬೆಂಬಲಕ್ಕೆ ನಿಂತಿದ್ದು, ಟ್ರೋಲಿಗರಿಗೆ ಅತ್ಯಂತ ಕಟುವಾದ ಹಾಗೂ ಖಡಕ್ ಭಾಷೆಯಲ್ಲಿ ತಿರುಗೇಟು ನೀಡಿದ್ದಾರೆ. ಆದರೆ, ಬೆಂಬಲಿಸುವ ಭರದಲ್ಲಿ ಪಾರ್ವತಿ ಆಡಿರುವ ಮಾತುಗಳು ವಿವಾದಕ್ಕೂ ಗುರಿಯಾಗಿದೆ.

ಸೋನಿಯಾ ಗಾಂಧಿ ಅವರು ತಮ್ಮದೇ ಪತಿಯ ಮಡಿಲಲ್ಲಿ ಕುಳಿತಿರುವುದು ನಮ್ಮ ಸಮಾಜಕ್ಕೆ ದೊಡ್ಡ ಸಾಂಸ್ಕೃತಿಕ ಆಘಾತವಾಗಿದೆ; ಆದರೆ ಬಿಲ್ಕಿಸ್ ಬಾನೋ ಅವರ ಮೇಲೆ ಅತ್ಯಾಚಾರ ಎಸಗಿದವರು ಯಾವುದೇ ಪಶ್ಚಾತ್ತಾಪವಿಲ್ಲದೆ ರಾಜಾರೋಷವಾಗಿ ಹೊರಗೆ ತಿರುಗಾಡುತ್ತಿರುವುದು ನಿಮ್ಮ ಸಂಸ್ಕೃತಿಯ ಭಾಗವೇ? ಕೇವಲ ಮನುಷ್ಯನ ನೆನಪಿನ ಅಭ್ಯಾಸಗಳು! ಐದು ಸಾವಿರ ವರ್ಷಗಳ ಪರಂಪರೆ ಹೊಂದಿರುವ ಸಂಸ್ಕೃತಿ, ಅಲ್ಲವೇ ಸರ್! ಎಂದು ಪಾರ್ವತಿ ವ್ಯಂಗ್ಯವಾಡಿದ್ದಾರೆ.

ಬಿಲ್ಕಿಸ್ ಬಾನೋ ಪ್ರಕರಣದ ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಜಾಮೀನು ನೀಡಿರುವ ವಿಚಾರವನ್ನೂ ಪಾರ್ವತಿ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಒಂದೆಡೆ ಘೋರ ಅಪರಾಧ ಎಸಗಿದವರು ಜಾಮೀನಿನ ಮೇಲೆ ಹೊರಬಂದು ಸ್ವತಂತ್ರವಾಗಿ ಓಡಾಡುತ್ತಿದ್ದರೆ, ಇನ್ನೊಂದೆಡೆ ಗಂಡ-ಹೆಂಡತಿಯ ನಡುವಿನ ಪ್ರೀತಿ ಮತ್ತು ಆತ್ಮೀಯತೆಯನ್ನು ಪ್ರಶ್ನಿಸುತ್ತಾ ಸೋನಿಯಾ ಗಾಂಧಿ ಅವರಿಗೆ ಸಂಸ್ಕೃತಿಯ ಪಾಠ ಹೇಳಲು ಹೊರಟಿರುವವರ ದ್ವಂದ್ವ ನಿಲುವು ಹಾಗೂ ಮೌನದ ಬಗ್ಗೆ ಪಾರ್ವತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಪಾರ್ವತಿ ಆಡಿರುವ ಮಾತುಗಳಿಗೆ ಕೆಲವರು ಆಕ್ರೋಶ ಹೊರಹಾಕಿದರೆ, ಇನ್ನು ಕೆಲವರು ಪಾರು ಪರ ಬ್ಯಾಟ್​ ಬೀಸಿದ್ದಾರೆ.

ಇಷ್ಟೆಲ್ಲಾ ವಿವಾದಕ್ಕೆ ಕಾರಣವಾಗಿದ್ದು ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಡುಗಡೆ ವೇಳೆ ರಾಹುಲ್ ಗಾಂಧಿ ಮಾಡಿದ ಭಾವುಕ ಭಾಷಣ. ತಮ್ಮ ತಂದೆ ರಾಜೀವ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ನಡುವಿನ ಅನ್ಯೋನ್ಯತೆಯನ್ನು ಸ್ಮರಿಸಿದ್ದ ರಾಹುಲ್ ಗಾಂಧಿ, "ನಾವು ರಾತ್ರಿ ಊಟ ಮಾಡುವಾಗ ಅಮ್ಮ (ಸೋನಿಯಾ) ಅಪ್ಪನ (ರಾಜೀವ್ ಗಾಂಧಿ) ಮಡಿಲಲ್ಲಿ ಕೂರುತ್ತಿದ್ದರು. ನಾನು ಚಿಕ್ಕವನಿದ್ದಾಗ ಪ್ರತಿಯೊಬ್ಬರ ಮನೆಯಲ್ಲೂ ಹೀಗೆಯೇ ಇರುತ್ತದೆ ಎಂದು ಭಾವಿಸಿದ್ದೆ" ಎಂದು ತಮ್ಮ ಬಾಲ್ಯದ ಸುಂದರ ನೆನಪುಗಳನ್ನು ಹಂಚಿಕೊಂಡಿದ್ದರು. ಈ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಕೆಲವರು ಸೋನಿಯಾ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಟ್ರೋಲ್ ಮಾಡಲು ಆರಂಭಿಸಿದ್ದರು.

ಇನ್ನು ತಮ್ಮ ಆತ್ಮಚರಿತ್ರೆಯ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ್ದ ಸೋನಿಯಾ ಗಾಂಧಿ ಕೂಡ, ಈ ಪುಸ್ತಕ ಓದಿದ ನಂತರ ಕೆಲವರ ಅಭಿಪ್ರಾಯಗಳು ಬದಲಾಗಬಹುದು, ಆದರೆ ಇನ್ನು ಕೆಲವರಿಗೆ ತನ್ನ ಮೇಲಿನ ದ್ವೇಷ ಮತ್ತಷ್ಟು ಹೆಚ್ಚಾಗಬಹುದು ಎಂದು ಮೊದಲೇ ಊಹಿಸಿದ್ದರು. "ನನ್ನ ಬಗ್ಗೆ ಈಗಾಗಲೇ ಸಾಕಷ್ಟು ಬರೆಯಲಾಗಿದೆ. ಆದರೆ ಅವುಗಳಲ್ಲಿ ಹೆಚ್ಚಿನವು ಸಂಪೂರ್ಣ ಸತ್ಯವಲ್ಲ, ಕೆಲವು ಕಪೋಲಕಲ್ಪಿತ ಅಥವಾ ಉತ್ಪ್ರೇಕ್ಷಿತವಾಗಿವೆ. ಹಾಗಾಗಿ ನನ್ನ ನಿಜವಾದ ಕಥೆ ಏನು ಮತ್ತು ವಾಸ್ತವ ಸಂಗತಿಗಳೇನು ಎಂಬುದನ್ನು ಮುಕ್ತವಾಗಿ ಬರೆಯಲು ನನಗೆ ಈಗ ಅವಕಾಶ ಸಿಕ್ಕಿದೆ" ಎಂದು ಅವರು ಹೇಳಿದ್ದರು.

ಸಾರ್ವಜನಿಕ ಜೀವನದಲ್ಲಿರುವಾಗ ಅಥವಾ ಇಂತಹ ಆತ್ಮಚರಿತ್ರೆಗಳನ್ನು ಬರೆದಾಗ ಪರ-ವಿರೋಧದ ಚರ್ಚೆಗಳು ನಡೆಯುವುದು ತೀರಾ ಸಹಜ ಎಂದಿದ್ದ ಸೋನಿಯಾ ಗಾಂಧಿ, "ಇಲ್ಲಿನವರು ಹೇಳುವಂತೆ, ಈ ಪುಸ್ತಕದ ನಂತರ ದೊಡ್ಡ ಕೋಲಾಹಲವೇ ಸೃಷ್ಟಿಯಾಗುವುದು ಖಚಿತ" ಎಂದು ಮುಗುಳ್ನಗುತ್ತಾ ಹೇಳಿದ್ದರು. ಅವರ ಮಾತಿನಂತೆಯೇ ಈಗ ಪುಸ್ತಕದ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ನಟಿ ಪಾರ್ವತಿ ತಿರುವೋತ್ತು ಅವರ ದಿಟ್ಟ ಪ್ರತಿಕ್ರಿಯೆಯು ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ, (ಏಜೆನ್ಸೀಸ್​).