Operation Sindoor | ಆಪರೇಷನ್ ಸಿಂಧೂರ ರಹಸ್ಯ ಬಿಚ್ಚಿಟ್ಟ ಮಾಜಿ ಸಿಡಿಎಸ್
ನವದೆಹಲಿ: ಆಪರೇಷನ್ ಸಿಂಧೂರ (Operation Sindoor) ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ತಾನವು ಸ್ವತಃ ಕದನ ವಿರಾಮಕ್ಕಾಗಿ ಮನವಿ ಮಾಡಿಕೊಂಡರೂ, ಭಾರತವು ತಕ್ಷಣವೇ ಅದಕ್ಕೆ ಸ್ಪಂದಿಸದೆ ತನ್ನ ಪ್ರಮುಖ ಕಾರ್ಯತಂತ್ರದ ಮಿಲಿಟರಿ ಗುರಿಗಳನ್ನು ಪೂರ್ಣಗೊಳಿಸುವವರೆಗೆ ಕಾರ್ಯಾಚರಣೆಯನ್ನು ಉದ್ದೇಶಪೂರ್ವಕವಾಗಿಯೇ ಮುಂದುವರಿಸಿತ್ತು ಎಂದು ಮಾಜಿ ಸಿಡಿಎಸ್ (Chief of Defence Staff) ಜನರಲ್ ಅನಿಲ್ ಚೌಹಾಣ್ ಬಹಿರಂಗಪಡಿಸಿದ್ದಾರೆ.
ದಿಪ್ರಿಂಟ್ ಆಯೋಜಿಸಿದ್ದ ಆಫ್ ದಿ ಕಫ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2025ರ ಮೇ 10ರ ಬೆಳಿಗ್ಗೆ ಪಾಕಿಸ್ತಾನವು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (DGMO) ಹಾಟ್‌ಲೈನ್ ಮೂಲಕ ಭಾರತವನ್ನು ಸಂಪರ್ಕಿಸಿ ತಕ್ಷಣವೇ ಕದನ ವಿರಾಮ ಘೋಷಿಸುವಂತೆ ಕೋರಿತ್ತು. ಆದರೆ, ಆ ವೇಳೆಗೆ ಭಾರತ ಯೋಜಿಸಿದ್ದ ಹಲವು ಮಿಲಿಟರಿ ದಾಳಿಗಳು ಇನ್ನೂ ಕಾರ್ಯಗತಗೊಳ್ಳಬೇಕಿದ್ದರಿಂದ ಭಾರತ ತಕ್ಷಣ ಸ್ಪಂದಿಸಲಿಲ್ಲ. ಕದನ ವಿರಾಮಕ್ಕೆ ಒಪ್ಪುವ ಮೊದಲು ಸೇನಾ ಗುರಿಗಳನ್ನು ನಿಖರ ಹಾಗೂ ನಿರ್ಣಾಯಕವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಉದ್ದೇಶವಾಗಿತ್ತು ಎಂದರು.
ಮೇ 10ರ ವಿದ್ಯಮಾನಗಳನ್ನು ನೆನಪಿಸಿಕೊಂಡ ಜನರಲ್ ಚೌಹಾಣ್, ಮೇ 9ರಂದು ಭಾರತವನ್ನು ಮುಂದಿನ 48 ಗಂಟೆಗಳಲ್ಲಿ ಮಟ್ಟಹಾಕುವುದಾಗಿ ಪಾಕಿಸ್ತಾನವು ಬೆದರಿಕೆ ಹಾಗೂ ಆಕ್ರಮಣಕಾರಿ ಹೇಳಿಕೆಗಳನ್ನು ನೀಡಿತ್ತು. ಆದರೆ ಅದಾದ ಮರುದಿನವೇ ಪಾಕಿಸ್ತಾನವು ಮಾತುಕತೆಗೆ ಮುಂದಾಗಿದ್ದು ತಮಗೆ ತಂದ ಅತ್ಯಂತ ದೊಡ್ಡ ಅಚ್ಚರಿಯಾಗಿತ್ತು ಎಂದು ಹೇಳಿದರು.
ಭಾರತವು ತನ್ನ ಮಿಲಿಟರಿ ದಾಳಿಯ ತೀವ್ರತೆಯನ್ನು ಹೆಚ್ಚಿಸಿದ ಕೆಲವೇ ಗಂಟೆಗಳಲ್ಲಿ, ಬೆಳಿಗ್ಗೆ ಸುಮಾರು 8 ಗಂಟೆಗಳ ಒಳಗಾಗಿ ಪಾಕಿಸ್ತಾನವು ದೂರವಾಣಿ ಕರೆ ಮಾಡಿತ್ತು. ಆ ವೇಳೆಗೆ ಭಾರತವು ತಾನು ಯೋಜಿಸಿದ್ದ ಒಟ್ಟು ದಾಳಿಯ ಅರ್ಧದಷ್ಟನ್ನೂ ಪೂರ್ಣಗೊಳಿಸಿರಲಿಲ್ಲ. ಹೀಗಾಗಿಯೇ ಬೆಳಿಗ್ಗೆ 9:30ಕ್ಕೆ ಬಂದ ಕದನ ವಿರಾಮದ ಆಫರ್ ಅನ್ನು ತಕ್ಷಣ ಒಪ್ಪಿಕೊಳ್ಳದೆ, ಯುದ್ಧದ ಗೆಲುವು ಅತ್ಯಂತ ನಿರ್ಣಾಯಕವಾಗಿರಬೇಕು ಎಂಬ ಕಾರಣಕ್ಕೆ ಮಧ್ಯಾಹ್ನದವರೆಗೆ ಕಾರ್ಯಾಚರಣೆಯನ್ನು ಸಾಗಿಸಲಾಯಿತು ಎಂದು ತಿಳಿಸಿದರು.
ಪಾಕಿಸ್ತಾನ ಕದನ ವಿರಾಮ ಕೋರಿದ್ದೇಕೆ..?
ಮೇ 9ರ ರಾತ್ರಿಯಿಂದ ಮೇ 10ರ ಮಧ್ಯಾಹ್ನದವರೆಗೆ ಭಾರತೀಯ ಪಡೆಗಳು ಪಾಕಿಸ್ತಾನದ 11 ಪ್ರಮುಖ ಮಿಲಿಟರಿ ಮತ್ತು ವೈಮಾನಿಕ ನೆಲೆಗಳ (Airbases) ಮೇಲೆ ನಿರಂತರ ದಾಳಿ ನಡೆಸಿದವು. ಶತ್ರುಪಡೆಯ ವಿಮಾನ ಹ್ಯಾಂಗರ್‌ಗಳು, ರಾಡಾರ್ ವ್ಯವಸ್ಥೆಗಳು ಮತ್ತು ಯುದ್ಧ ವಿಮಾನಗಳನ್ನು ಗುರಿಯಾಗಿಸಿ ಈ ನಿಖರ ದಾಳಿ ಮಾಡಲಾಗಿತ್ತು. ಪಾಕಿಸ್ತಾನದ ಯಾವುದೇ ಮಿಲಿಟರಿ ನೆಲೆಯೂ ತನ್ನ ವ್ಯಾಪ್ತಿಯಿಂದ ಹೊರಗಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಲು ಭಾರತ ಹೆಚ್ಚುವರಿ ಸರಣಿ ದಾಳಿಗಳನ್ನು ಯೋಜಿಸಿ ನಡೆಸಿತು.
ತಾನು ಈಗಾಗಲೇ ತಲುಪಬೇಕಾದ ಗುರಿಯನ್ನು ತಲುಪಿದ್ದೇನೆ ಎಂಬ ಭ್ರಮೆ ಒಂದೆಡೆಯಾದರೆ, ಭಾರತೀಯ ವಾಯುಪಡೆಯ ಭೀಕರ ದಾಳಿಯಿಂದಾದ ಹಾನಿಯನ್ನು ಕಣ್ಣಾರೆ ಕಂಡ ಪಾಕಿಸ್ತಾನ, ಸಂಘರ್ಷ ಮುಂದುವರಿದರೆ ತನಗೆ ಇನ್ನಷ್ಟು ವೇಗದ ಮತ್ತು ಭಾರಿ ಸೋಲು ಖಚಿತ ಎಂಬುದನ್ನು ಅರಿತು ಕಾರ್ಯಾಚರಣೆ ಪ್ರಗತಿಯಲ್ಲಿರುವಾಗಲೇ ಹಾಟ್‌ಲೈನ್ ಮೂಲಕ ಕದನ ವಿರಾಮಕ್ಕೆ ಸಂಪರ್ಕಿಸಿತು.
ಭಾರತೀಯ ಪಡೆಗಳ ದಾಳಿಯಿಂದ ರಾವಲ್ಪಿಂಡಿಯ ನೂರ್ ಖಾನ್, ರಹೀಮ್ ಯಾರ್ ಖಾನ್ ಹಾಗೂ ಭೋಲಾರಿ ನೆಲೆಗಳು ತೀವ್ರವಾಗಿ ಹಾನಿಗೊಳಗಾಗಿದ್ದು, ಅವುಗಳನ್ನು ಇಂದಿಗೂ ದುರಸ್ತಿ ಮಾಡಲು ಸಾಧ್ಯವಾಗಿಲ್ಲ. ಪಾಕ್‌ನ ಪ್ರತಿಯೊಂದು ಮಿಲಿಟರಿ ನೆಲೆಯೂ ತಮ್ಮ ತಲುಪುವಿಕೆಯ ವ್ಯಾಪ್ತಿಯಲ್ಲಿದೆ ಎಂಬ ಕಾರ್ಯತಂತ್ರದ ಸಂದೇಶ ನೀಡುವುದು ಭಾರತದ ಮುಖ್ಯ ಉದ್ದೇಶವಾಗಿತ್ತು ಎಂದು ಸಿಡಿಎಸ್ ವಿವರಿಸಿದ್ದಾರೆ.
ಏನಿದು ಆಪರೇಷನ್ ಸಿಂಧೂರ...?
2025ರ ಮೇ 7ರಂದು ಪಹಲ್ಗಾಮ್‌ನಲ್ಲಿ 25 ಪ್ರವಾಸಿಗರ ಪ್ರಾಣ ತೆಗೆದ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ ಆರಂಭಿಸಿತ್ತು. ಮೊದಲ ಹಂತದಲ್ಲಿ ಪಾಕಿಸ್ತಾನದಲ್ಲಿದ್ದ ಜೈಷ್-ಎ-ಮೊಹಮ್ಮದ್ ಹಾಗೂ ಲಷ್ಕರ್-ಎ-ತೊಯ್ಬಾ ಸಂಘಟನೆಗಳ 9 ಉಗ್ರ ತರಬೇತಿ ಶಿಬಿರಗಳನ್ನು ಧ್ವಂಸಗೊಳಿಸಲಾಯಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಜಮ್ಮು-ಕಾಶ್ಮೀರ, ಪಂಜಾಬ್ ಮತ್ತು ರಾಜಸ್ಥಾನ ಗಡಿಗಳಲ್ಲಿ ನಡೆಸಲು ಯತ್ನಿಸಿದ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ಭಾರತ ಯಶಸ್ವಿಯಾಗಿ ತಡೆಯಿತು.
ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಹೆಚ್ಚಿನ ಬೆದರಿಕೆಗಳನ್ನು ಗಾಳಿಯಲ್ಲೇ ಹೊಡೆದುರುಳಿಸಿತು. ತದನಂತರ ಭಾರತವು ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸಿ, ಆಪರೇಷನ್ ಸಿಂಧೂರವನ್ನು ಮುಂದಿನ ಹಂತವಾಗಿ ಪಾಕಿಸ್ತಾನದ ಪ್ರಮುಖ ಮಿಲಿಟರಿ ನೆಲೆಗಳನ್ನೇ ಗುರಿಯಾಗಿಸಿ ಧ್ವಂಸಗೊಳಿಸಿತು(ಏಜೆನ್ಸೀಸ್).