Ship Sink | ಪನಾಮ ಧ್ವಜ ಹೊತ್ತ ಬೃಹತ್ ಹಡಗು ಜಲಸಮಾಧಿ!
ಒಡಿಶಾದ ಪಾರಾದೀಪ್ ಕರಾವಳಿಯಿಂದ ಸುಮಾರು 240 ನಾಟಿಕಲ್ ಮೈಲಿ ದೂರದಲ್ಲಿ, ಸಿಂಗಾಪುರದತ್ತ ಸಾಗುತ್ತಿದ್ದ ಪನಾಮಾ ಧ್ವಜ ಹೊಂದಿದ್ದ ಸರಕು ಹಡಗೊಂದು ಬಂಗಾಳ ಕೊಲ್ಲಿಯಲ್ಲಿ ಮುಳುಗಡೆಯಾಗಿದೆ. ಈ ಹಡಗಿನಲ್ಲಿ ಒಟ್ಟು 24 ಸಿಬ್ಬಂದಿ ಇದ್ದರು ಮತ್ತು ಘಟನೆ ತಿಳಿಯುತ್ತಿದ್ದಂತೆಯೇ ಭಾರತೀಯ ಕರಾವಳಿ ಪಡೆಮತ್ತು ಭಾರತೀಯ ನೌಕಾಪಡೆ ಜಂಟಿಯಾಗಿ ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಿಬ್ಬಂದಿಗಳಲ್ಲಿ ಎಷ್ಟು ಜನರನ್ನು ರಕ್ಷಿಸಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಹಡಗಿನಲ್ಲಿದ್ದ ಹೆಚ್ಚಿನ ಸಿಬ್ಬಂದಿ ಚೀನಾ ದೇಶದ ಪ್ರಜೆಗಳಾಗಿದ್ದಾರೆ ಎನ್ನಲಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ನೆರವಾಗುವಂತೆ ಸುತ್ತಮುತ್ತಲಿನ ಸಮುದ್ರದಲ್ಲಿದ್ದ ಇತರ ಹಡಗುಗಳಿಗೆ ಮತ್ತು ನೌಕೆಗಳಿಗೆ ತುರ್ತು ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಈ ಸರಕು ಹಡಗು ಶುಕ್ರವಾರ ಒಡಿಶಾ ಕರಾವಳಿಯಿಂದ ಹೊರಟಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತೀಚೆಗಷ್ಟೇ ಸೊಮಾಲಿಯಾದ ಪುಂಟ್‌ಲ್ಯಾಂಡ್ ಕರಾವಳಿಯಲ್ಲಿ ಕ್ಯಾಮರೂನ್ ಧ್ವಜ ಹೊಂದಿದ್ದ ಸರಕು ಹಡಗೊಂದನ್ನು ಕಡಲ್ಗಳ್ಳರು ಅಪಹರಿಸಿದ್ದು, ಅದರಲ್ಲಿಲ್ಲಿದ್ದ 10 ಸಿಬ್ಬಂದಿಗಳ ಪೈಕಿ ಆರು ಮಂದಿ ಭಾರತೀಯರಾಗಿದ್ದಾರೆ ಎಂದು ಸೊಮಾಲಿಯಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೋಲಾರ್ ಮೂವ್‌ಮೆಂಟ್ ಶಿಪಿಂಗ್ ಒಡೆತನದ ಎಂ/ವಿ ಲುಟುಫ್ (M/V LUTUF) ಎಂಬ ಹಡಗನ್ನು ಪುಂಟ್‌ಲ್ಯಾಂಡ್‌ನ ಐಲ್ ಜಿಲ್ಲೆಯ ಮರಾಯಾದಿಂದ ಸುಮಾರು 3.5 ನಾಟಿಕಲ್ ಮೈಲಿ ದೂರದಲ್ಲಿ ಸೋಮವಾರ ಅಪಹರಿಸಲಾಗಿತ್ತು. ನಂತರ ಕಡಲ್ಗಳ್ಳರು ಈ ಹಡಗನ್ನು ನುಗಾಲ್ ಕರಾವಳಿಯತ್ತ ಕೊಂಡೊಯ್ದಿದ್ದಾರೆ. ಈ ಹಡಗಿನಲ್ಲಿ ಟರ್ಕಿ ನಿರ್ಮಿತ ಶಸ್ತ್ರಾಸ್ತ್ರಗಳು, ಸಂವಹನ ಸಾಧನಗಳು ಮತ್ತು ಉಪಗ್ರಹ ಉಪಕರಣಗಳಿದ್ದು, ಇವುಗಳನ್ನು ಮೊಗದಿಶುವಿನಲ್ಲಿರುವ ಟರ್ಕಿ ಮಿಲಿಟರಿ ತರಬೇತಿ ಕೇಂದ್ರಕ್ಕೆ ತಲುಪಿಸಲು ಒಯ್ಯಲಾಗುತ್ತಿತ್ತು ಎಂದು ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹಡಗಿನಲ್ಲಿದ್ದ ಸಿಬ್ಬಂದಿಯಲ್ಲಿ ಆರು ಭಾರತೀಯರು, ಒಬ್ಬ ಟರ್ಕಿ ಪ್ರಜೆ, ಒಬ್ಬ ಜಾರ್ಜಿಯಾ ಪ್ರಜೆ ಮತ್ತು ಇಬ್ಬರು ಸೆರ್ಬಿಯಾ ದೇಶದ ಭದ್ರತಾ ಸಿಬ್ಬಂದಿ ಸೇರಿದ್ದಾರೆ.
ಏಪ್ರಿಲ್ 26 ರಂದು ಎಂ/ವಿ ಸ್ವಾರ್ಡ್ (M/V Sward) ಹಡಗಿನ ಅಪಹರಣದಲ್ಲಿ ಭಾಗಿಯಾಗಿದ್ದ ಗುಂಪಿಗೆ ಸೇರಿದವರೆನ್ನಲಾದ ಎಂಟು ಕಡಲ್ಗಳ್ಳರು, ಈ ಹಡಗನ್ನು ಪುಂಟ್‌ಲ್ಯಾಂಡ್‌ನ ಡಂಗೊರೊಯೊ ಜಿಲ್ಲೆಯ ಗಾರ್ಮಾಲ್ ಕರಾವಳಿಯತ್ತ ಕೊಂಡೊಯ್ದಿದ್ದಾರೆ. ಘಟನೆಯ ನಂತರ ಟರ್ಕಿಗೆ ಸೇರಿದ ಎರಡು ಹಡಗುಗಳು ಅಪಹೃತ ನೌಕೆಯ ಬಳಿಗೆ ತೆರಳಿದ್ದು, ಟರ್ಕಿಯ ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳು ಈ ಪ್ರದೇಶದ ಮೇಲೆ ತೀವ್ರ ನಿಗಾವಹಿಸಿವೆ.
ಮಂಗಳವಾರದಂದು, ಇಬ್ಬರು ವ್ಯಕ್ತಿಗಳನ್ನು ಹೊತ್ತ ಸಣ್ಣ ದೋಣಿಯೊಂದು ಹಡಗಿನ ಬಳಿ ಬಂದು, ಸೊಮಾಲಿಯಾದಲ್ಲಿ ವ್ಯಾಪಕವಾಗಿ ಬಳಸಲಾಗುವ ಖಾತ್ ಎಂಬ ಮಾದಕ ಪ್ರಚೋದಕ ವಸ್ತುವನ್ನು ತಲುಪಿಸಿತ್ತು. ದೋಣಿಯು ದಂಡೆಗೆ ಹಿಂತಿರುಗಿದ ತಕ್ಷಣ ನಡೆದ ವೈಮಾನಿಕ ದಾಳಿಯಲ್ಲಿ ನಾಲ್ವರು ಹಂತಕರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ವೈಮಾನಿಕ ದಾಳಿಯನ್ನು ಯಾರು ನಡೆಸಿದರು ಅಥವಾ ಮೃತರಾದವರು ಹಡಗು ಅಪಹರಣದಲ್ಲಿ ನೇರವಾಗಿ ಭಾಗಿಯಾಗಿದ್ದರೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
ಪ್ರಸ್ತುತ ಲುಟುಫ್ ಹಡಗು, ಅದರಲ್ಲಿದ್ದ ಸಿಬ್ಬಂದಿ ಹಾಗೂ ಶಸ್ತ್ರಾಸ್ತ್ರಗಳ ಸ್ಥಿತಿಗತಿಯ ಕುರಿತು ಸ್ಪಷ್ಟತೆ ಇಲ್ಲ. ಟರ್ಕಿ ಅಧಿಕಾರಿಗಳು ಈ ಘಟನೆಯ ಬಗ್ಗೆ ತಕ್ಷಣಕ್ಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಮತ್ತು ಈ ವಿವರಗಳನ್ನು ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಾಗಿಲ್ಲ(ಏಜೆನ್ಸೀಸ್).