Suvendu Adhikari | ಸುವೇಂದು ಓಡಾಟದ ಮೇಲೆ ಪಾಕ್ ಉಗ್ರರ ಕಣ್ಣು!.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಅವರು ಪಾಕಿಸ್ತಾನ ಮೂಲದ ಹಿಟ್‌ಲಿಸ್ಟ್‌ನಲ್ಲಿದ್ದರು ಎಂಬ ಆಘಾತಕಾರಿ ವಿಚಾರವನ್ನು ಬಂಗಾಳದ ವಿಶೇಷ ಕಾರ್ಯಪಡೆ (STF) ಶನಿವಾರ ಬಹಿರಂಗಪಡಿಸಿದೆ. ಗಡಿಯಾಚೆಗಿನ ಉಗ್ರರ ಜಾಲದೊಂದಿಗೆ ನಂಟಿದೆ ಎಂಬ ಶಂಕೆಯ ಮೇರೆಗೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬರ್ದ್ಧಮಾನ್‌ನಲ್ಲಿ ಬಂಧಿತನಾಗಿರುವ ಹಮಿಮ್ ಮೊಂಡಾಲ್ ಎಂಬಾತನಿಗೆ, ಮುಖ್ಯಮಂತ್ರಿಯವರ ಭದ್ರತೆ ಸಡಿಲವಿರುವ ಸಮಯ ಹಾಗೂ ಅವರ ಓಡಾಟದ ಬಗ್ಗೆ ಮಾಹಿತಿ ಕಲೆಹಾಕುವಂತೆ ಪದೇ ಪದೇ ಸೂಚಿಸಲಾಗಿತ್ತು ಎಂದು ಎಸ್‌ಟಿಎಫ್ ತಿಳಿಸಿದೆ. ಅಷ್ಟೇ ಅಲ್ಲದೆ, ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಇತ್ತೀಚಿನ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಅಶಾಂತಿ ಸೃಷ್ಟಿಸಲು ಪೊಲೀಸ್ ಸಮವಸ್ತ್ರಗಳನ್ನು ಸಂಗ್ರಹಿಸುವಂತೆಯೂ ಆತನಿಗೆ ಸೂಚನೆ ನೀಡಲಾಗಿತ್ತು. ರಾಜ್ಯದ ಮುಖ್ಯಮಂತ್ರಿಗಳು ಉಗ್ರರ ಹಿಟ್‌ಲಿಸ್ಟ್‌ನಲ್ಲಿದ್ದರು ಎಂದು ಎಸ್‌ಟಿಎಫ್ ಐಜಿ ಗೌರವ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ಕುಖ್ಯಾತ ಶಾಹಜಾದ್ ಭಟ್ಟಿ ಗ್ಯಾಂಗ್‌ನೊಂದಿಗೆ ನಂಟು ಹೊಂದಿರುವ ಹ್ಯಾಂಡ್‌ಲರ್‌ಗಳ ಜೊತೆ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಮೊಂಡಾಲ್ ಹಾಗೂ ಆತನ ಗೆಳತಿ ಅರ್ಪಿತಾ ಸರ್ಕಾರ ಎಂಬುವಳನ್ನು ಬಂಧಿಸಲಾಗಿದೆ. ಹೌರಾದ ಹಿರಿಯ ರಾಜಕಾರಣಿಯೊಬ್ಬರ ಮಗನನ್ನು ಹನಿಟ್ರ್ಯಾಪ್ ಮಾಡಿ, ಅಪಹರಿಸಿ ಹಣ ವಸೂಲಿ ಮಾಡುವ ದೊಡ್ಡ ಸಂಚು ಇದರ ಹಿಂದೆ ಇತ್ತು. ಜಾರ್ಖಂಡ್‌ನ ಸಾಹಿಬ್‌ಗಂಜ್ ಮೂಲದ ಅರ್ಪಿತಾಳ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಈ ಜಾಲ ಪತ್ತೆಯಾಗಿದ್ದು, ಇವರಿಬ್ಬರು ಕಳೆದ ನಾಲ್ಕು ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದರು ಎನ್ನಲಾಗಿದೆ. ಆ ಮಂತ್ರಿಯ ಮಗನನ್ನು ಹನಿಟ್ರ್ಯಾಪ್ ಮಾಡಿ, ಬ್ಲ್ಯಾಕ್‌ಮೇಲ್ ಮಾಡುವ ನಿರ್ದಿಷ್ಟ ಯೋಜನೆಯನ್ನು ಪಾಕಿಸ್ತಾನ ಮೂಲದ ಹ್ಯಾಂಡ್‌ಗಳು ನಿರ್ದೇಶಿಸುತ್ತಿದ್ದವು ಎಂದು ಎಸ್‌ಟಿಎಫ್ ತಿಳಿಸಿದೆ.
ಮೊಂಡಾಲ್ ತನ್ನ ಮೊಬೈಲ್‌ನಲ್ಲಿ ರಾಣಾ, ಉಜೈರ್, ಅಬಿದ್ ಜಟ್ 333 ಮತ್ತು ಹಮಾದ್ ಮುಂತಾದ ಹೆಸರುಗಳನ್ನು ಬಳಸಿಕೊಂಡು ಪಾಕಿಸ್ತಾನಿ ಹ್ಯಾಂಡ್‌ಲರ್‌ಗಳ ಜೊತೆ ಚಾಟ್ ಮಾಡುತ್ತಿದ್ದನು. ಮೊದಲು ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಇವರು, ನಂತರ ವಾಟ್ಸ್‌ಆ್ಯಪ್, ಟೆಲಿಗ್ರಾಮ್ ಹಾಗೂ ಇತರೆ ರಹಸ್ಯ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಮಾತನಾಡುತ್ತಿದ್ದರು. ಉಗ್ರರ ಜೊತೆ ಸಂಪರ್ಕ ಸಾಧಿಸಲು ಬ್ರಿಟನ್ ಮತ್ತು ಮೆಕ್ಸಿಕೋ ದೇಶಗಳ ಸಿಮ್ ಕಾರ್ಡ್‌ಗಳನ್ನು ಬಳಸಲಾಗಿದೆ. ಈ ಮೂಲಕ ದೇಶದಲ್ಲಿ ಉಗ್ರರ ಸ್ಲೀಪರ್ ಸೆಲ್‌ಗಳನ್ನು ಬಲಪಡಿಸುವ ಹುನ್ನಾರ ನಡೆದಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಜುಲೈ 30 ಮತ್ತು 31ರ ಮಧ್ಯರಾತ್ರಿ ಮೊಂಡಾಲ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಅರ್ಪಿತಾಳನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ. ಇಬ್ಬರನ್ನೂ ಬರ್ದ್ಧಮಾನ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪಾಕಿಸ್ತಾನ ಮೂಲದ ಹ್ಯಾಂಡ್‌ಗಳೊಂದಿಗೆ ಅವರ ಸಂಪರ್ಕದ ಬಗ್ಗೆ ತನಿಖೆ ಮುಂದುವರಿದಿದೆ(ಏಜೆನ್ಸೀಸ್).