ಸಂಸತ್ ಅಧಿವೇಶನ 
ದೇಶ

ಸಂಸತ್ ಅಧಿವೇಶನ; ಚುನಾವಣೆ ಆಯೋಗದ SIR ಕುರಿತು ಚರ್ಚೆಗೆ ಒಪ್ಪಿದ ಕೇಂದ್ರ; ಇಂದು ಸಂಜೆ ಸಮಯ ನಿಗದಿ ಸಾಧ್ಯತೆ

ನವದೆಹಲಿ: ಭಾರತೀಯ ಚುನಾವಣೆ ಆಯೋಗ ನಡೆಸುತ್ತಿರುವ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಸಂಸತ್​ನಲ್ಲಿ ಚರ್ಚಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಇಂದು(ಡಿ. 02) ಸಂಜೆ ಸದನದ ವ್ಯವಹಾರ ಸಲಹಾ ಮಂಡಳಿ ಚರ್ಚೆಯ ಸಮಯವನ್ನು ನಿಗದಿ ಮಾಡುತ್ತದೆ ಎಂದು ಎನ್​ಡಿಟಿವಿ ವರದಿ ಮಾಡಿದೆ.
ಮುಂದಿನ ವರ್ಷ ನಡೆಯಲಿರುವ ಬಿಜೆಪಿಯೇತರ ಆಡಳಿತ ರಾಜ್ಯಗಳಾದ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸೇರಿದಂತೆ 12 ರಾಜ್ಯಗಳಲ್ಲಿ ನಡೆಯುತ್ತಿರುವ ಎಸ್ಐಆರ್​ ಕುರಿತು ಚರ್ಚೆ ನಡೆಸುವಂತೆ ಇಂಡಿಯಾ ಮೈತ್ರಿಕೂಟದ ವಿಪಕ್ಷಗಳು ನಿನ್ನೆ ಅಧಿವೇಶನ ಆರಂಭವಾದಾಗಿನಿಂದ ಪ್ರತಿಭಟನೆ ನಡೆಸಿದ್ದವು.
ಎಸ್​ಐಆರ್ ಪ್ರಕ್ರಿಯೆಯನ್ನು ಕಾಂಗ್ರೆಸ್​ ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ತೀವ್ರವಾಗಿ ಟೀಕಿಸಿದ್ದು, ಇದು ವಿಪಕ್ಷಗಳ ಮತದಾರರನ್ನು ಪಟ್ಟಿಯಿಂದ ಅಕ್ರಮವಾಗಿ ತೆಗೆದು ಹಾಕುವ ಕೆಲಸ ಮಾಡಲಾಗ್ತಿದೆ. ಎಸ್​ಐಆರ್ ಪ್ರಕ್ರಿಯೆಯಿಂದಾಗಿಯೇ‘ ಕಳೆದ ಬಿಹಾರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಕೂಟ ಅಧಿಕಾರಕ್ಕೆ ಬಂದಿದೆ. ಚುನಾವಣೆ ಆಯೋಗ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿವೆ.
ಇನ್ನೂ ಬಿಜೆಪಿ ಮತ್ತು ಚುನಾವಣೆ ಆಯೋಗ ವಿಪಕ್ಷಗಳ ಆರೋಪವನ್ನು ನಿರಾಕರಿಸಿವೆ. ಜೊತೆಗೆ ಎಸ್​ಐಆರ್ ಪ್ರಕ್ರಿಯೆ ತಡೆ ಕುರಿತು ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅಂತಿಮವಾಗಿ ಆಯೋಗಕ್ಕೆ ಪರಿಶೀಲನೆ ನಡೆಸುವ ಅಧಿಕಾರ ಇದೆ ಎಂದು ಸುಪ್ರೀಂಕೋರ್ಟ್ ಆಯೋಗದ ಪರ ತೀರ್ಪು ನೀಡಿದೆ.
ಸೋಮವಾರ(ಡಿ. 01) ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ರಾಜ್ಯಸಭೆಗೆ ತಿಳಿಸುತ್ತಾ, ಸರ್ಕಾರವು ಎಸ್‌ಐಆರ್ ಅಥವಾ ಚುನಾವಣಾ ಸುಧಾರಣೆಗಳ ಕುರಿತು ಚರ್ಚೆಗೆ ಹಿಂಜರಿಯುವುದಿಲ್ಲ, ಆದರೆ ಪ್ರತಿಪಕ್ಷಗಳು ಸಮಯ ಮಿತಿಯನ್ನು ಒತ್ತಾಯಿಸಬಾರದು ಎಂದು ಒತ್ತಾಯಿಸಿದರು (ಏಜೆನ್ಸೀಸ್).