ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹೈಜಾಕ್​ ಮಾಡ್ಬೇಡಿ: ಸಿಜೆಪಿ ಧರಣಿಗೆ ಬೆಂಬಲ ನೀಡಿ ಖಡಕ್​ ಎಚ್ಚರಿಕೆ ಕೊಟ್ಟ ಸಲ್ಲು​! Salman Khan  
ದೇಶ

ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹೈಜಾಕ್​ ಮಾಡ್ಬೇಡಿ: ಸಿಜೆಪಿ ಧರಣಿಗೆ ಬೆಂಬಲ ನೀಡಿ ಖಡಕ್​ ಎಚ್ಚರಿಕೆ ಕೊಟ್ಟ ಸಲ್ಲು​! Salman Khan

ಪ್ರಮುಖ ಮುಖ್ಯಾಂಶಗಳು

  • ಪೇಪರ್ ಲೀಕ್ ವಿರುದ್ಧದ ವಿದ್ಯಾರ್ಥಿ ಹೋರಾಟಕ್ಕೆ ಸಾಥ್ ನೀಡಿದ ಸಲ್ಮಾನ್ ಖಾನ್
  • ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಆಗ್ರಹಿಸಿ ಬೀದಿಗಿಳಿದ ಯುವಜನತೆಗೆ ಸಲ್ಲು ಭಾಯ್ ಬೆಂಬಲ
  • ಚಲೋ ಸಂಸದ್ ಹಿಂಸಾಚಾರಕ್ಕೆ ಕಳವಳ ವ್ಯಕ್ತಪಡಿಸಿ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ ಬಾಲಿವುಡ್ ನಟ
  • ನೀಟ್ ಪೇಪರ್ ಲೀಕ್ ಖಂಡಿಸಿ ದೇಶವ್ಯಾಪಿ ತೀವ್ರಗೊಂಡ ಸಿಜೆಪಿ ನೇತೃತ್ವದ ಬೃಹತ್ ಪ್ರತಿಭಟನೆ
ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಹೋರಾಟಕ್ಕೆ ಇದೀಗ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ( Salman Khan ) ಸಾಥ್ ನೀಡಿದ್ದಾರೆ! ನೀಟ್​ ಪರೀಕ್ಷಾ ಪೇಪರ್ ಲೀಕ್ ವಿರುದ್ಧ 'ಕಾಕ್ರೋಚ್ ಜನತಾ ಪಾರ್ಟಿ' (CJP) ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಶ್ಲಾಘಿಸಿರುವ 60 ವರ್ಷದ ನಟ, ಇದು ವಿದ್ಯಾರ್ಥಿಗಳ ದೇಶಪ್ರೇಮದ ಸಂಕೇತ, ಇದಕ್ಕೆ ರಾಜಕೀಯ ಬಣ್ಣ ಬಳಿಯಬೇಡಿ ಎಂದು ಮನವಿ ಮಾಡಿದ್ದಾರೆ. ಜುಲೈ 20ರ 'ಚಲೋ ಸಂಸದ್' ಮೆರವಣಿಗೆ ವೇಳೆ ನಡೆದ ಹಿಂಸಾಚಾರಕ್ಕೆ ಕಳವಳ ವ್ಯಕ್ತಪಡಿಸಿರುವ ಸಲ್ಲು, ಶಾಂತಿಯುತ ಹೋರಾಟಕ್ಕೆ ಕರೆ ನೀಡಿದ್ದಾರೆ.
ಬುಧವಾರ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ಸುದೀರ್ಘ ಪೋಸ್ಟ್‌ನಲ್ಲಿ, ಪ್ರತಿಭಟನೆಯ ವೇಳೆ ಗಾಯಗೊಂಡ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿರುವ ಸಲ್ಮಾನ್ ಖಾನ್, ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಪರೀಕ್ಷಾ ಪೇಪರ್ ಲೀಕ್ ವಿಚಾರವನ್ನು ಅತ್ಯಂತ ಗಂಭೀರ ಸಮಸ್ಯೆ ಎಂದು ಬಣ್ಣಿಸಿರುವ ಅವರು, ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಒಗ್ಗಟ್ಟಿನಿಂದ ಹೋರಾಡುತ್ತಿರುವ ವಿದ್ಯಾರ್ಥಿಗಳ ಧೈರ್ಯವನ್ನು ಶ್ಲಾಘಿಸಿದ್ದಲ್ಲದೆ, ಅವರಿಗೆ ಸಾಥ್ ನೀಡುತ್ತಿರುವ ಹೆತ್ತವರಿಗೂ ಧನ್ಯವಾದ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಆಂದೋಲನ ಮತ್ತು ಪ್ರತಿಭಟನೆಯೇ ಸರಿಯಾದ ಮಾರ್ಗ ಎಂದು ಉಲ್ಲೇಖಿಸಿರುವ ಸಲ್ಲು, ದೇಶದ ಶಿಕ್ಷಣದ ಮೇಲಿರುವ ವಿದ್ಯಾರ್ಥಿಗಳ ಈ ಬದ್ಧತೆ ಹಾಗೂ ಕಾಳಜಿ ಇಡೀ ಭಾರತವೇ ಹೆಮ್ಮೆಪಡುವಂತೆ ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ, ಈ ವಿಷಯವು ಕೇವಲ ವಿದ್ಯಾರ್ಥಿಗಳು ಮತ್ತು ಶಿಕ್ಷಣ ವ್ಯವಸ್ಥೆಯ ನಡುವಿನ ವಿಚಾರ ಎಂದು ಸ್ಪಷ್ಟಪಡಿಸಿದ ಸಲ್ಮಾನ್ ಖಾನ್, ಯಾವುದೇ ರಾಜಕೀಯ ಪಕ್ಷಗಳು ಈ ಹೋರಾಟವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು ಅಥವಾ ಹೈಜಾಕ್ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಸರ್ಕಾರ ಖಂಡಿತವಾಗಿಯೂ ವಿದ್ಯಾರ್ಥಿಗಳ ಪರವಾಗಿ ನಿಲ್ಲಲಿದೆ ಎಂಬ ಭರವಸೆ ವ್ಯಕ್ತಪಡಿಸಿದ ಅವರು, ಮುಂಬರುವ ದಿನಗಳಲ್ಲಿ ಭಾರತವು ಜಾಗತಿಕ ಮಟ್ಟದ ಶೈಕ್ಷಣಿಕ ಕೇಂದ್ರವಾಗಿ ಬೆಳೆದು, ವಿಶ್ವದಾದ್ಯಂತ ಜನ ಇಲ್ಲಿಗೆ ಕಲಿಯಲು ಬರುವಂತಾಗಲಿ ಎಂಬ ಆಶಯದೊಂದಿಗೆ ತಮ್ಮ ಪೋಸ್ಟ್ ಕೊನೆಗೊಳಿಸಿದ್ದಾರೆ.
ಪರೀಕ್ಷಾ ಪೇಪರ್ ಲೀಕ್ ತಡೆದು ಪರೀಕ್ಷಾ ವ್ಯವಸ್ಥೆಯಲ್ಲಿ ತಕ್ಷಣ ಸುಧಾರಣೆ ತರಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಈ ಹೋರಾಟಕ್ಕೆ ಚಲನಚಿತ್ರ ರಂಗದಿಂದಲೂ ಬೆಂಬಲದ ಮಹಾಪೂರವೇ ಹರಿದುಬರುತ್ತಿದೆ. ಸಲ್ಮಾನ್ ಖಾನ್ ಮಾತ್ರವಲ್ಲದೆ ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ದುಲ್ಕರ್ ಸಲ್ಮಾನ್, ಪೂಜಾ ಭಟ್, ನಿರ್ದೇಶಕ ಇಮ್ತಿಯಾಜ್ ಅಲಿ ಮತ್ತು ಹಿರಿಯ ನಟ ನಸೀರುದ್ದೀನ್ ಶಾ ಸೇರಿದಂತೆ ಚಿತ್ರರಂಗದ ಹಲವು ಪ್ರಮುಖ ಗಣ್ಯರು ಸಿಜೆಪಿ (CJP) ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆಗೆ ಬಹಿರಂಗ ಬೆಂಬಲ ಸೂಚಿಸಿ, ಹೋರಾಟಗಾರರೊಂದಿಗೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ನೀಟ್-ಯುಜಿ (NEET-UG) 2026ರ ಪೇಪರ್ ಲೀಕ್ ಪ್ರಕರಣದ ಬೆನ್ನಲ್ಲೇ ಈ 'ಸಿಜೆಪಿ' (CJP) ನೇತೃತ್ವದ ಬೃಹತ್ ಚಳವಳಿ ಹುಟ್ಟಿಕೊಂಡಿದೆ. ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ಪದೇಪದೆ ನಡೆಯುತ್ತಿರುವ ಅಕ್ರಮಗಳಿಂದ ರೋಸಿಹೋಗಿದ್ದ ವಿದ್ಯಾರ್ಥಿ ಸಮುದಾಯ, ಭಾರತದ ಪರೀಕ್ಷಾ ಪದ್ಧತಿಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ತರಲೇಬೇಕೆಂದು ಆಗ್ರಹಿಸಿ ಬೀದಿಗಿಳಿದಿದ್ದು, ಇದೀಗ ಇದು ದೇಶವ್ಯಾಪಿ ಸದ್ದು ಮಾಡುತ್ತಿರುವ ಬೃಹತ್ ಆಂದೋಲನವಾಗಿ ರೂಪುಗೊಂಡಿದೆ.
ಪರೀಕ್ಷಾ ಪೇಪರ್ ಲೀಕ್ ತಡೆಯಲು ಕಠಿಣ ಕಾನೂನು ಕ್ರಮಗಳು, ಸಮಗ್ರ ಶೈಕ್ಷಣಿಕ ಸುಧಾರಣೆ, ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳಿಗೆ ಸೂಕ್ತ ಪರಿಹಾರ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಈ ಹೋರಾಟದ ಭಾಗವಾಗಿ ಜುಲೈ 20ರಂದು ದೆಹಲಿಯಲ್ಲಿ 'ಚಲೋ ಸಂಸದ್' ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜಂತರ್ ಮಂತರ್‌ನಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ಸಂಸತ್ತಿನತ್ತ ಮೆರವಣಿಗೆ ಹೊರಟಾಗ, ಪೋಲಿಸರು ಅವರನ್ನು ತಡೆದಿದ್ದರಿಂದ ಉಭಯ ಪಕ್ಷಗಳ ನಡುವೆ ಸಂಘರ್ಷ ಏರ್ಪಟ್ಟು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು, (ಏಜೆನ್ಸೀಸ್​).