Atal Bihari Vajpayee 
ದೇಶ

Atal Bihari Vajpayee | ನನ್ನನ್ನು ಮದುವೆಯಾಗುತ್ತೀರಾ ಎಂದಿದ್ದ ಪಾಕ್​ ಮಹಿಳೆ...ವರದಕ್ಷಿಣೆ ರೂಪದಲ್ಲಿ ಇಡೀ ಪಾಕಿಸ್ತಾನವನ್ನೇ ಕೇಳಿದ್ದರಂತೆ ಅಟಲ್​ಜಿ

ದೆಹಲಿ: ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹಾಸ್ಯಪ್ರಜ್ಞೆಯ ಬಗ್ಗೆ ಅನೇಕರಿಗೆ ಗೊತ್ತಿಲ್ಲ, ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವವರಿಗೆ ಮಾತ್ರ ಅಟಲ್​ಜಿ ನೈಜ ಸ್ವಭಾವ ಗೊತ್ತು. ಅಂತಹವರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಒಬ್ಬರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಅಟಲ್​ಜಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಕುತೂಹಲಕಾರಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.
ಪಾಕಿಸ್ತಾನ ಭೇಟಿಯಲ್ಲಿದ್ದ ವಾಜಪೇಯಿ ಅವರ ಭಾಷಣದಿಂದ ಪ್ರಭಾವಿತರಾದ ಅವಿವಾಹಿತ ಪಾಕಿಸ್ತಾನಿ ಮಹಿಳೆಯೊಬ್ಬರು, ಅಟಲ್​ಜಿ ಮುಂದೆ ವಿವಾಹದ ಪ್ರಸ್ತಾಪವನ್ನು ಇಟ್ಟರು ಎಂದು ರಾಜನಾಥ್ ಸಿಂಗ್ ನೆನಪಿಸಿಕೊಂಡಿದ್ದು, ವಾಜಪೇಯಿ ಅವರನ್ನು ನೀವು ನನ್ನನ್ನು ಮದುವೆಯಾಗುತ್ತೀರಾ, ಬದಲಾಗಿ ಕಾಶ್ಮೀರವನ್ನು ನೀಡುತ್ತೀರಾ ಎಂದು ಪ್ರಶ್ನಿಸುತ್ತಾರೆ.
ಮಾತಿನಲ್ಲಿ ತುಂಬಾ ಚುರುಕಾಗಿದ್ದ ವಾಜಪೇಯಿ ಅವರು ಆ ಮಹಿಳೆಗೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧನಿದ್ದೇನೆ, ಆದರೆ ವರದಕ್ಷಿಣೆಯಾಗಿ ನೀವು ಇಡೀ ಪಾಕಿಸ್ತಾನವನ್ನು ನೀಡಬೇಕು ಎನ್ನುವುದು ನನ್ನ ಬಯಕೆ ಎಂದು ಹೇಳಿದರು. ಈ ಸಮಯದಲ್ಲಿನ ಅಟಲ್​ಜಿ ಹಾಸ್ಯಪ್ರಜ್ಞೆ ಅದ್ಭುತವಾಗಿತ್ತು ಎಂದು ರಾಜನಾಥ್ ಸ್ಮರಿಸಿಕೊಂಡರು. ಆ ಪ್ರತಿಕ್ರಿಯೆಯು ವಾಜಪೇಯಿಯವರ ಹಾಸ್ಯಪ್ರಜ್ಞೆಯನ್ನು ಮಾತ್ರವಲ್ಲದೆ, ಕಾಶ್ಮೀರದ ಬಗ್ಗೆ ಅಚಲವಾದ ನಿಲುವನ್ನು ಕಾಯ್ದುಕೊಳ್ಳುವಾಗ ರಾಜತಾಂತ್ರಿಕತೆ, ಬುದ್ಧಿಶಕ್ತಿಯನ್ನು ಬೆರೆಸುವ ಅವರ ಸಾಮರ್ಥ್ಯವನ್ನೂ ಪ್ರತಿಬಿಂಬಿಸಿತು.
ರಾಜನಾಥ್ ಉಲ್ಲೇಖಿಸಿದ ಇನ್ನೊಂದು ಉದಾಹರಣೆಯಂದರೆ, ತುರ್ತು ಪರಿಸ್ಥಿತಿಯ ಸಮಯ. ವಾಜಪೇಯಿ ಬಂಧನದಲ್ಲಿದ್ದಾಗ ಅವರಿಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿದ್ದು, ಅವರನ್ನು ಏಮ್ಸ್‌ಗೆ ಕರೆದೊಯ್ಯಲಾಯಿತು ಎಂದು ಕೇಂದ್ರ ಸಚಿವರು ಹೇಳಿದರು. ಬಾಗಿದ್ದರಿಂದ ವೈದ್ಯರು ಬೆನ್ನು ನೋವು ಉಂಟಾಗಿದೆಯೇ ಎಂದು ಕೇಳುತ್ತಾರೆ. ಇದಕ್ಕೆ ಅಟಲ್​ಜಿ, "ಡಾಕ್ಟರ್ ಸಾಹಿಬ್, ಜೀವನದಲ್ಲಿ ಹೇಗೆ ಬಾಗಬೇಕೆಂದು ನನಗೆ ತಿಳಿದಿಲ್ಲ; ಬಹುಶಃ ನಾನು ಎಲ್ಲೋ ತಿರುಗಿರಬೇಕು ಎಂದು ನಗೆ ಚಟಾಕಿ ಹಾರಿಸಿದರು.
2006 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ನಡೆದ ಘಟನೆಯನ್ನು ವಿವರಿಸಿರುವ ರಾಜನಾಥ್ ಸಿಂಗ್​, ಯುಪಿಎ ಇರಾಕ್‌ನಲ್ಲಿ ಆಹಾರಕ್ಕಾಗಿ ತೈಲ ಒಪ್ಪಂದದ ವಿವಾದದಿಂದ ನಲುಗಿತು, ಇದರಿಂದಾಗಿ ಆಗಿನ ವಿದೇಶಾಂಗ ಸಚಿವ ನಟವರ್ ಸಿಂಗ್ ರಾಜೀನಾಮೆ ನೀಡಬೇಕಾಯಿತು. ಮಾಧ್ಯಮಗಳು ಅಟಲ್​ಜಿಯನ್ನು ಉದ್ದೇಶಿಸಿ ಕಾಂಗ್ರೆಸ್ ಪಕ್ಷವನ್ನು ರಕ್ಷಿಸಲು ನಟವರ್ ಸಿಂಗ್ ಅವರನ್ನು ಬಲಿಪಶುವನ್ನಾಗಿ ಮಾಡಲಾಗಿದೆಯೇ ಎಂದು ಪ್ರಶ್ನಿಸುತ್ತಾರೆ, ಇದಕ್ಕೆ ವಾಜಪೇಯಿ ಅವರು ನಾನು ಸಸ್ಯಾಹಾರಿ ಎಂದು ಉತ್ತರಿಸುತ್ತಾರೆ.
ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ವಾಜಪೇಯಿ ಅವರು, 2018 ರ ಆಗಸ್ಟ್ 16 ರಂದು ತಮ್ಮ 93 ನೇ ವಯಸ್ಸಿನಲ್ಲಿ ಮೂತ್ರಪಿಂಡದ ಸೋಂಕು ಮತ್ತು ಎದೆಯುರಿ ಸಮಸ್ಯೆಯಿಂದ ನಿಧನರಾದರು(ಏಜೆನ್ಸೀಸ್).