Narendra Modi | ಮಾಲ್ಡಾ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ಕೊಲ್ಕತ್ತಾ: ಮುಂಬರುವ ವಿಧಾನಸಭಾ ಚುನಾವಣೆಯ ಬಳಿಕ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಜನರು ಬದಲಾವಣೆಗಾಗಿ ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಹೇಳಿದರು.
ಮಾಲ್ಡಾ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳವು ಈಗಾಗಲೇ ಬಿಜೆಪಿ ಆಳ್ವಿಕೆ ನಡೆಸುವ ರಾಜ್ಯಗಳಿಂದ ಸುತ್ತುವರೆದಿದ್ದು, ಅಲ್ಲೆಲ್ಲಾ ಉತ್ತಮ ಆಡಳಿತದ ದಾಖಲೆಯನ್ನು ಹೊಂದಿದೆ, ಪಕ್ಷವು ಈಗಾಗಲೇ ಪೂರ್ವ ಭಾರತದ ರಾಜ್ಯಗಳನ್ನು ದ್ವೇಷದ ರಾಜಕೀಯದಿಂದ ಮುಕ್ತಗೊಳಿಸಿದ್ದು, ಜೆನ್ ಜಿ ವರ್ಗ ಬಿಜೆಪಿಯ ಅಭಿವೃದ್ಧಿ ಮಾದರಿಯ ಮೇಲೆ ವಿಶ್ವಾಸವಿಟ್ಟಿದ್ದಾರೆ ಎಂದರು.
ಪೂರ್ವ ಭಾರತ ದಶಕಗಳ ಕಾಲ ವಿಭಜಕ ರಾಜಕೀಯ ಅನುಸರಿಸುವವರ ಕೈ ವಶದಲ್ಲಿತ್ತು, ಬಿಜೆಪಿ ಈಗ ಅದರಿಂದ ಮುಕ್ತಗೊಳಿಸಿದೆ. ಒಡಿಶಾ ಮೊದಲ ಬಾರಿಗೆ ಬಿಜೆಪಿ ಸರ್ಕಾರವನ್ನು ರಚಿಸಿದೆ. ತ್ರಿಪುರಾ ಹಲವು ವರ್ಷಗಳಿಂದ ಬಿಜೆಪಿಯ ಮೇಲೆ ನಂಬಿಕೆ ಇಟ್ಟಿದ್ದಾರೆ, ಅಸ್ಸಾಂ ಮತ್ತು ಬಿಹಾರ ನಮ್ಮ ಸರ್ಕಾರವಿದೆ ಎಂದು ಹೇಳಿದರು.
ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಸಾರ್ವಜನಿಕರನ್ನು ಲೂಟಿ ಮಾಡುತ್ತಿದೆ ಮತ್ತು ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅವಕಾಶ ನೀಡುತ್ತಿಲ್ಲ, ಕೇಂದ್ರ ಸರ್ಕಾರ ಬಂಗಾಳಕ್ಕೆ 40 ಬಾರಿ ಪ್ರವಾಹ ಪರಿಹಾರದ ಹಣ ಬಿಡುಗಡೆ ಮಾಡಿದೆ, ಆದರೆ, ಸಂತ್ರಸ್ತರಿಗೆ ನಯಾ ಪೈಸೆಯನ್ನು ನೀಡಿಲ್ಲ ಎಂದು ಆರೋಪಿಸಿದರು.
ಟಿಎಂಸಿ ಅಧಿಕಾರದಿಂದ ಕೆಳಗಿಳಿದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾತ್ರ ಪಶ್ಚಿಮ ಬಂಗಾಳದ ಅಭಿವೃದ್ಧಿ ಸಾಧ್ಯ, ರಾಜ್ಯದಲ್ಲಿ ಅಕ್ರಮ ನುಸುಳುಕೋರರು ಅತಿದೊಡ್ಡ ಸಮಸ್ಯೆಯಾಗಿದ್ದಾರೆ, ಬಡವರಿಗೆ ಅನುಕೂಲವಾಗುವ ಗುರಿಯನ್ನು ಹೊಂದಿರುವ ಎಲ್ಲಾ ಉಪಕ್ರಮಗಳನ್ನು ಟಿಎಂಸಿ ಸರ್ಕಾರ ನಿರ್ದಯವಾಗಿ ತಡೆಯುತ್ತಿದೆ ಎಂದರು.
ಉಚಿತ ವಿದ್ಯುತ್ ಯೋಜನೆಯ ಪ್ರಯೋಜನಗಳನ್ನು ನೀವು ಪಡೆಯಬೇಕಲ್ಲವೇ? ಎಂದು ಪ್ರಶ್ನಿಸಿದ ಪ್ರಧಾನಿ ಟಿಎಂಸಿ ಸರ್ಕಾರವನ್ನು ಬದಲಾಯಿಸಿದಾಗ ಮಾತ್ರ ಬಂಗಾಳದ ಜನರು ನಿಜವಾಗಿಯೂ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಿದರು(ಏಜೆನ್ಸೀಸ್).