Imran Khan Sister | ಮೋದಿ ಪವರ್ ಮೆಚ್ಚಿ ಪಾಕ್ ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಇಮ್ರಾನ್ ಖಾನ್ ತಂಗಿ ನೋರೀನ್ ಖಾನ್
Imran Khan Sister: ಪಾಕಿಸ್ತಾನದ ಜೈಲುಪಾಲಾಗಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಹೋದರಿ ನೋರೀನ್ ಖಾನ್ ನಿಯಾಜಿಗೆ ಪಾಕಿಸ್ತಾನದ ರಾಷ್ಟ್ರೀಯ ಸೈಬರ್ ಅಪರಾಧ ತನಿಖಾ ಸಂಸ್ಥೆ (NCCIA) ಸಮನ್ಸ್ ಜಾರಿ ಮಾಡಿದೆ. ದೇಶದ ಮಿಲಿಟರಿ ಮತ್ತು ಸರ್ಕಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಸುಳ್ಳು, ಆಕ್ಷೇಪಾರ್ಹ ಮತ್ತು ಪ್ರಚೋದನಾಕಾರಿ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಾದೇಶಿಕ ಭದ್ರತೆಯ ಕುರಿತು ನೋರೀನ್ ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ರಾಜಕೀಯ ವಲಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ವೈರಲ್ ಆದ ಹೇಳಿಕೆಗಳು
ಸಾಮಾಜಿಕ ಜಾಲತಾಣಗಳಲ್ಲಿ ನೋರೀನ್ ನಿಯಾಜಿ ನೀಡಿದ ಹೇಳಿಕೆಯೊಂದು ಭಾರಿ ಸದ್ದು ಮಾಡುತ್ತಿದೆ. ಅದರಲ್ಲಿ ಅವರು, ಒಂದು ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಬಯಸಿದ್ದರೆ, ಅವರು 2025 ರ ಮೇನಲ್ಲೇ ಪಾಕಿಸ್ತಾನವನ್ನು ಮಟ್ಟಹಾಕುತ್ತಿದ್ದರು ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ತಮ್ಮ ಹೇಳಿಕೆಯನ್ನು ಪಾಕಿಸ್ತಾನವು ಅಬ್ರಹಾಂ ಒಪ್ಪಂದಕ್ಕೆ ಸೇರಬಹುದಾದ ಸಾಧ್ಯತೆಗಳಿಗೆ ಹೋಲಿಸಿದ ಅವರು, ಮೋದಿಯವರನ್ನು ಸೂಪರ್ ಪವರ್ (ಅಗ್ರಶಕ್ತಿ) ಎಂದೂ ಕರೆದಿದ್ದಾರೆ. ಈ ಹೇಳಿಕೆಗಳು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಟೀಕಾಕಾರರಿಂದ ವಿಭಿನ್ನ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿವೆ.
ಪಾಕಿಸ್ತಾನದ ಆಂತರಿಕ ರಕ್ಷಣಾ ಕೊರತೆಯನ್ನು ಸಹ ನಿಯಾಜಿ ಮುಕ್ತವಾಗಿ ಒಪ್ಪಿಕೊಂಡಿದ್ದು, ಸಾಮಗ್ರಿ, ತಂತ್ರಜ್ಞಾನ ಮತ್ತು ಆರ್ಥಿಕ ಬಲದಲ್ಲಿ ಭಾರತದ ಮಿಲಿಟರಿ ಶಕ್ತಿ ಪಾಕಿಸ್ತಾನಕ್ಕಿಂತ ಕನಿಷ್ಠ ನಾಲ್ಕು ಪಟ್ಟು ಬಲಿಷ್ಠವಾಗಿದೆ ಎಂದು ಅವರು ಹೇಳಿದ್ದಾರೆ. ಹೀಗಿರುವಾಗ ಭಾರತೀಯ ಸಶಸ್ತ್ರ ಪಡೆಗಳನ್ನು ಸೋಲಿಸುವ ಯಾವುದೇ ಸಾಮರ್ಥ್ಯ ಪಾಕ್ ಸೇನೆಗೆ ಇಲ್ಲ ಎಂದು ಅವರು ಸ್ವಂತ ದೇಶದ ಮಿಲಿಟರಿ ಶಕ್ತಿಯನ್ನು ಲೇವಡಿ ಮಾಡಿದ್ದಾರೆ.
ವರದಿಗಳ ಪ್ರಕಾರ, ಪಾಕಿಸ್ತಾನದ ಸೈನ್ಯ ಮತ್ತು ರಾಜ್ಯ ಸಂಸ್ಥೆಗಳ ವಿರುದ್ಧ ಸುಳ್ಳು, ಆಕ್ಷೇಪಾರ್ಹ ಮತ್ತು ಪ್ರಚೋದನಾಕಾರಿ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ ರಾಷ್ಟ್ರೀಯ ಸೈಬರ್ ಅಪರಾಧ ತನಿಖಾ ಸಂಸ್ಥೆಯು ನೋರೀನ್ ನಿಯಾಜಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಅವರ ಹೇಳಿಕೆಗಳ ಸುತ್ತಲಿನ ವಿವಾದಗಳು ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ವೈರಲ್ ಆಗಿರುವ ಈ ವಿಷಯ ರಾಜಕೀಯ ವಾಗ್ದಾಳಿಗಳಿಗೆ ಪ್ರಮುಖ ಅಸ್ತ್ರವಾಗಿದೆ(ಏಜೆನ್ಸೀಸ್).