ಭಾರತದ ಪ್ರಧಾನಿ ಬೆನ್ನಿಗೆ ನಿಂತ ಪಾಕ್​ ಕ್ರಿಕೆಟಿಗ ಡ್ಯಾನಿಶ್​ ಕನೇರಿಯಾ  
ದೇಶ

ರಾಮ, ಮೋದಿಯನ್ನು ಬೈಯುವುದೇ ನಿಮ್ಮ ಹೋರಾಟ? ಭಾರತದ ಪ್ರಧಾನಿ ಬೆನ್ನಿಗೆ ನಿಂತ ಪಾಕ್​ ಕ್ರಿಕೆಟಿಗ ಕನೇರಿಯಾ

ಪ್ರಮುಖ ಮುಖ್ಯಾಂಶಗಳು

  • ನೀಟ್ ಸೋರಿಕೆ ವಿರುದ್ಧದ ಪ್ರತಿಭಟನೆಗೆ ರಾಜಕೀಯ ಬೆಂಬಲ
  • ಪ್ರತಿಭಟನೆಗಳ ವಿರುದ್ಧ ಪಾಕ್​ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಕಿಡಿ
  • ಎಲ್ಲ ಪ್ರತಿಭಟನೆಗೂ ಒಂದೇ ಸ್ಕ್ರಿಪ್ಟ್ ಇದೆ
  • ನೇಪಾಳದಂತೆ ಭಾರತವನ್ನೂ ಅದೇ ಪರಿಸ್ಥಿತಿಗೆ ದೂಡುವ ಯತ್ನ
ನವದೆಹಲಿ: ಕಳೆದ ಮೂರು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆಗಳು ತಾರಕಕ್ಕೇರಿದ್ದು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಆರೋಪಿಸಿ ಸಿಜೆಪಿ ಪಕ್ಷ ಮತ್ತು ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಹಾಕಿದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೇಂದ್ರದ ನಿಲುವಿನ ಬಗ್ಗೆ ಭಾರಿ ಆಕ್ರೋಶಗಳು ಕೇಳಿಬರುತ್ತಿರುವ ನಡುವೆಯೇ ಪಾಕಿಸ್ತಾನ ಕ್ರಿಕೆಟಿಗ ಡ್ಯಾನಿಶ್​ ಕನೇರಿಯಾ ಮೋದಿ ಪರ ಧ್ವನಿ ಎತ್ತಿದ್ದಾರೆ.
ಸಿಜೆಪಿ ಬೃಹತ್​ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್ ಕೂಡ ಬೆಂಬಲ ನೀಡಿದ್ದು, ಸಂಸತ್ತಿನ ಮುಂದೆ ನಿರಂತರವಾಗಿ ಧರಣಿ ನಡೆಸುತ್ತಿದೆ. ದೇಶಾದ್ಯಂತ ವಿರೋಧ ಪಕ್ಷಗಳು, ಈ ಪ್ರತಿಭಟನೆಗಳಲ್ಲಿ ಭಾಗಿಯಾಗುವ ಮೂಲಕ ಗೃಹ ಸಚಿವ ಅಮಿತ್ ಶಾ ಮತ್ತು ಧರ್ಮೇಂದ್ರ ಅವರ ರಾಜೀನಾಮೆ ಪಟ್ಟು ಹಿಡಿದಿವೆ. ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದ ಡ್ಯಾನಿಶ್ ಕನೇರಿಯಾ, ಈ ಪ್ರತಿಭಟನೆಗಳನ್ನು ವಿರೋಧಿಸಿ ಒಂದಷ್ಟು ವಿವಾದಾತ್ಮಕ ಹೇಳಿಕೆಗಳನ್ನೇ ಹರಿಬಿಟ್ಟಿದ್ದಾರೆ.
ಭಾರತದಲ್ಲಿ ಪ್ರತಿ ಪ್ರತಿಭಟನೆಗೂ ಒಂದೇ ಸ್ಕ್ರಿಪ್ಟ್​ ಇದೆ. ವಿದ್ಯಾರ್ಥಿಗಳ ಹೋರಾಟದ ಹಿಂದೆ ದೊಡ್ಡ ಷಡ್ಯಂತ್ರವಿದೆ. ಪ್ರತಿಭಟನೆ ಕೇವಲ ರಾಮ ಮತ್ತು ಮೋದಿಯನ್ನು ಶಪಿಸುವುದಕ್ಕೆ ಏಕೆ ಮಾಡಲಾಗುತ್ತಿದೆ? ಪ್ರತಿಭಟನೆಗಳು ನಡೆದಾಗಲೆಲ್ಲಾ ಅವರು ಶ್ರೀರಾಮ, ಭಾರತ ಮಾತೆ, ಹಿಂದೂ ಧರ್ಮ, ಮೋದಿ ಮತ್ತು ಅವರ ತಾಯಿಯನ್ನು ಮುನ್ನೆಲೆಗೆ ತರುತ್ತಾರೆ. ಘರ್ಷಣೆಗಳು ನಡೆದಾಗ ಅಲ್ಲಿ ಚರ್ಚೆಯೂ ಇಲ್ಲ, ಪರಿಹಾರವೂ ಆಗಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಭಾರತದಲ್ಲಿ ಘೋಷವಾಕ್ಯ, ನಿಂದನೆ, ಅವ್ಯವಸ್ಥೆಗಳೇ ಕಾಣುತ್ತಿವೆ. ಇವರೆಲ್ಲ ಭಾರತವನ್ನು ನೇಪಾಳದಂತಹ ಪರಿಸ್ಥಿತಿಗೆ ದೂಡಲು ಯತ್ನಿಸುತ್ತಿದ್ದಾರೆ. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಮೊದಲು ಕೆಲವು ರೈತರು ದೆಹಲಿಯನ್ನು ಏಕೆ ತಡೆಯಲು ಹೊರಟಿದ್ದರು? ಇದೊಂದು ಸರ್ಕಸ್ ಆಗಿ ಬದಲಾಗುತ್ತಿದೆ ಅಷ್ಟೇ ಎಂಬ ಡ್ಯಾನಿಶ್​ರ ಕಾಮೆಂಟ್‌ಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸಂಚಲನ ಹುಟ್ಟುಹಾಕಿದೆ,(ಏಜೆನ್ಸೀಸ್).