ಹೈಕೋರ್ಟ್ ನ್ಯಾಯಾಧೀಶೆ ಸ್ವರ್ಣಕಾಂತ ಶರ್ಮಾ ಮತ್ತು ಮಾಜಿ ಸಿಎಂ ಕೇಜ್ರಿವಾಲ್ 
ದೇಶ

RSS-ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ;ನಿಮ್ಮಿಂದ ನಮಗೆ ನ್ಯಾಯ ಸಿಗದು, ದಯವಿಟ್ಟು ಹಿಂದೆ ಸರಿಯಿರಿ: ಜಡ್ಜ್‌ಗೆ ಕೇಜ್ರಿವಾಲ್ ಮನವಿ

ನವದೆಹಲಿ: ಹೈಕೋರ್ಟ್​ನಲ್ಲಿ ಸೋಮವಾರ(ಏ. 13) ಸ್ವತಃ ವಾದ ಮಂಡಿಸಿದ್ದ ಆಪ್ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಹೈಕೋರ್ಟ್ ನ್ಯಾಯಾಧೀಶೆ ಸ್ವರ್ಣಕಾಂತ ಶರ್ಮಾ ಅವರಿಗೆ ನೀವು RSS-ಬಿಜೆಪಿಯ ಅಂಗ ಸಂಸ್ಥೆ ಆಯೋಜಿಸಿದ್ದ 4 ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೀರಿ, ನಿಮ್ಮಿಂದ ನಿಷ್ಪಕ್ಷಪಾತ ನ್ಯಾಯವನ್ನು ನಿರೀಕ್ಷಿಸಬಹುದೇ? ದಯವಿಟ್ಟು ಪ್ರಕರಣದಿಂದ ಹಿಂದೆ ಸರಿಯಿರಿ ಎಂದು ಮನವಿ ಮಾಡಿದ ಪ್ರಸಂಗ ನಡೆದಿದೆ.
ದೆಹಲಿಯ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ. 27ರಂದು ವಿಚಾರಣಾ ನ್ಯಾಯಾಲಯ ಮಾಜಿ ಸಿಎಂ ಕೇಜ್ರಿವಾಲ್, ಡಿಸಿಎಂ ಸಿಸೋಡಿಯಾ ಸೇರಿ 21 ಮಂದಿಯನ್ನು ಖುಲಾಸೆಗೊಳಿಸಿ, ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗಿದೆ ಎಂದು ಸಿಬಿಐ ಮತ್ತು ಇಡಿ ಅಧಿಕಾರಿಗಳ ವಿರುದ್ಧ ಕಿಡಿಕಾರಿತ್ತು. 
ಏತನ್ಮಧ್ಯೆ, ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿಬಿಐ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಅದನ್ನು ಮಾ. 09ರಂದು ವಿಚಾರಣೆ ನಡೆಸಿದ್ದ ನ್ಯಾ. ಸ್ವರ್ಣಕಾಂತ ಶರ್ಮಾ, ತೀರ್ಪನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿ ಎಲ್ಲಾ 21 ಆರೋಪಿಗಳಿಗೆ ನೋಟಿಸ್ ನೀಡಿದ್ದರು. ಬಳಿಕ ಪ್ರಕರಣವನ್ನು ನ್ಯಾ. ಸ್ವರ್ಣಕಾಂತ ಶರ್ಮಾಅವರ ಪೀಠದಿಂದ ವರ್ಗಾಯಿಸುವಂತೆ ಕೇಜ್ರಿವಾಲ್ ಹೈಕೋರ್ಟ್ ಮುಖ್ಯನ್ಯಾಯಾಮೂರ್ತಿಗೆ ಪತ್ರ ಬರೆದಿದ್ದರು. ಆದರೆ ಮುಖ್ಯನ್ಯಾಯಮೂರ್ತಿಗಳು ಅದನ್ನು ತಿರಸ್ಕರಿಸಿದ್ದರು.
ಈ ಹಿನ್ನೆಲೆ ಸೋಮವಾರ ಪ್ರಕರಣದ ವಿಚಾರಣೆಯ ಸಮಯದಲ್ಲಿ ಸ್ವತಃ ಕೋರ್ಟ್​ಗೆ ಹಾಜರಾಗಿ ವಾದ ಮಂಡಿಸಿದ ಅರವಿಂದ್ ಕೇಜ್ರಿವಾಲ್, ಪೀಠದ ನ್ಯಾ. ಸ್ವರ್ಣಕಾಂತ ಶರ್ಮಾ ಅವರನ್ನೇ ಪ್ರಶ್ನಿಸಿದರು. ದೆಹಲಿ ಅಬಕಾರಿ ನೀತಿ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ನಾನು ಇಲ್ಲಿ ಆರೋಪಿಯಾಗಿ ನಿಂತಿಲ್ಲ. ನನ್ನನ್ನು ಈಗಾಗಲೇ ಖುಲಾಸೆಗೊಳಿಸಲಾಗಿದೆ. ವಿಚಾರಣಾ ನ್ಯಾಯಾಲಯವು ಸಿಬಿಐ ತನಿಖೆಯನ್ನು ತಿರಸ್ಕರಿಸಿದೆ. 
ಮಾ. 09ರಂದು ತಮ್ಮ ಪೀಠ, 5,000 ಪುಟಗಳಿಗೂ ಹೆಚ್ಚು ಉದ್ದವಾದ ಕೆಳ ನ್ಯಾಯಾಲಯದ ತೀರ್ಪನ್ನು ಕೇವಲ ಐದು ನಿಮಿಷಗಳಲ್ಲಿ ವಜಾಗೊಳಿಸಿದೆ. ಅದು ನಮ್ಮನ್ನು ಘಾಸಿಗೊಳಿಸಿದೆ.  ಬಳಿಕ ನಾನು ಪ್ರಕರಣವನ್ನು ಈ ಪೀಠದಿಂದ ವರ್ಗಾಯಿಸುವಂತೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದೆ, ಸಂಬಂಧಪಟ್ಟ ನ್ಯಾಯಾಧೀಶರು ಮಾತ್ರ ಈ ವಿಷಯದಿಂದ ಹಿಂದೆ ಸರಿಯಲು ನಿರ್ಧರಿಸಬಹುದು ಎಂದು ಹೇಳುವ ಲಿಖಿತ ಪ್ರತಿಕ್ರಿಯೆ ನನಗೆ ಬಂದಿದೆ. 
ಆರ್‌ಎಸ್‌ಎಸ್‌ನ ಕಾನೂನು ವಿಭಾಗ ಎಂದೂ ಕರೆಯಲ್ಪಡುವ ಅಖಿಲ ಭಾರತೀಯ ಅಧಿವಕ್ತ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮಗಳಿಗೆ ನೀವು 4 ಬಾರಿ ಹಾಜರಾಗಿದ್ದೀರಿ. ನಾವು ಅವರ ಸಿದ್ಧಾಂತವನ್ನು ಬಹಿರಂಗವಾಗಿ ವಿರೋಧಿಸುತ್ತಿದ್ದೇವೆ. ಇದರಿಂದ ತಮ್ಮ ಪೀಠದಲ್ಲಿ ನಡೆಯುವ ವಿಚಾರಣೆ ನಿಷ್ಪಕ್ಷಪಾತ ಮತ್ತು ತಟಸ್ಥವಾಗಿರುವುದಿಲ್ಲ ಎಂಬ ಗಂಭೀರ, ಪ್ರಾಮಾಣಿವಾದ ಅನುಮಾನಗಳು ನನಗಿವೆ. ಅದಕ್ಕಾಗಿಯೇ ತಾವು ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.
ಮಧ್ಯಾಹ್ನ 2.30ಕ್ಕೆ ಪ್ರಾರಂಭವಾಗಿದ್ದ ವಿಚಾರಣೆ ಸಂಜೆ 7 ಗಂಟೆಯವರೆಗೆ ನಡೆಯಿತು. ಎಲ್ಲಾ ಪಕ್ಷಗಳ ವಾದ ಆಲಿಸಿದ ನಂತರ ಪೀಠವು ವಿಚಾರಣೆಯನ್ನು ರದ್ದುಗೊಳಿಸುವ ವಿಷಯದ ಕುರಿತು ತನ್ನ ತೀರ್ಪನ್ನು ಕಾಯ್ದಿರಿಸಿದೆ. ಈ ವೇಳೆ ನ್ಯಾಯಾಧೀಶೆ ಸ್ವರ್ಣಕಾಂತ ಶರ್ಮಾ ಅವರು, ನೀವು ತುಂಬಾ ಚೆನ್ನಾಗಿ ವಾದಿಸಿದ್ದೀರಿ. ನೀವು ವಕೀಲರೂ ಆಗಬಹುದು ಎಂದು ಕೇಜ್ರಿವಾಲ್ ಅವರ ವಾದಗಳನ್ನು ಶ್ಲಾಘಿಸಿದ್ದಾರೆ (ಏಜೆನ್ಸೀಸ್).