ಪಹಲ್ಗಾಮ್ ಉಗ್ರರ ದಾಳಿ ನಡೆದ ಸ್ಥಳ
ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ 26 ಮಂದಿ ಅಮಾಯಕ ಪ್ರವಾಸಿಗರನ್ನು ಬಲಿ ಪಡೆದ ಏ. 22ರ ಪಹಲ್ಗಾಮ್ ಉಗ್ರರ ದಾಳಿ(Pahalgam attack) ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು(ಡಿ. 15) ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದು, ಎಲ್‌ಇಟಿ, ಟಿಆರ್‌ಎಫ್ ಸೇರಿದಂತೆ ಏಳು ಆರೋಪಿಗಳ ಹೆಸರನ್ನು ಉಲ್ಲೇಖಿಸಿದೆ.
ಲಷ್ಕರ್-ಎ-ತೈಬಾ(ಎಲ್‌ಇಟಿ), ದಿ ರೆಸಿಸ್ಟೆನ್ಸ್ ಫ್ರಂಟ್(ಟಿಆರ್‌ಎಫ್) ಮತ್ತು ಪಾಕಿಸ್ತಾನಿ ನಿರ್ವಾಹಕ ಸೇರಿದಂತೆ ಏಳು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಪ್ರಕರಣದಲ್ಲಿ ಪಾಕಿಸ್ತಾನದ ಪಿತೂರಿ, ಆರೋಪಿಗಳ ಪಾತ್ರಗಳು ಹಾಗೂ ಪೋಷಕ ಸಾಕ್ಷ್ಯಗಳನ್ನು ವಿವರಿಸಲಾಗಿದೆ. ದಾಳಿಯನ್ನು ಯೋಜಿಸುವುದು, ಸುಗಮಗೊಳಿಸುವುದು ಮತ್ತು ಕಾರ್ಯಗತಗೊಳಿಸುವಲ್ಲಿ ನಿಷೇಧಿತ ಉಗ್ರ ಸಂಘಟನೆಗಳಾದ ಎಲ್‌ಇಟಿ/ಟಿಆರ್‌ಎಫ್ ಪ್ರಮುಖ ಪಾತ್ರ ವಹಿಸಿವೆ ಎಂದು ಉಲ್ಲೇಖಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಭಯೋತ್ಪಾದನಾ ನಿಗ್ರಹ ಸಂಸ್ಥೆ, ಜಮ್ಮುವಿನ ಎನ್ಐಎ ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಲಾದ 1,597 ಪುಟಗಳ ಆರೋಪಪಟ್ಟಿಯಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಸಾಜಿದ್ ಜಾಟ್ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ ಎಂದು ತಿಳಿಸಿದೆ.
ಜು. 29ರಂದು ಶ್ರೀನಗರದ ಡಚಿಗಮ್‌ನಲ್ಲಿ ನಡೆದ ಆಪರೇಷನ್ ಮಹಾದೇವ್ ದಾಳಿಯ ಸಂದರ್ಭದಲ್ಲಿ, ಸೇನೆಯಿಂದ ಕೊಲ್ಲಲ್ಪಟ್ಟ ಮೂವರು ಪಾಕಿಸ್ತಾನಿ ಭಯೋತ್ಪಾದಕರ ಹೆಸರನ್ನು ಆರೋಪಪಟ್ಟಿಯಲ್ಲಿ ಸೇರಿಸಲಾಗಿದ್ದು, ಮೂವರನ್ನು ಫೈಸಲ್ ಜಟ್ ಅಲಿಯಾಸ್ ಸುಲೇಮಾನ್ ಶಾ, ಹಬೀಬ್ ತಾಹಿರ್ ಅಲಿಯಾಸ್ ಜಿಬ್ರಾನ್ ಮತ್ತು ಹಮ್ಜಾ ಅಫ್ಘಾನಿ ಎಂದು ಗುರುತಿಸಲಾಗಿದೆ.
ಭಯೋತ್ಪಾದಕರಿಗೆ ಆಶ್ರಯ ನೀಡಿದ್ದಕ್ಕಾಗಿ ಜೂ. 22ರಂದು NIA ಬಂಧಿಸಿದ ಇಬ್ಬರು ಆರೋಪಿಗಳಾದ ಪರ್ವೈಜ್ ಅಹ್ಮದ್ ಮತ್ತು ಬಶೀರ್ ಅಹ್ಮದ್ ಜೋಥರ್ ಅವರ ಮೇಲೂ ಆರೋಪಪಟ್ಟಿ ಸಲ್ಲಿಸಿದ್ದು, ವಿಚಾರಣೆಯಲ್ಲಿ ಇಬ್ಬರು, ಮೂವರು ಶಸ್ತ್ರಸಜ್ಜಿತ ಉಗ್ರರ ಗುರುತನ್ನು ಬಹಿರಂಗಪಡಿಸಿದ್ದು, ಅವರು ನಿಷೇಧಿತ ಎಲ್‌ಇಟಿ ಸಂಘಟನೆಗೆ ಸೇರಿದ ಪಾಕಿಸ್ತಾನಿ ಪ್ರಜೆಗಳು ಎಂದು ದೃಢಪಡಿಸಿದ್ದಾರೆ ಎಂದು ಹೇಳಿದೆ (ಏಜೆನ್ಸೀಸ್).