- ಲಕ್ನೋದ ಅಲಿಗಂಜ್‌ನ ವಾಣಿಜ್ಯ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ.
- ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ 15 ವಿದ್ಯಾರ್ಥಿಗಳು ದುರ್ಮರಣ, 24 ಜನ ಆಸ್ಪತ್ರೆಗೆ ದಾಖಲು.
- ಪಪ್ಪಾ ನನ್ನನ್ನು ಬಚಾವ್ ಮಾಡಿ" ಎಂದು ತಂದೆಗೆ ಕೊನೆಯ ಕರೆ ಮಾಡಿದ್ದ ಸುಖ್ಮನಿ ಸಿಂಗ್
- ಕರ್ತವ್ಯ ಲೋಪದ ಆರೋಪದ ಮೇಲೆ ನಾಲ್ವರು ಹಿರಿಯ ಅಧಿಕಾರಿಗಳ ಅಮಾನತು, ಮಾಲೀಕ ಬಂಧನ
ಹೌದು ಸೋಮವಾರ ಉತ್ತರ ಪ್ರದೇಶದ ಅಲಿಗಂಜ್ ಪ್ರದೇಶದ ಉಷಾ ಮೆಹ್ರಾ ಮಾರ್ಗದಲ್ಲಿರುವ ವಾಣಿಜ್ಯ ಕಟ್ಟಡದಲ್ಲಿ ಸೋಮವಾರ ಈ ಭೀಕರ ಬೆಂಕಿ ಕಾಣಿಸಿಕೊಂಡು, ಒಂದು ಗಂಟೆಗೂ ಹೆಚ್ಚು ಕಾಲ ಹೊತ್ತಿ ಉರಿದಿದೆ. ಇದರಿಂದ ಕಟ್ಟಡದ ಒಳಗೆ ಸಿಲುಕಿಕೊಂಡ 15 ವಿದ್ಯಾರ್ಥಿಗಳು ಸಜೀವದಹನಗೊಂಡಿದ್ದರೆ, ಇನ್ನು ಕೆಲವರು ಕಟ್ಟಡದಿಂದ ನೆಲಕ್ಕೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನೂ ಕೆಲವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ ಎನ್ನಲಾಗಿದೆ. ಬೆಂಕಿ ಅವಘಡದಲ್ಲಿ 24 ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಏನಾಗಿತ್ತು?
ವಾಣಿಜ್ಯ ಕಟ್ಟಡದ ಕೆಳ ಅಂತಸ್ತಿನಲ್ಲಿ ಪೆಟ್ ಕ್ಲಿನಿಕ್ ಹಾಗೂ ಮೇಲಿನ ಅಂತಸ್ತುಗಳಲ್ಲಿ ಕೋಚಿಂಗ್ ಸೆಂಟರ್, ಲೈಬ್ರರಿ ಮತ್ತು ಗೇಮಿಂಗ್ ಜೋನ್ ಇತ್ತು. ಸೋಮವಾರ ಮಧ್ಯಾಹ್ನ 3 ಗಂಟೆಗೆ ಬೆಂಕಿ ಕಾಣಿಸಿಕೊಂಡಿತು. ಮೊದಲು ಕಟ್ಟಡದ ನೆಲ ಮಹಡಿಯಲ್ಲಿದ್ದ ಪ್ರಾಣಿಗಳಿಗೆ ಸಂಬಂಧಿಸಿದ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಘಟನೆಯಲ್ಲಿ ಬೆಕ್ಕುಗಳು ಮೃತಪಟ್ಟಿದೆ ಎನ್ನಲಾಗಿದೆ. ದುರಂತದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ಎಸ್‌ಐಟಿ ರಚಿಸಿದೆ.
ನನ್ನ ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ
ಮೃತ 15 ಮಂದಿ ವಿದ್ಯಾರ್ಥಿಗಳ ಪೈಕಿ 23 ವರ್ಷದ ಸುಖ್ಮನಿ ಸಿಂಗ್ ಎಂಬ ಯುವಕ ಸೇರಿದ್ದು, ಆತ ಬೆಂಕಿ ಹೊತ್ತಿಕೊಂಡಾಗ ತಮ್ಮ ತಂದೆಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 'ಸುಮಾರು 2:15ಕ್ಕೆ ಮಧ್ಯಾಹ್ನ ನನಗೆ ಕರೆ ಮಾಡಿದ್ದ ಪಪ್ಪಾ, ಆಫೀಸ್‌ನಲ್ಲಿ ಬೆಂಕಿ ಹತ್ತಿಕೊಂಡಿದೆ, ದಯವಿಟ್ಟು ನನ್ನನ್ನು ಬದುಕಿಸಿ ಎಂದು ಕೇಳಿಕೊಂಡ. ನನಗೆ ಮಗನನ್ನು ಉಳಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ನಾನು ಹೋಗುವಷ್ಟರಲ್ಲಿ ಎಲ್ಲವು ಮುಗಿದಿತ್ತು' ಎಂದು ಅತ್ತರು
ವಿಡಿಯೋ ಮಾಡೋದು ಬಿಡ್ಬೇಕಿತ್ತು
ಮತ್ತೊಬ್ಬ ಮೃತ ವಿದ್ಯಾರ್ಥಿ ಆದಿತ್ಯ ಶ್ರೀವಾಸ್ತವ ಅವರ ತಾಯಿ ಮಾತನಾಡಿ, 'ಮಗ ದಟ್ಟವಾದ ಹೊಗೆಯ ನಡುವೆ ಸುಮಾರು ಎರಡೂವರೆ ಗಂಟೆಗಳ ಕಾಲ ಒಳಗೆ ಸಿಲುಕಿಕೊಂಡಿದ್ದನು. ಅಲ್ಲಿ ನೆರೆದಿದ್ದವರು ವಿಡಿಯೋ ಮಾಡುವುದನ್ನು ಬಿಟ್ಟು ಮೊದಲೇ ಸಹಾಯ ಮಾಡಿದ್ದರೆ ನನ್ನ ಮಗ ಹಾಗೂ ಇತರ ಮಕ್ಕಳ ಜೀವ ಉಳಿಯುತ್ತಿತ್ತೇನೋ' ಎಂದು ಕಣ್ಣೀರು ಹಾಕಿದ್ದಾರೆ.
ಮನೆಯ ಆಧಾರ ಸ್ತಂಭ ಇನ್ನಿಲ್ಲ
ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿ ಅಬ್ದುಲ್ ರೆಹಮಾನ್ ಎಂಬಾತ ಮನೆಯ ಆಧಾರ ಸ್ತಂಭವಾಗಿದ್ದನು ಪಾರ್ಶ್ವವಾಯು ಪೀಡಿತ ತಂದೆ ಹಾಗೂ ಗೃಹಿಣಿಯಾದ ತಾಯಿಯನ್ನು ಹೊಂದಿದ್ದ ಅಬ್ದುಲ್‌ಗೆ 8-10 ತಿಂಗಳ ಹಿಂದಷ್ಟೇ ಕೆಲಸ ಸಿಕ್ಕಿತ್ತು. ಈತನ ಸಾವಿನಿಂದಾಗಿ ವೃದ್ಧ ಪೋಷಕರು ಈಗ ಅನಾಥರಾಗಿದ್ದಾರೆ.
ನಾಲ್ವರ ಅಮಾನತು, ಆಸ್ತಿ ಮಾಲೀಕರ ಬಂಧನ
ಘಟನೆಯ ನಂತರ ಲಕ್ನೋ ಅಭಿವೃದ್ಧಿ ಪ್ರಾಧಿಕಾರದ ಇಬ್ಬರು, ವಿದ್ಯುತ್ ಮತ್ತು ಅಗ್ನಿಶಾಮಕ ಇಲಾಖೆಯ ತಲಾ ಒಬ್ಬರು ಸೇರಿದಂತೆ ಒಟ್ಟು ನಾಲ್ಕು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಬೆಂಕಿ ಅವಘಡದ ತನಿಖೆಗಾಗಿ ಇಬ್ಬರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ ಮತ್ತು ಉತ್ತರ ಪ್ರದೇಶ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಕಾಯ್ದೆಯಡಿ ಪೊಲೀಸರು 6 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಜಂಟಿ ಮಾಲೀಕರಾದ ರಾಮ್ ಕೃಷ್ಣ ಉಪಾಧ್ಯಾಯ (43), ವೀರೇಂದ್ರ ಪ್ರಸಾದ್ ಶುಕ್ಲಾ (62), ತುಷಾರ್ ಕೃಷ್ಣ ಜೈಸ್ವಾಲ್ (31), ಮತ್ತು ಸುರೇಶ್ ಕುಮಾರ್ ಸಾಹು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ, (ಏಜೆನ್ಸೀಸ್).