ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನಿ ಮೋದಿ 
ದೇಶ

ಸಂಸತ್ ಅಧಿವೇಶನ; ಎಲ್ಲರಿಗಿಂತ ದೊಡ್ಡದಾಗಿ ಡ್ರಾಮಾಬಾಜಿ ಮಾಡೋರು ನಾಟಕದ ಬಗ್ಗೆ ಮಾತಾಡ್ತಾರೆ; ಪ್ರಧಾನಿ ವಿರುದ್ಧ ಖರ್ಗೆ ವಾಗ್ದಾಳಿ | Kharge

ನವದೆಹಲಿ: ಅಧಿವೇಶನಕ್ಕೂ ಮುನ್ನ ದೇಶದ ಸಮಸ್ಯೆ ಬಗ್ಗೆ ಮಾತನಾಡಿ ನಾಟಕ ಮಾಡಬೇಡಿ ಎಂಬ ಪ್ರಧಾನಿ ಹೇಳಿಯನ್ನು ಬೂಟಾಟಿಕೆ ಎಂದು ಕರೆದಿರುವ ಕಾಂಗ್ರೆಸ್, ಎಲ್ಲರಿಗಿಂತ ದೊಡ್ಡದಾಗಿ ಡ್ರಾಮಾಬಾಜಿ ಮಾಡೋರು ನಾಟಕದ ಬಗ್ಗೆ ಮಾತಾಡ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ(Mallikarjun Kharge) ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸರ್ಕಾರವು ಕಳೆದ 11 ವರ್ಷಗಳಿಂದ ಸಂಸತ್ತಿನ ಸಭ್ಯತೆ ಮತ್ತು ವ್ಯವಸ್ಥೆಯನ್ನು ತುಳಿದಿದೆ. ರಾಷ್ಟ್ರೀಯ ಸಮಸ್ಯೆಗಳನ್ನು ಪರಿಹರಿಸುವ ಬದಲು ಪ್ರಧಾನಿ ಮೋದಿ ಡ್ರಾಮೆಬಾಜಿ ಡೆಲಿವರಿ ಮಾಡ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಧಿಕಾರದಲ್ಲಿರುವವರು ಡ್ರಾಮೆಬಾಜಿ ಆಟ ಆಡುತ್ತಿದ್ದಾರೆ. ಬಿಜೆಪಿ ಗೊಂದಲ ತಂತ್ರಗಳನ್ನು ಕೊನೆಗೊಳಿಸಿ ಜನರ ಕಾಳಜಿಗಳ ಕುರಿತು ಅರ್ಥಪೂರ್ಣ ಚರ್ಚೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಇದೇ ವೇಳೆ ಖರ್ಗೆ ಒತ್ತಾಯಿಸಿದ್ದಾರೆ ಒತ್ತಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?

ಸಂಸತ್ ಅಧಿವೇಶನಕ್ಕೂ ಮುನ್ನ ಮಾತನಾಡಿದ್ದ ಪ್ರಧಾನಿ ಮೋದಿ, ಬಿಹಾರ ಚುನಾವಣಾ ಫಲಿತಾಂಶದ ನಿರಾಶೆಯನ್ನು ನಿವಾರಿಸಿಕೊಂಡು ಸದನದಲ್ಲಿ ಬಲವಾದ, ನಿಜವಾದ ಸಮಸ್ಯೆಗಳನ್ನು ಎತ್ತುವಂತೆ ವಿರೋಧ ಪಕ್ಷಗಳಿಗೆ ಕರೆ ನೀಡಿದ್ದರು. ಸೋಲಿನ ಭೀತಿ ಚರ್ಚೆಗೆ ವೇದಿಕೆಯಾಗಬಾರದು. ಚುನಾವಣೆಗಳು ಮುಗಿದು ಸಮಯ ಕಳೆದರೂ ಕೆಲವು ಪಕ್ಷಗಳು ತಮ್ಮ ನಷ್ಟವನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು.
ಹೊಸದಾಗಿ ಆಯ್ಕೆಯಾದ ಸಂಸದರು ತಮ್ಮ ಕ್ಷೇತ್ರಗಳ ಬಗ್ಗೆ ಮಾತನಾಡಲು ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳನ್ನು ಎತ್ತಲು ಅವಕಾಶಗಳು ಸಿಗದ ಕಾರಣ ನಿರಾಶೆಗೊಳ್ಳುತ್ತಿದ್ದಾರೆ. ಪಕ್ಷಗಳನ್ನು ಮೀರಿ ಮೊದಲ ಬಾರಿಗೆ ಸಂಸದರಾದವರಿಗೆ ಸದನದಲ್ಲಿ ಸ್ಥಳಾವಕಾಶ ನೀಡಬೇಕು. ನಾಟಕ ಮಾಡಲು ಹಲವು ಸ್ಥಳಗಳಿವೆ, ಅದಕ್ಕೆ ಸ್ಥಳವಿದೆ, ಆದರೆ ಇಲ್ಲಿ ಅಲ್ಲ ಎಂದು ಪ್ರತಿಪಕ್ಷಗಳಿಗೆ ಕುಟುಕಿದ್ದರು (ಏಜೆನ್ಸೀಸ್).