Manoj Katiyar | ವೆಸ್ಟರ್ನ್ ಕಮಾಂಡ್‌ನ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮನೋಜ್ ಕಟಿಯಾರ್ 
ದೇಶ

ನೇರ ಯುದ್ಧ ಮಾಡಲು ಪಾಕ್‌ಗೆ ತಾಕತ್ತಿಲ್ಲ...ಈ ಬಾರಿ ಹೋರಾಟ ಸೀಮಿತವಾಗಿರಲ್ಲ ಎಂದ ಲೆಫ್ಟಿನೆಂಟ್ ಜನರಲ್ ಕಟಿಯಾರ್ | Manoj Katiyar

ದೆಹಲಿ: ಭಾರತ ಶಾಂತಿಗಾಗಿ ಅನೇಕ ಸಲ ಪ್ರಯತ್ನಿಸಿದರೂ ಪಾಕಿಸ್ತಾನ ಯುದ್ಧದಂತಹ ವಾತಾವರಣವನ್ನು ಸೃಷ್ಟಿಸುತ್ತಲೇ ಇದ್ದು, ನಮ್ಮೊಂದಿಗೆ ಸ್ನೇಹ ಸಂಬಂಧವನ್ನು ಹಂಚಿಕೊಳ್ಳಲು ಶತೃ ರಾಷ್ಟ್ರಕ್ಕೆ ಇಷ್ಟವಿಲ್ಲ, ಆದ್ದರಿಂದಲೇ ಉದ್ದೇಶಪೂರ್ವಕವಾಗಿ ಉದ್ವಿಗ್ನತೆಯನ್ನು ಜೀವಂತವಾಗಿರಿಸಿದೆ ಎಂದು ವೆಸ್ಟರ್ನ್ ಕಮಾಂಡ್‌ನ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮನೋಜ್ ಕಟಿಯಾರ್ (Manoj Katiyar) ಹೇಳಿದ್ದಾರೆ.
ಮಾಣೆಕ್ಷಾ ಕೇಂದ್ರದಲ್ಲಿ ನಡೆದ ವೆಸ್ಟರ್ನ್ ಕಮಾಂಡ್ ಇನ್ವೆಸ್ಟಿಚರ್ ಸಮಾರಂಭದಲ್ಲಿ ಮಾತನಾಡಿದ ಕಟಿಯಾರ್​, ಪಶ್ಚಿಮ ಭಾಗದಲ್ಲಿ ಸಂಘರ್ಷದ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಸಿದರು.
ಅವಿರತ ಪ್ರಯತ್ನಗಳ ಹೊರತಾಗಿಯೂ, ಪಾಕ್​ ಯುದ್ಧದಂತಹ ವಾತಾವರಣವನ್ನು ಕಾಯ್ದುಕೊಳ್ಳುತ್ತಲೇ ಸಾಗಿದೆ. ಶಾಂತಿಯು ಶತೃರಾಷ್ಟ್ರದ ಪ್ರಸ್ತುತತೆಯನ್ನು ಕಡಿಮೆ ಮಾಡುತ್ತದೆ ಎನ್ನುವ ಕಾರಣಕ್ಕೆ ಅವರು ನಮ್ಮ ಸ್ನೇಹವನ್ನು ಬಯಸುವುದಿಲ್ಲ, ಇದಷ್ಟೆ ಅಲ್ಲದೇ, ಭಾರತವನ್ನು ಎದುರಿಸಲು ಪಾಕಿಸ್ತಾನಕ್ಕೆ ಧೈರ್ಯ ಮತ್ತು ಮಿಲಿಟರಿ ಸಾಮರ್ಥ್ಯ ಎರಡರ ಕೊರತೆಯಿದೆ, ಆದ್ದರಿಂದ ಪ್ರಾಕ್ಸಿ ಯುದ್ಧವನ್ನು ಅವಲಂಬಿಸಿದೆ ಎಂದು ಹೇಳಿದರು.

ಭಯೋತ್ಪಾದನೆಯೇ ಸಾಧನ..

ಪಾಕಿಸ್ತಾನದ ದೀರ್ಘಕಾಲೀನ ಕಾರ್ಯತಂತ್ರವನ್ನು ಉಲ್ಲೇಖಿಸಿದ ಲೆಫ್ಟಿನೆಂಟ್ ಜನರಲ್ ಕಟಿಯಾರ್, ಭಯೋತ್ಪಾದನೆ ಆ ದೇಶದ ಏಕೈಕ ಸಾಧನವಾಗಿದ್ದು, ಧೈರ್ಯ ಮತ್ತು ಶಕ್ತಿ ಇಲ್ಲ. ಭಯೋತ್ಪಾದಕ ಪಿತೂರಿಗಳನ್ನು ಬಳಸಿಕೊಂಡು ಭಾರತವನ್ನು ರಕ್ತಸ್ರಾವಗೊಳಿಸುವುದು ಅದರ ನೀತಿಯಾಗಿದೆ ಎಂದು ಕಿಡಿಕಾರಿದರು. ಪಹಲ್ಗಾಮ್ ದಾಳಿ ಸೇರಿದಂತೆ ಇತ್ತೀಚಿನ ಭಯೋತ್ಪಾದಕ ಘಟನೆಗಳನ್ನು ಉಲ್ಲೇಖಿಸಿದ ಕಟಿಯಾರ್​, ಇಂತಹ ಕೃತ್ಯಗಳು ಭಾರತವನ್ನು ಅಸ್ಥಿರಗೊಳಿಸುವ ಪಾಕಿಸ್ತಾನದ ಲೆಕ್ಕಾಚಾರದ ಯೋಜನೆಯ ಭಾಗವಾಗಿದೆ ಎಂದರು. ಆಪರೇಷನ್​ ಸಿಂಧೂರ ಕಾರ್ಯಾಚರಣೆ ಸಮಯದಲ್ಲಿ ಸೈನಿಕರ ಅಸಾಧಾರಣ ಸಾಧನೆಯನ್ನು ಪಶ್ಚಿಮ ಕಮಾಂಡ್ ಮುಖ್ಯಸ್ಥರು ಅಭಿನಂದಿಸಿದ್ದಾರೆ.
ನಾವು ಪಾಕಿಸ್ತಾನಕ್ಕೆ ಕಠಿಣ ಪಾಠ ಕಲಿಸಿದ್ದೇವೆ. ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳು, ಪೋಸ್ಟ್‌ಗಳು ಮತ್ತು ಗುಂಪುಗಳು ಸಂಪೂರ್ಣವಾಗಿ ನಾಶವಾದವು ಎಂದಿರುವ ಕಟಿಯಾರ್​, ಈ ಹಿನ್ನಡೆಯಿಂದ ಪಾಕ್​ ಪಾಠ ಕಲಿಯುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು. ಈ ಬಾರಿಯ ಹೋರಾಟವು ಸೀಮಿತವಾಗಿರುವುದಿಲ್ಲ, ಅದು ಪ್ರತಿಯೊಂದು ರಂಗದಲ್ಲೂ ಇರುತ್ತದೆ, ಪಾಕಿಸ್ತಾನವು ತನ್ನ ಆಂತರಿಕ ಮಿಲಿಟರಿ ಮತ್ತು ರಾಜಕೀಯ ಬಿಕ್ಕಟ್ಟುಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಹೊಸ ದುಸ್ಸಾಹಸಗಳಿಗೆ ಪ್ರಯತ್ನಿಸುವ ಸಾಧ್ಯತೆ ಇದೆ ಎಂದರು.
ಧರ್ಮದ ಹೆಸರಿನಲ್ಲಿ ನಮ್ಮ ದೇಶವನ್ನು ವಿಭಜಿಸುವುದು ಶತ್ರುಗಳ ಪಿತೂರಿಗಳ ಭಾಗವಾಗಿದ್ದು, ಆ ದೇಶದ ನಾಯಕರು ಇನ್ನೂ ಎರಡು ರಾಷ್ಟ್ರಗಳ ಸಿದ್ಧಾಂತದ ಭಾಷೆಯನ್ನು ಮಾತನಾಡುತ್ತಾರೆ, ಅಂತಹ ಕುತಂತ್ರಗಳನ್ನು ಎದುರಿಸಲು ಜಾಗರೂಕತೆ ಮತ್ತು ರಾಷ್ಟ್ರೀಯ ಏಕತೆಯ ಅಗತ್ಯವನ್ನು ಸಹ ಕಟಿಯಾರ್ ಒತ್ತಿ ಹೇಳಿದರು.
ನಮ್ಮ ಸೇನೆಯು ದೇಶದ ಪ್ರತಿಯೊಂದು ಮೂಲೆಯಿಂದಲೂ, ಪ್ರತಿಯೊಂದು ಧರ್ಮ ಮತ್ತು ಜಾತಿಯಿಂದಲೂ ಸೈನಿಕರನ್ನು ಹೊಂದಿದ್ದು. ನಾವು ವೈವಿಧ್ಯತೆಯಲ್ಲಿ ಏಕತೆಯ ಜೀವಂತ ಉದಾಹರಣೆಯಾಗಿದ್ದು, ಈ ಶಕ್ತಿಯನ್ನು ರಕ್ಷಿಸಬೇಕಿದೆ ಎಂದು ತಿಳಿಸಿದರು(ಏಜೆನ್ಸೀಸ್​).