ಮಹಿಳೆಯ ದವಡೆ ಜರುಗಿದ ದೃಶ್ಯ 
ದೇಶ

ಪಾನಿಪುರಿ ತಿನ್ನಲು ತೆರೆದ ಬಾಯಿ ಏನೇ ಮಾಡಿದ್ರು ಮುಚ್ಚಲಿಲ್ಲ! ಈ ಮಹಿಳೆಯ ಪಾಡು, ಪಟ್ಟ ಕಷ್ಟ ಅಷ್ಟಿಷ್ಟಲ್ಲ

ಪ್ರಮುಖ ಮುಖ್ಯಾಂಶಗಳು

  • ಪಾನಿಪುರಿ ಪ್ರಿಯರೇ ನಿಮಗಿದು ಎಚ್ಚರಿಕೆ
  • ಉತ್ತರ ಪ್ರದೇಶದ ಔರೈಯಾದಲ್ಲಿ ಘಟನೆ
  • ಮಹಿಳೆಯ ವಿಡಿಯೋ ಜಾಲತಾಣಗಳಲ್ಲಿ ವೈರಲ್​
ಉತ್ತರ ಪ್ರದೇಶ: ಪಾನಿಪುರಿ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ರಸ್ತೆಬದಿ ಹಾದುಹೋಗುವಾಗ ನಾಲಿಗೆ ರುಚಿ ಹೆಚ್ಚಿಸುವ ಪಾನಿಪುರಿ ಅಂಗಡಿಯನ್ನು ನೋಡಿದರೆ ಸಾಕು ಒಂದು ಪ್ಲೇಟ್​ ತಿಂದು ಮುಂದೆ ಹೋಗೋಣ ಅನಿಸುವುದು ಸಾಮಾನ್ಯ. ಅದರಲ್ಲೂ, ಯುವಜನತೆಗಂತು ಈ ತಿನಿಸು ಬಹಳ ಅಚ್ಚುಮೆಚ್ಚು. ಆರೋಗ್ಯ ಮುನ್ನೆಚ್ಚರಿಕೆಗಳ ನಡುವೆಯೂ ದೊಡ್ಡದಾದ ಬಾಯಿ ತೆರೆದು ಒಂದೊಂದೇ ಪಾನಿ ಪುರಿ ಗುಳಂ ಎಂದು ನುಂಗುವವರು ಇಲ್ಲೊಬ್ಬ ಮಹಿಳೆಯ ಕಣ್ಣೀರಿನ ಕಥೆ ಕೇಳಿದ್ರೆ ನಿಜಕ್ಕೂ ಮುಂದೆ ಪಾನಿಪುರಿ ಅಥವಾ ಗೋಲ್​ಗಪ್ಪ ಮುಟ್ಟುವುದು ಬೇಡವೇ ಬೇಡ ಅನಿಸುತ್ತೆ.
ಉತ್ತರ ಪ್ರದೇಶದ ಔರೈಯಾದಲ್ಲಿ ಮಹಿಳೆಯೊಬ್ಬರು ಪಾನಿಪುರಿ ತಿನ್ನಲು ಬಾಯಿ ತೆರೆದಾಗ ಅದು ಮುಚ್ಚಲು ಸಾಧ್ಯವಾಗಿಲ್ಲ. ಒಮ್ಮೆ ತೆರೆದಿದ್ದು, ಹಾಗೆಯೇ ಉಳಿದಿದೆ. ಆಕೆ ಎಷ್ಟೇ ಪ್ರಯತ್ನಿಸಿದರೂ ಅದು ಮುಚ್ಚಲಿಲ್ಲ. ಇದು ಅವರನ್ನು ತೀವ್ರ ಭಯಭೀತರನ್ನಾಗಿ ಮಾಡಿದ್ದು, ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರನ್ನು ಭೇಟಿಯಾಗಿ, ಅಳಲನ್ನು ತೋಡಿಕೊಂಡಿದ್ದಾರೆ. ಮಹಿಳೆಯ ನೋವಿನ ಬೆನ್ನಲ್ಲೇ ಅವರ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದ್ದಾರೆ. ಆಕೆಯ ಪರಿಸ್ಥಿತಿ ಕಂಡು ಅಚ್ಚರಿಗೊಂಡ ವೈದ್ಯರು, ಪರೀಕ್ಷೆ ನಡೆಸಿ, ಅಸಲಿ ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಮಹಿಳೆ ತಮ್ಮ ಮಕ್ಕಳೊಂದಿಗೆ ಪಾನಿಪುರಿ ತಿನ್ನಲು ಹೋದಾಗ, ದೊಡ್ಡ ಪೂರಿಯನ್ನು ತಿನ್ನಲು ಬಾಯಿ ತೆರೆದಾಗ, ಮುಚ್ಚಲು ಆಗಿಲ್ಲ. ಸ್ಕ್ಯಾನಿಂಗ್​ ನಡೆಸಿದ ವೈದ್ಯರು, 'ಜಾ ಡಿಸ್​ಲೋಕೇಟ್​' (ದವಡೆ ಜರುಗಿದೆ) ಆಗಿದೆ ಎಂದು ತಿಳಿಸಿದ್ದಾರೆ. ಕೊನೆಗೆ, ಸೂಕ್ತ ಚಿಕಿತ್ಸೆ ನೀಡಿ ಆಕೆಯ ದವಡೆಯನ್ನು ಸರಿಪಡಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ. ಅಸಲಿಗೆ ಏನೀ ಸಮಸ್ಯೆ? ಇದಕ್ಕೆ ವೈದ್ಯ ಲೋಕದಲ್ಲಿ ಬಳಸುವ ಪದವೇನು? ಎಂಬ ಪ್ರಶ್ನೆಗೆ ಸ್ಥಳೀಯ ವೈದ್ಯರು ಕೊಟ್ಟ ಉತ್ತರವೇ ಟೆಂಪೊರೊಮಾಂಡಿಬ್ಯುಲರ್ ಡಿಸಾರ್ಡರ್ ಎಂದು.

ಏನಿದು ಟೆಂಪೊರೊಮಾಂಡಿಬ್ಯುಲರ್ ಡಿಸಾರ್ಡರ್?

ಟೆಂಪೊರೊಮಾಂಡಿಬ್ಯುಲರ್ ಡಿಸಾರ್ಡರ್ಸ್ (TMD) ದವಡೆಯ ಸ್ನಾಯುಗಳು, ಟೆಂಪೊರೊಮಾಂಡಿಬ್ಯುಲರ್ ಕೀಲುಗಳು ಮತ್ತು ನರಗಳನ್ನು ಒಳಗೊಂಡ ಸ್ಥಿತಿಗಳಾಗಿವೆ. ದವಡೆಯ ಸ್ನಾಯು, ಮೂಳೆ ಮತ್ತು ಕೀಲುಗಳು ಒಟ್ಟಿಗೆ ಕಾರ್ಯನಿರ್ವಹಿಸುವುದನ್ನು ತಡೆಯುವ ಯಾವುದೇ ಸಮಸ್ಯೆ ಟೆಂಪೊರೊಮಾಂಡಿಬ್ಯುಲರ್ ಡಿಸಾರ್ಡರ್‌ಗೆ ಕಾರಣವಾಗಬಹುದು.