ಅಲಹಾಬಾದ್ ಹೈಕೋರ್ಟ್ 
ದೇಶ

ಆಕೆಯ ಇಚ್ಛೆಗೆ ವಿರುದ್ಧವಾಗಿ ವಯಸ್ಕ ಮಗಳು ತಮ್ಮೊಂದಿಗೆ ವಾಸಿಸುವಂತೆ ಪೋಷಕರು ಒತ್ತಾಯಿಸುವಂತಿಲ್ಲ: ಹೈಕೋರ್ಟ್ | High Court

ವಯಸ್ಕಳಾದ ಮಗಳೊಬ್ಬಳನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ತಮ್ಮೊಂದಿಗೆ ವಾಸಿಸುವಂತೆ ಪೋಷಕರು ಒತ್ತಾಯಿಸುವಂತಿಲ್ಲ ಮತ್ತು ಆ ಸಂಬಂಧ ಪೋಷಕರು 'ಹೇಬಿಯಸ್ ಕಾರ್ಪಸ್' ಅರ್ಜಿ ಸಲ್ಲಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಅಲಹಾಬಾದ್: ವಯಸ್ಕಳಾದ ಮಗಳೊಬ್ಬಳನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ತಮ್ಮೊಂದಿಗೆ ವಾಸಿಸುವಂತೆ ಪೋಷಕರು ಒತ್ತಾಯಿಸುವಂತಿಲ್ಲ ಮತ್ತು ಆ ಸಂಬಂಧ ಪೋಷಕರು 'ಹೇಬಿಯಸ್ ಕಾರ್ಪಸ್' ಅರ್ಜಿ ಸಲ್ಲಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕಲಾವತಿ ದೇವಿ ಎಂಬುವವರು ತಮ್ಮ 25 ವರ್ಷದ ಮಗಳು ಕುಮಾರಿ ಪೂಜಾಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಚಾರಣೆ ನಡೆಸಿದ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಸಂದೀಪ್ ಜೈನ್ ನೇತೃತ್ವದ ಪೀಠ ಈ ಆದೇಶವನ್ನು ಹೊರಡಿಸಿದೆ.

ಸೆಪ್ಟೆಂಬರ್ 28ರಂದು ಹೊರಡಿಸಿದ ಆದೇಶದಲ್ಲಿ ನ್ಯಾ. ಸಂದೀಪ್ ಜೈನ್ ಅವರು, ಮಗಳು ವಯಸ್ಕಳಾಗಿದ್ದು ಹಾಗೂ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದರಿಂದ, ತಮಗೆ ಇಷ್ಟವಾದ ಸ್ಥಳದಲ್ಲಿ ಮತ್ತು ಇಷ್ಟವಾದ ವ್ಯಕ್ತಿಯೊಂದಿಗೆ ವಾಸಿಸಲು ಆಕೆಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಆಕೆಯ ಇಚ್ಛೆಗೆ ವಿರುದ್ಧವಾಗಿ ಇಂತಹವರ ಜೊತೆಯೇ ವಾಸಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ ಏನು?

ಕಲಾವತಿ ದೇವಿ ಎಂಬುವರು ತಮ್ಮ ಮಗಳನ್ನು ಹೈಕೋರ್ಟ್ ಮುಂದೆ ಹಾಜರುಪಡಿಸುವಂತೆ ನಿರ್ದೇಶನ ಕೋರಿ 'ಹೇಬಿಯಸ್ ಕಾರ್ಪಸ್' ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. 2026 ಅಗಸ್ಟ್ 17ರಂದು ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಹೈಕೋರ್ಟ್ ಆದೇಶದಂತೆ ಮಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.

ವಿಚಾರಣೆ ವೇಳೆ, ಮಗಳು ಪೂಜಾ, ತಾನು ದೆಹಲಿಯಲ್ಲಿ ಸ್ವಇಚ್ಛೆಯಿಂದ ಸ್ವತಂತ್ರವಾಗಿ ವಾಸಿಸುತ್ತಿರುವುದಾಗಿಯೂ ಮತ್ತು ಯಾವುದೇ ಅಕ್ರಮ ಅಥವಾ ಕಾನೂನುಬಾಹಿರ ಬಂಧನದಲ್ಲಿಲ್ಲವೆಂದೂ ಪೀಠಕ್ಕೆ ತಿಳಿಸಿದ್ದಾಳೆ. ಮತ್ತು ತಾನು ತನ್ನ ತಾಯಿಯೊಂದಿಗೆ ವಾಸಿಸಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾಳೆ.

ತನ್ನ ತಾಯಿಯ ನಡವಳಿಕೆ ಸೌಹಾರ್ದಯುತವಾಗಿರಲಿಲ್ಲವೆಂದು ಹಾಗೂ ತವರು ಮನೆಯಲ್ಲಿ ತಾನು ಆಗಾಗ್ಗೆ ಹಲ್ಲೆ ಮತ್ತು ನಿಂದನೆಗೆ ಒಳಗಾಗಿದ್ದೆನೆಂದು ಆಕೆ ಆರೋಪಿಸಿದ್ದಾಳೆ. ಆದ್ರೆ ತಾಯಿ ಈ ಆರೋಪಗಳನ್ನು ನಿರಾಕರಿಸಿದ್ದು, ಮಗಳನ್ನು ತಮ್ಮೊಂದಿಗೆ ತವರು ಮನೆಯಲ್ಲಿಯೇ ವಾಸಿಸುವಂತೆ ಒತ್ತಾಯಿಸಿದ್ದಾರೆ.

ಬಳಿಕ ಹೈಕೋರ್ಟ್ ಮಗಳೊಂದಿಗೆ ಮಾತನಾಡಿದ ಬಳಿಕ ಮತ್ತು ಆಕೆಯ ಹೇಳಿಕೆಯನ್ನು ಪರಿಗಣಿಸಿ, ಆಕೆ ವಯಸ್ಕಳಾಗಿದ್ದಾಳೆ ಹಾಗೂ ಪ್ರಜ್ಞಾಪೂರ್ವಕವಾಗಿ ಮತ್ತು ಸ್ವಇಚ್ಛೆಯಿಂದ ತನ್ನ ತಾಯಿಯೊಂದಿಗೆ ವಾಸಿಸಲು ಇಷ್ಟವಿಲ್ಲವೆಂದು ವ್ಯಕ್ತಪಡಿಸಿದ್ದಾಳೆಎಂದು ಅಭಿಪ್ರಾಯಪಟ್ಟು, ತಾಯಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ (ಏಜೆನ್ಸೀಸ್).