ಪಾಕಿಸ್ತಾನ ಸಚಿವ  
ದೇಶ

ಆ ಕೈಗಳನ್ನು ಕತ್ತರಿಸಿ ಹಾಕ್ತೀವಿ! ಸಿಂಧೂ ಜಲ ಒಪ್ಪಂದ ವಿವಾದಕ್ಕೆ ಪಾಕ್​ ಸಚಿವ ಕಿಡಿ, ಭಾರತಕ್ಕೆ ಎಚ್ಚರಿಕೆ | Indus Water Treaty

ಪ್ರಮುಖ ಮುಖ್ಯಾಂಶಗಳು

  • ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಪಾಕಿಸ್ತಾನ ನರಿಬುದ್ಧಿ
  • ನೀರು ಬಿಡುವುದಿಲ್ಲ ಎಂಬ ಮಾತಿಗೆ ಕೈಕತ್ತರಿಸಿ ಹಾಕ್ತೀವಿ ಎಂದ ಪಾಕ್​ ಸಚಿವ
  • ಕೈಲಾಗದ ಪಾಕ್​ ಸಚಿವನ ವಿವಾದಾತ್ಮಕ ಮಾತಿಗೆ ಭಾರತೀಯರು ಛೀಮಾರಿ
ಕರಾಚಿ: ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಪಾಕಿಸ್ತಾನ ತನ್ನ ನರಿಬುದ್ಧಿ ತೋರಿದ್ದು, ಇಸ್ಲಾಮಾಬಾದ್​ನಿಂದ ನೀರು ಕಿತ್ತುಕೊಳ್ಳಲು ಬಂದರೆ ಅವರ ಕೈಗಳನ್ನು ಕತ್ತರಿಸುವುದಾಗಿ ಪಾಕ್​ ಸಚಿವ (Pakistan Minister) ನಾಲಿಗೆ ಹರಿಬಿಟ್ಟಿರುವುದು ಸದ್ಯ ಭಾರತೀಯರ ಪಿತ್ತವನ್ನು ನೆತ್ತಿಗೇರಿಸಿದೆ.
ಪಹಲ್ಗಾಮ್​ ಉಗ್ರರ ದಾಳಿಯ ವಿವಾದದ ಬೆನ್ನಲ್ಲೇ ಪಾಕಿಸ್ತಾನ ಜೊತೆಗಿನ ಎಲ್ಲ ರಾಷ್ಟ್ರೀಯ ವ್ಯವಹಾರಗಳನ್ನು ಕಡಿದುಕೊಂಡ ಭಾರತ ಕಂಡು ಮೈಪರಚಿಕೊಳ್ಳುವ ಕೈಲಾಗದ ವೈರಿ ರಾಷ್ಟ್ರ, ಈಗ ಭಾರತಕ್ಕೆ ನೇರ ಸವಾಲು ಹಾಕುವ ಮೂಲಕ ಎಚ್ಚರಿಕೆಯ ಸಂದೇಶವನ್ನು ಕೊಟ್ಟಿದೆ. ಪ್ರಧಾನಿ ಶಹಬಾಜ್ ಷರೀಫ್ ಸರ್ಕಾರದಲ್ಲಿ ಹವಾಮಾನ ಬದಲಾವಣೆ ಸಚಿವರಾಗಿರುವ ಮುಸಾದಿಕ್ ಮಲಿಕ್, ಸಿಂಧೂ ಜಲ ಒಪ್ಪಂದದಡಿಯಲ್ಲಿ ಪಾಕಿಸ್ತಾನದ ಪಾಲಿನ ಮೇಲೆ ಕಣ್ಣಿಟ್ಟವರ ಕೈಗಳನ್ನು ಕತ್ತರಿಸುವುದಾಗಿ ಹೇಳಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ದಶಕಗಳಷ್ಟು ಹಳೆಯದಾದ ಸಿಂಧು ನೀರಿನ ಒಪ್ಪಂದದ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನಗೊಂಡಿರುವ ಸಮಯದಲ್ಲೇ ಮಲಿಕ್ ಈ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. 2025ರಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಕೇಂದ್ರ ಸರ್ಕಾರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತು. ಇದರಿಂದ ಪಾಕಿಸ್ತಾನದ ಬುಡಕ್ಕೆ ಬೆಂಕಿ ಬಿದ್ದಿದ್ದು, ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಅವರ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಮುಸಾದಿಕ್ ಮಲಿಕ್ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.
ಡಾನ್ ವರದಿ ಪ್ರಕಾರ, “ಯಾರಾದರೂ ನಮಗೆ ಹಂಚಿಕೆಯಾಗುವ ನೀರನ್ನು ಮುಟ್ಟಿದರೆ, ಆ ಕೈಗಳನ್ನು ಕತ್ತರಿಸುತ್ತೇವೆ. ನೆರೆಯ ದೇಶದ ಪ್ರಧಾನಿಯೊಬ್ಬರು ಪಾಕಿಸ್ತಾನಕ್ಕೆ ಒಂದೇ ಒಂದು ಹನಿ ನೀರನ್ನು ಬಿಡೋದಿಲ್ಲ ಅಂತ ಹೇಳ್ತಾರೆ. ಒಪ್ಪಂದದ ಪ್ರಕಾರ, ಪಾಕ್​ ತನ್ನ ನೀರನ್ನು ರಕ್ಷಿಸಲು ಬದ್ಧವಾಗಿದೆ ಮತ್ತು ಭಾರತವು ನೀರಿನ ಹರಿವನ್ನು ತಡೆಯಲು ಬಿಡುವುದಿಲ್ಲ ಎಂದು ಹೇಳುತ್ತೆ. ನಮ್ಮ ಜನರು ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಒಪ್ಪಂದದ ಮೂಲಕ ನೀರಿನ ಹಕ್ಕನ್ನು ಹೊಂದಿದ್ದಾರೆ. ಈ ಹಿಂದೆಯೇ ಇದನ್ನು ಎರಡೂ ದೇಶಗಳು ಅಂಗೀಕರಿಸಿವೆ. ಅದು ಇಂದಿಗೂ ಜಾರಿಯಲ್ಲಿದೆ" ಎಂದರು.

ಅಷ್ಟಕ್ಕೂ ಸಿಂಧು ಒಪ್ಪಂದಲ್ಲಿ ಭಾರತ ನಿಲುವೇನು?

ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ, ಪಾಕಿಸ್ತಾನದ ಸಚಿವರು ತಮ್ಮ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲಿಪಶು ದೇಶವೆಂದು ಬಿಂಬಿಸಿ, ತಮ್ಮದು ಪಾಪದ ದೇಶ ಎಂದು ತೋರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದಾಗ್ಯೂ, ಇಲ್ಲಿ ಸತ್ಯ ಸಂಗತಿ ಏನೆಂದರೆ, ಭಾರತ ಸಿಂಧೂ ನದಿ ನೀರಿನ ಹರಿವನ್ನು ಸಂಪೂರ್ಣವಾಗಿ ಬಂದ್​ ಮಾಡಿಲ್ಲ. ಸಿಂಧೂ ನದಿ ಮತ್ತು ಅದರ ಉಪನದಿಗಳ ಹರಿವು ಈಗಲೂ ಎಂದಿನಂತೆ ಪಾಕಿಸ್ತಾನದ ಕಡೆಗೆ ಹರಿಯುತ್ತಿದೆ.
ಸಿಂಧೂ ಜಲ ಒಪ್ಪಂದದಡಿಯಲ್ಲಿ ಪಾಕಿಸ್ತಾನಕ್ಕೆ ಒದಗಿಸಲಾದ ಬೆಂಬಲ ವ್ಯವಸ್ಥೆಯನ್ನು ಮಾತ್ರ ಭಾರತ ನಿಲ್ಲಿಸಿದೆ. ಸಾಮಾನ್ಯವಾಗಿ, ನದಿ ನೀರಿನ ಹರಿವು, ಅಣೆಕಟ್ಟುಗಳ ನಿರ್ಮಾಣ, ಯೋಜನೆಗಳು ಮತ್ತು ನೀರಿನ ನಿರ್ವಹಣೆಗೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವೆ ನಿರಂತರ ಸಂವಹನ ಮತ್ತು ಚರ್ಚೆಗಳು ನಡೆಯುತ್ತಿದ್ದವು. ಈಗ ಭಾರತವು ಈ ಚರ್ಚೆಗಳು ಮತ್ತು ಸಂವಹನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಟ್​ ಮಾಡಿದೆ. ಇದೇ ಈಗ ಪಾಕಿಸ್ತಾನದ ಕಿಚ್ಚಿಗೆ ಕಾರಣವಾಗಿರುವುದು.

ಏನಿದು ಸಿಂಧೂ ಜಲ ಒಪ್ಪಂದ?

ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರಿನ ಹಂಚಿಕೆಗಾಗಿ ಭಾರತ ಮತ್ತು ಪಾಕಿಸ್ತಾನದ 1960ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿತು. ಈ ಐತಿಹಾಸಿಕ ಒಪ್ಪಂದಕ್ಕೆ ವಿಶ್ವಬ್ಯಾಂಕ್ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿತು. ಇದರ ಅನ್ವಯ, ಯಾವ ದೇಶವು ಯಾವ ನದಿಯ ನೀರನ್ನು ಬಳಸಬೇಕು ಮತ್ತು ಅದರ ಪಾಲು ಎಷ್ಟು ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸಲಾಯಿತು. ಈ ಒಪ್ಪಂದವು 1960ರಿಂದ ಎರಡೂ ದೇಶಗಳ ನಡುವಿನ ನೀರಿನ ಹಂಚಿಕೆಯನ್ನು ನಿಯಂತ್ರಿಸುತ್ತಿದೆ. ಆದರೆ, ಪಾಕ್​ನ ಉಗ್ರ ಕೃತ್ಯಗಳ ಹಿನ್ನೆಲೆಯಲ್ಲಿ ಭಾರತ ತೆಗೆದುಕೊಂಡ ಕಠಿಣ ನಿರ್ಧಾರದಿಂದ ಪಾಕಿಸ್ತಾನ ತತ್ತರಿಸಿದ್ದು, ಭಾರತ ಎದುರು ಮಂಡಿಯೂರಿ ನೀರಿಗೆ ಬೇಡುವಂತ ಪರಿಸ್ಥಿತಿಗೆ ತಲುಪಿದೆ,(ಏಜೆನ್ಸೀಸ್).