ನವದೆಹಲಿ: ಎಸ್ಐಆರ್ ವಿವಾದಕ್ಕೆ ಸಂಬಂಧಿಸಿದಂತೆ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಇಂದು(ಅ. 10) ದೆಹಲಿಯಲ್ಲಿ ಸಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಮುನ್ನವೇ ಭಾಗಶಃ ದೆಹಲಿ ಬಂದ್ ವಾತಾವರಣ ಏರ್ಪಟ್ಟಿದ್ದು, ನಗರದ ಹೃದಯ ಭಾಗದಲ್ಲಿ ಜಂತರ್ ಮಂತರ್ ಸುತ್ತಮುತ್ತ ಇಂಟರ್ನೆಟ್, ರಸ್ತೆಗಳು, ಮೆಟ್ರೋ ಸಂಚಾರವನ್ನು ಬಂದ್ ಮಾಡಲಾಗಿದೆ.
ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ರೂ ಸಿಜೆಪಿ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಆರಂಭವಾಗಲಿದೆ ಎಂದು ಹೇಳಿದೆ. ಪ್ರತಿಭಟನೆಯನ್ನು ತಡೆಯಲು ದೆಹಲಿ ಪೊಲೀಸರು ಮುಂದಾಗಿದ್ದು, ದೆಹಲಿಯ ಗಡಿಗಳು, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಇತರ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. 45 ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನದ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ದೆಹಲಿ ಪೊಲೀಸ್ ಮತ್ತು ಅರೆಸೇನಾ ಪಡೆಗಳ ಸಿಬ್ಬಂದಿ ಸೇರಿದಂತೆ ಒಟ್ಟು 35,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜೂನ್-ಜುಲೈನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯನ್ನು ಕಡಿಮೆ ಅಂದಾಜು ಮಾಡಿ ನಡೆದ ಹಿಂಸಾಚಾರವನ್ನು ಪರಿಗಣಿಸಿ ಈ ಬಾರಿ ಹಾಗೆ ಆಗದಂತೆ ನೋಡಿಕೊಳ್ಳಲು ಪೊಲೀಸರು ಹೆಚ್ಚುವರಿ ಸಿಬ್ಬಂದಿಗಳನ್ನು ಕೋರಿದ್ದಾರೆ. ಜನಪಥ್-ಕರ್ತವ್ಯ ಪಾತ್ ಕ್ರಾಸಿಂಗ್‌ನಿಂದ 4 ಕಿ.ಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಶುಕ್ರವಾರ ರಾತ್ರಿ 10 ಗಂಟೆಯಿಂದ 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ.
ಅಲ್ಲದೇ ಸೂಕ್ಷ್ಮ ಸ್ಥಳಗಳಲ್ಲಿ ಅನಿಯಂತ್ರಿತ ಜನಸಂದಣಿ ಸೇರದಂತೆ ದೆಹಲಿಯ 57 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಇದಲ್ಲದೆ, ಬೇರೆ ರಾಜ್ಯಗಳಿಂದ ದೆಹಲಿಗೆ ತೆರಳುವ ಎಲ್ಲಾ ರೈಲುಗಳನ್ನು ಬಂದ್ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳನ್ನ ಮಾರ್ಗ ಬದಲಿಸಲಾಗಿದೆ. ಹೀಗೆ ಅನುಮತಿಯಿಲ್ಲದ ಸಿಜೆಪಿ ಪ್ರತಿಭಟನೆ ವಿಫಲಗೊಳಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
ಇನ್ನೂ ಶುಕ್ರವಾರ(ಅ.09) ಪ್ರತಿಭಟನೆಗೆ ನಿರಾಕರಿಸಿ ಮಾತನಾಡಿದ್ದ ದೆಹಲಿ ಜಂಟಿ ಪೊಲೀಸ್ ಆಯುಕ್ತೆ ನೂಪುರ್ ಪ್ರಸಾದ್, ಶನಿವಾರ ಪ್ರತಿಭಟನೆ ನಡೆಸಲು ಸಿಜೆಪಿ ಅತ್ಯಂತ ಕಡಿಮೆ ಅವಧಿಯಲ್ಲಿ ಮನವಿ ಸಲ್ಲಿಸಿದ್ದರಿಂದ ಅನುಮತಿ ನೀಡಲಾಗಿಲ್ಲ. ನಿಗದಿತ ಮಾರ್ಗಸೂಚಿಗಳ ಪ್ರಕಾರ, ಅಂತಹ ಅರ್ಜಿಗಳನ್ನು ಪ್ರತಿಭಟನೆಗೆ ಕನಿಷ್ಠ 10 ದಿನಗಳ ಮೊದಲು ಸಲ್ಲಿಸಬೇಕು ಎಂದಿದ್ದರು. ಮತ್ತು ಅರಾಜಕತೆ ಸೃಷ್ಟಿಸಲು ಅಥವಾ ಪ್ರತಿಭಟನಾ ಸ್ಥಳದ ಕಡೆಗೆ ತೆರಳಲು ಪ್ರಯತ್ನಿಸುವವರನ್ನು ತಕ್ಷಣವೇ ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು (ಏಜೆನ್ಸೀಸ್).