ಬಾಂಗ್ಲಾ ಎಕ್ಸಿಟ್ ಬೆನ್ನಲ್ಲೇ ಪಾಕ್ ಕಿರಿಕ್; ಐಸಿಸಿ ವಿರುದ್ಧ ಮೊಹ್ಸಿನ್ ನಖ್ವಿ ಗರಂ: ವಿಶ್ವಕಪ್ ಬಹಿಷ್ಕಾರದ ಎಚ್ಚರಿಕೆ 
ದೇಶ

ಬಾಂಗ್ಲಾ ಎಕ್ಸಿಟ್ ಬೆನ್ನಲ್ಲೇ ಪಾಕ್ ಕಿರಿಕ್; ಐಸಿಸಿ ವಿರುದ್ಧ ಮೊಹ್ಸಿನ್ ನಖ್ವಿ ಗರಂ: ವಿಶ್ವಕಪ್ ಬಹಿಷ್ಕಾರದ ಎಚ್ಚರಿಕೆ | Mohsin Naqvi

ಇಸ್ಲಾಮಾಬಾದ್: 2026ರ ಟಿ20 ವಿಶ್ವಕಪ್ ಆಯೋಜನೆಯ ವಿಷಯದಲ್ಲಿ ಕ್ರಿಕೆಟ್ ಜಗತ್ತು ಈಗ ಎರಡು ಹೋಳಾಗಿದೆ. ಭಾರತದಲ್ಲಿ ನಡೆಯಲಿರುವ ಈ ಟೂರ್ನಿಯಿಂದ ಬಾಂಗ್ಲಾದೇಶ ಹಿಂದೆ ಸರಿದ ಬೆನ್ನಲ್ಲೇ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ(Mohsin Naqvi) ಐಸಿಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 
ಪಾಕಿಸ್ತಾನದ ಭಾಗವಹಿಸುವಿಕೆಯು ಸಂಪೂರ್ಣವಾಗಿ ಸರ್ಕಾರದ ತೀರ್ಮಾನದ ಮೇಲೆ ಅವಲಂಬಿತವಾಗಿದೆ ಎಂದು ಹೇಳುವ ಮೂಲಕ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

ಮೊಹ್ಸಿನ್ ನಖ್ವಿ ಹೇಳಿದ್ದೇನು..?

ಬಾಂಗ್ಲಾದೇಶದ ನಿಲುವನ್ನು ಬೆಂಬಲಿಸಿದ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ನೆರೆರಾಷ್ಟ್ರಗಳ ನ್ಯಾಯಸಮ್ಮತವಾದ ಕಳವಳಗಳನ್ನು ಐಸಿಸಿ ಕಡೆಗಣಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಬಾಂಗ್ಲಾದೇಶವನ್ನು ಐಸಿಸಿ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಒಂದು ಕ್ರಿಕೆಟ್ ಮಂಡಳಿಯು ಭದ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನಖ್ವಿ ಹೇಳಿದ್ದಾರೆ. ಅಲ್ಲದೆ, 2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಆಡಬೇಕೇ ಬೇಡವೇ ಎಂಬುದು ನಮ್ಮ ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ. ನಮ್ಮ ನೆರೆಯ ರಾಷ್ಟ್ರಗಳಿಗೆ ಸುರಕ್ಷಿತ ಎನಿಸದ ಕಡೆ ನಾವು ಆಡುವಂತೆ ಯಾರೂ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ನಖ್ವಿ ಗುಡುಗಿದ್ದಾರೆ.

ಬಾಂಗ್ಲಾದೇಶದ ದಿಢೀರ್ ನಿರ್ಧಾರಕ್ಕೆ ಕಾರಣವೇನು..?

ಐಪಿಎಲ್‌ನಲ್ಲಿ ಕೆಕೆಆರ್ ತಂಡದಿಂದ ಮುಸ್ತಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡಿದ ನಂತರ ಉಂಟಾದ ರಾಜತಾಂತ್ರಿಕ ಬಿಕ್ಕಟ್ಟು ಮತ್ತು ಭದ್ರತಾ ಕಾರಣಗಳನ್ನು ನೀಡಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಭಾರತಕ್ಕೆ ತಂಡವನ್ನು ಕಳುಹಿಸದಿರಲು ನಿರ್ಧರಿಸಿದೆ. ಟೂರ್ನಿಯ ವೇದಿಕೆಯನ್ನು ಭಾರತದಿಂದ ಶ್ರೀಲಂಕಾಕ್ಕೆ ಬದಲಾಯಿಸುವಂತೆ ಬಾಂಗ್ಲಾದೇಶವು ಐಸಿಸಿಗೆ ಅಧಿಕೃತವಾಗಿ ಮನವಿ ಮಾಡಿದೆ.

ಐಸಿಸಿಗೆ ಎದುರಾದ ಇಕ್ಕಟ್ಟು

ಏಷ್ಯಾದ ಇಬ್ಬರು ಪ್ರಮುಖ ಸದಸ್ಯರು ಭಾರತದ ಆತಿಥ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು ಐಸಿಸಿಗೆ ತಲೆನೋವಾಗಿ ಪರಿಣಮಿಸಿದೆ.

ಭದ್ರತಾ ಬಿಕ್ಕಟ್ಟು

ಭಾರತವು ತನ್ನ ಭದ್ರತಾ ವ್ಯವಸ್ಥೆ ವಿಶ್ವದರ್ಜೆಯದ್ದು ಎಂದು ವಾದಿಸುತ್ತಿದ್ದರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮಾತ್ರ ಪಟ್ಟು ಹಿಡಿದಿವೆ.

ಆರ್ಥಿಕ ಹೊಡೆತ

ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ದೊಡ್ಡ ತಂಡಗಳು ಟೂರ್ನಿಯಿಂದ ಹೊರಗುಳಿದರೆ ಐಸಿಸಿಗೆ ಭಾರಿ ಆರ್ಥಿಕ ನಷ್ಟವಾಗುವ ಸಾಧ್ಯತೆಯಿದೆ.

ಮುಂದೇನು?

ಈ ಬೆಳವಣಿಗೆಯಿಂದಾಗಿ ಐಸಿಸಿ ಈಗ ತುರ್ತು ಸಭೆಯನ್ನು ಕರೆದಿದೆ. ವಿಶ್ವಕಪ್ ಶ್ರೀಲಂಕಾಕ್ಕೆ ಸ್ಥಳಾಂತರವಾಗುತ್ತದೆಯೇ ಅಥವಾ ಭಾರತದಲ್ಲೇ ಅರೆಬರೆ ತಂಡಗಳೊಂದಿಗೆ ನಡೆಯುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ,(ಏಜೆನ್ಸೀಸ್).